Posts

Showing posts from June, 2013

ಆಕೆಯೊಡೆತನಕ್ಕೆ ಇನ್ನಷ್ಟೂ ಅಮಲು

ವಿರಹಗಳು ಕಣ್ಣುಗಳ   ರೆಪ್ಪೆಯಂಚಿಗೆ ಕೂತು ಅಣಕಿಸುತ್ತವೆ; ಕಪ್ಪು ಮಸೂರದ ಹಿಂದೆ ಮೂಡಿದ್ದೇ ಚಿತ್ರಗಳು,  ಗದ್ದದಿಂದ ಜಾರುವ ಬೆವರ ಹನಿ ಮನಸ್ಸನ್ನು ನೇವರಿಸುವ ಬೆರಳು, ಬಾಯಿ ಒಣಗುತ್ತದೆ ನಾಲಿಗೆಗೆ ತ್ಯಾಪೆ ಹಚ್ಚುವ ಕೆಲಸ, ಮಳೆ ಬಂದಿದ್ದರೆ ಮಣ್ಣು ಹಸಿಯಿರಬೇಕು, ಹಾವ ದೇಹದ ತುಟಿ, ಸರಿದಾಡುವ ಪರಿಗೆ ಬೆರಗು. ಕುಹಕವಾಡುವ ಬಾಟಲಿಗಳು ಸದ್ಯ ಖಾಲಿ, ನಶೆಗೆ ಕುಡಿಯಲೇ ಬೇಕೆಂದಿಲ್ಲ ಮೈಮೇಲೆ ಜಾರಿ ಬಿದ್ದ ಬೆವರ ವಾಸನೆಯಿದೆ, ಆಕೆಯೊಡೆತನಕ್ಕೆ ಇನ್ನಷ್ಟೂ ಅಮಲು. ಕಣ್ಣು ಮುಚ್ಚುತ್ತಲೇ ನೀಳ ಕೂದಲು ಮುಖದ ಮೇಲೆ ಕಚಗುಳಿ ಇಟ್ಟಂತೆ ಭಾಸ; ಕತ್ತಲಿರಬಹುದು ರಾತ್ರಿಯಿಡೀ ಕಣ್ಣುಗಳು ವಯಸಿನಡಿಯಾಳು. ಪರಿಮಿತ ಚಂದಿರ ಅಪರಿಮಿತ ಕತ್ತಲು ಪರಿಥಿಗಳ ನಡುವೆ ನಾನು ನರಳುತ್ತೇನೆ, ಮುಲುಗುತ್ತೇನೆ. -ಪ್ರವರ ಕೊಟ್ಟೂರು

ಗಾಂಧಾರಿಯ ಗರ್ಭ ಬಾಡಿಗೆಗೆ ಸಿಕ್ಕಂತಿದೆ

ಚಾಚಿದಷ್ಟೂ ಮಿಥ್ಯ ಪಾದಗಳೇ ಜೋಡು ಅಲೆಗಳು ಚದುರುತ್ತಲೇ ಗುರಿ ಅನತಿ ದೂರ, ನೆತ್ತಿಗೆ ಕಾಲು ಹುಟ್ಟಿವೆ ಗಾಂಧಾರಿಯ ಗರ್ಭ ಬಾಡಿಗೆಗೆ  ಸಿಕ್ಕಿದಂತಿದೆ, ಉಳಿವವೆಷ್ಟೋ, ಬಲಿವವೆಷ್ಟೋ ಹಾಯಿದೋಣಿಯ ನೆನಪಿನಲ್ಲೂ ಜಾಗ ಸಿಕ್ಕಲಿಲ್ಲ, ಆಕ್ರೋಶಕ್ಕೆ ಪೊರೆ ಬಿಡಬೇಕು ಮುಳ್ಳು ಬೇಲಿ ಹುಡುಕುವಾಗ ಸಿಕ್ಕದ್ದು ಮೋಡ ತುಂಬಿದ ಕಪ್ಪ ಬಣ್ಣದಾಗಸ, ತೆರಚಿದ ಗಾಯಗಳನ್ನು ತೆರೆದಿಟ್ಟರೆ ವಿಕೃತ ಮನಸ್ಸು, ಅದೆಷ್ಟು ಯೋನಿಗಳು ಅದೆಷ್ಟು ಪ್ರಸವಗಳು ಕರುಳು ಬಳ್ಳಿಯಿಂದ ಜೀಕುವ ರಕುತಕ್ಕೆ ಬಣ್ಣ ಅಂಟುವುದೇ ಇಲ್ಲ, ಬೆಳ್ಳಗಿದ್ದ ರಗ್ಗು; ಇಂಚು ಇಂಚಾಗಿ ಕರಗೀತೆ ಹೊರತು ಕೆಂಪುಗಟ್ಟಲೇ ಇಲ್ಲ ಇನ್ನೆಲ್ಲಿಯ ಮೈಲಿಗೆಯ ಮಾತು! ದಿನ ದಿನವೂ ತಣ್ಣಗಾಗುತ್ತಲೇ ಹೋಗುವ ದೇಹದಲ್ಲಿ ನಾಡಿಗಳಿಲ್ಲ, ಹಾಗೆ ಬಡಿವಾರದ ಮುಖಗಳೂ ಇಲ್ಲ, ಸಾವುಗಳೆಡೆಗೆ ತಾಟಗಿತ್ತಿಯ ನಗೂ ಸಹ ನಗುವುದಿಲ್ಲ, ನಿರ್ವಿಕಾರದ ಹುಟ್ಟು ನಿರ್ವಿಕಾರದ ಸಾವು -ಪ್ರವರ ಕೊಟ್ಟೂ