ಹೆಣಗಳಿಗೆ ಪವಿತ್ರ ಗಂಗೆ ಸ್ವರ್ಗದ ಟಿಕೇಟು ಕೊಡುತಿದ್ದಾಳೆ

ಎಲ್ಲೆಲ್ಲಿಂದಲೋ ಕಲೆತು ಹರಿದಿದ್ದ ನೀರದು,
ನದಿಯಂತೆ, ಪವಿತ್ರವಂತೆ ಯಾರೋ ಹೇಳಿದ್ದು
ನಾನು ನಿಮ್ಮಂತೆಯೇ ಕೇಳಿದ್ದು

ನದಿಯೆಂದ ಮೇಲೆ ತಟವಿಲ್ಲದಿದ್ದರೆ ಹೇಗೆ!
ಕಣ್ಣಿಗೆಟುಕುವ ಅನತಿ ದೂರದವರೆಗೂ
ಕಲ್ಲು ಚಪ್ಪಡಿಗಳ ಹಾಸಿ ಮಾಡಿದ್ದ ದಂಡೆಯದು.

ಪವಿತ್ರವೆಂದ ಮೇಲೆ ದಿನಕ್ಕೆ ನಾಲ್ಕುಬಾರಿ
ಮುಳುಗಿ ಏಳದಿದ್ದರೆ ಹೇಗೆ,
ಗಂಟೆ ನಾದವ ಕೆಳುತಿದ್ದ ದೇವರನೊಬ್ಬ ಬಿಟ್ಟು
ಮಿಕ್ಕೆಲ್ಲರೂ ಮಿಂದೆದ್ದು ಮಾಡಿದ ಪಾಪಗಳ
ನೀರಿನೊಳಗೇ ಕರಗಿಸ ಬಿಡುತಿದ್ದಾರೆ,
ಬಾಯಿಗೆ ಹೋಲ್ ಸೇಲಾಗಿ ಸಿಕ್ಕ ದೇವರುಗಳ
ಜಪಿಸುತ್ತಾ,
ಪುಣ್ಯಗಳ ಮೈಗಂಟಿಸಿಕೊಳುತಿದ್ದಾರೆ
ದುಂಬಾಲು ಬಿದ್ದು.

ದುಂಡಗೆ ಚಕ್ಕಳಮುಕ್ಕಳ ಹಾಕಿಕೊಂಡು
ಅನ್ನದುಂಡೆಗಳ ಹಿಡಿದು ಕೂತಿದ್ದಾರೆ,
ಪೂಜಾರಿ ಹೇಳಿಕೊಡುತಿದ್ದ ಗೋತ್ರದಲ್ಲಿ ಪಿತೃಗಳ ಮಂತ್ರ
ಕಂಪನಕ್ಕೆ ಕಾಗೆಗಳು ಮೇಲೆ ಹಾರುತಿದ್ದವು
ಬಿಡುವ ಪಿಂಡಕ್ಕೆ ಹಸಿದುಕೊಂಡು,

ಅರ್ರೆ! ಮಣ್ಣಬಿಟ್ಟು ನೀರಿನಲ್ಲಿ ಎಸೆದಿದ್ದಾರಲ್ಲಾ ಹೆಣಗಳ!
ಅವೆಲ್ಲಾ ಅರೆಬರೆ ಕೊಳೆತಿವೆ
ದೋಣಿಯ ಹುಟ್ಟು ಹಾಕುತಿದ್ದಾರೆ
ಮೂಗು ಮುಚ್ಚಿಕೊಂಡು,
ಹುಟ್ಟು ಹಾಕುತಿದ್ದದ್ದು ನೀರಿಗಲ್ಲ
ಅಡ್ಡ ಬರುತಿದ್ದ ಅರೆ ಬರೆ ಹೆಣಗಳ ಪಕ್ಕಕ್ಕೆ ಸರಿಸಲು
ಹೆಣಗಳ ಜೊತೆ ತೇಲುತಿದ್ದದ್ದು ಒಂದಷ್ಟು ಮೀನುಗಳು.

ಸತ್ತವರಿಗೆ ಇಲ್ಲಿಂದ ಸ್ವರ್ಗಕ್ಕೆ
ನೇರ ಟಿಕೇಟಂತೆ,
ಕೊಳೆತು ನಾರುತ್ತಿರುವ ಹೆಣಗಳ
ಚಹರೆ ತಿಳಿಯುತ್ತಿಲ್ಲ
ದೇವರೂ ಮೂಗು ಮುಚ್ಚಿಕೊಂಡು ಹೆಣಗಳ
ತಿರುವಿ ಹಾಕುತ್ತಿರಬೇಕು ಸ್ವರ್ಗಕ್ಕೆ ಕರೆದೊಯ್ಯಲು..
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ