ಬುದ್ಧನಿಗೊಂದು ಸವಾಲು

ದಯಮಾಡಿ ತುಟಿ ಬಿರಿದು
ನಗಬೇಡ ಬುದ್ಧ
ನಗಬೇಡ,
ನಿನ್ನಂತಿರಬೇಕೆಂದು ಆಸೆಪಟ್ಟರೂ
ನಾನು ಹಾಗೆ ಇರಲಾರೆ
ಎಲ್ಲವನ್ನೂ ಸಹಿಸಿಕೊಂಡು
ಕಣ್ಮುಚ್ಚಿಕೊಂಡು

ಬೋಧಿ ವೃಕ್ಷದಡಿ ಕುಳಿತು
ಹೆಂಡತಿ ಮಕ್ಕಳು ರಾಜ ವೈಭೋಗವನ್ನೆಲ್ಲಾ
ತೊರೆದು ವರುಷಗಟ್ಟಲೇ
ಧ್ಯಾನ ಮಾಡಿದಷ್ಟು ಸುಲಭವಲ್ಲ
ಇಲ್ಲಿಯ ಬದುಕು,

ನಿನ್ನ ಕಾಲ ಮುಗಿದು
ಅನುಯಾಯಿಗಳೆನ್ನಿಸಿಕೊಂಡವರೆಲ್ಲಾ
ಮಣ್ಣಿನಾಳಕ್ಕೆ ಹೋಗಿದ್ದಾರೆ
ಲೆಕ್ಕ ಇಡಲು ನಾನು ಇರಲಿಲ್ಲ,
ನಿನ್ನ ಕಪಾಲದಲ್ಲಿ ಬಿಕ್ಷೆ ಬೇಡಿಕೊಂಡು
ಬಂದರೂ ತುತ್ತು ಕೂಳೂ ಸಿಗುವುದಿಲ್ಲ,
ನಿನ್ನ ಸಿದ್ಧಾಂತಗಳನ್ನು ನಂಬಿಕೊಂಡವರು
ಗಾಳಿಗೆ ತೂರಿ ಹೋಗಿದ್ದಾರೆ
ಕರಗಿದ ಮೇಲೆ ಯಾರಿಗೂ
ಕಾಣ ಸಿಗುವುದಿಲ್ಲ
ತನ್ನನ್ನು ತಾನೆ ಮುಟ್ಟಿ ನೋಡಿಕೊಳ್ಳಬೇಕು

ನಿನ್ನ ದೇಹ ಕರಗಿ
ಶತಮಾನಗಳೇ ಗತಿಸಿವೆ,
ಗಾಯತ್ರಿ ಮಂತ್ರಗಳು
ಒಂದಷ್ಟು ಜನರ ಕಂಕುಳಲ್ಲಿ
ಬಾಯಲ್ಲಿ ಬಿಟ್ಟರೆ,
ಶಾಂತಿ ಮಂತ್ರ ಈಗ ಪಳೆಯುಳಿಕೆ ಅಷ್ಟೆ
ಹಾಗೇನಾದರೂ ನಾನು ಬುದ್ಧನಂತಾಗುತ್ತೇನೆಂದರೆ
ಅಂಡು ಬಡಿದುಕೊಂಡು ನಗುತ್ತಾರೆ.

ನೀನು ಸಾರ್ವಕಾಲಿಕವೆಂದು
ಓದಿದ್ದು ಬಿಟ್ಟರೆ ನಿಜಕ್ಕೆ ನನಗೆ
ಹಾಗೆನ್ನಿಸಲೇ ಇಲ್ಲ,
ಅನ್ನಿಸುವುದೂ ಇಲ್ಲ,
ಒಮ್ಮೆ ಹಾಗಾಗಿದ್ದರೆ ಪ್ರಪಂಚ
ಸ್ವರ್ಗವೆನ್ನಿಸಿಬಿಡುತಿತ್ತು,
ಅತಿಮಾನುಷ ಸಾವುಗಳಿಲ್ಲದೇ
ಆಪ್ತವೆನ್ನಿಸಿಬಿಡುತಿತ್ತು,

ಬೇಕಿದ್ದರೊಮ್ಮೆ ಇಲ್ಲಿ ಬದುಕಿ ನೋಡು
ನೀನು ನೀನಾಗಿಯೇ ಇದ್ದರೆ
ಖಂಡಿತಾ ನಾನು ನೀನಾಗುತ್ತೇನೆ
ಇಲ್ಲವಾದಲ್ಲಿ
ನೀನು ಆ ನಗುವ ತ್ಯಜಿಸಬೇಕು
-ಪ್ರವರ






Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ