ಹಸಿ ಕಣ್ಣುಗಳಿಗೆ ಸಾಂತ್ವಾನ ನೀಡಬೇಕು

ಗೋಡೆ ಬಣ್ಣ ಕಳೆದುಕೊಂಡು ಸೆರಗು ತಲೆಗೆ ಹೊದ್ದು ಕೂತಿರುವಾಗ ಎಲ್ಲಾ ಮೂಲೆಗಳದೂ ಜೋಂಪು ಹಿಡಿದ ಮೋಹಕ ಸದ್ದು, ಒಂದಷ್ಟು ಕತ್ತಲು ತುಂಡು ತುಂಡಾದ ಬೆಳಕು. ಬಲೆ ಹೆಣೆದು ಅತಿಥಿಗಳ ಉಗುರು ಕಡಿಯುತ್ತಾ ಕಾಯುತಿದ್ದ ಜೇಡಕ್ಕೆ ಬಲೆ ಬಲೆಯೂ ಮುಳ್ಳು ತಂತಿ, ಮೊನ್ನೆ ಸಿಕ್ಕವರನ್ನೆಲ್ಲಾ ಉಂಡೆ ಕಟ್ಟಿ ಅಡುಗೇ ಮನೆಯಲ್ಲಿ ನೇತು ಬಿಟ್ಟಿದೆ, ಜೇಡದುಂಡೆಯಲ್ಲಿ ಯಾರದೂ ಅಳು ಸದ್ದು ಕೇಳಿಸುತ್ತಿಲ್ಲ ಉಸಿರು ಬಿಕರಿಗಿಟ್ಟಿದೆ. ಅಲ್ಲಿ ಕಿಟಕಿಯೊಳಗಿಂದ ಬಿದ್ದು ಗೋಡೆಗೆ ಆನಿಕೊಂಡಿದ್ದ ನೆರಳುಗಳಲ್ಲಿ ಅಗೋ ಇಷ್ಟುದ್ದ ಕೋರೆಹಲ್ಲುಗಳು ಸಾಣೆ ಹಿಡಿದಿದ್ದಷ್ಟು ಹೊಳಪು, ನಾಲಿಗೆಯಂಚಿಗೆ ಅಂಟಿಕೊಂಡಿದ್ದ ರಕ್ತವನ್ನು ಸೊರಕ್ಕನೆ ಎಳೆದುಕೊಂಡ ಸದ್ದು ಇದೇ ತಾನೆ ಕೇಳಿದೆ, ಅಗೋ ಗೋರಿಗಳಲ್ಲಿ ಮಲಗಿದ್ದಾರೆ ಎಸೆದಿರುವ ಹೂವುಗಳ ಮೇಲೆ ಸಂಬಂಧಿಕರ ಕಣ್ಣೀರಿದೆ, ಬಿಸಿಲಿಗೆ ಆವಿಯಾಗುವ ಮುನ್ನ ಆ ಕಣ್ಣುಗಳಿಗೆ ಸಾಂತ್ವಾನ ನೀಡಬೇಕು. ಪದ್ಯಕ್ಕೆ ನಗಿಸುವ ತಾಕತ್ತಿದೆಯೇ ಹೊರತು ಕಣ್ಣೊರೆಸುವ ತಾಕತ್ತಿಲ್ಲವೆಂದು ನನಗೂ ಗೊತ್ತು ಪೆನ್ನು ಹಾಳೆ ಇರುವ ನಾನು ಇನ್ನೇನು ಮಾಡಿಯಾನು.. -ಪ್ರವರ