Posts

Showing posts from March, 2012

ಗಾಂಧಿ ಸ್ಮೈಲ್

Image
ನಮ್ಮೂರಿನ ಸರ್ಕಲ್ಲಿನಲಿ ಸಿಮೆಂಟಿನ ಗಾಂಧಿ ಅದೇ ಮಾಸಲು ನಗು ಹೊತ್ತು ನಿಂತಿದ್ದಾನೆ, ಪಕ್ಕದ ಮರದ ರೆಂಬೆ ಬಿದ್ದು ಮೊಂಡಾದ ಮೂಗನ್ನೂ.... ಪಾರಿವಾಳಗಳಿಗೇನು ಗೊತ್ತು ಪಾಪ ಗಾಂಧಿಯ ತಲೆ ಎಂದು, ಹಿಕ್ಕೆ ಹಾಕಿದ ಗುರುತಿಗೆ ಯುವಕ ಮೋಹನದಾಸ, ಹಿಂದಿನ ಆಗಷ್ಟ್ ಹದಿನೈದರ ಒಣಗಿದ ಹಾರ ಇನ್ನೂ ಕೊರಳಲ್ಲಿ ನೇತಾಡುತ್ತಿದೆ, ಹಮಾಲಿಗಳ ಮಧ್ಯಾನದ ಉರಿಬಿಸಿಲಿನ ತಂಪು ನಿದ್ದೆಗೆ ಜಾಗವಾಗಿದೆಯಾದರೂ ಸುತ್ತಲೂ ಉಗಿದ ತಂಬಾಕಿನ ರಂಗೋಲಿ..... ಹಾಗೆ ಹಳೆಯ ಇಸ್ಪೇಟಿನ ಎಲೆಗಳೂ..... ಇಷ್ಟೆಲ್ಲದರ ಮೇಲೂ ನಮ್ಮ ರಾಷ್ಟ್ರಪಿತ ನಗುತಿದ್ದಾನೆ, ಎಲ್ಲರೂರಿನ ಸರ್ಕಲ್ಲಿನಲ್ಲೂ, ಹಳೆ-ಹೊಸ ನೋಟಿನಲ್ಲೂ, ನಗುತಿದ್ದಾನೆ ಗಾಂಧಿ ನಗುತಿದ್ದಾನೆ.

"ಬುರ್ಖಾ ಹುಡುಗಿ"

Image
ಸಂಜೆಯಾಗಲೇ ಧಗೆ ಇಳಿದಾಗಿತ್ತು, ಅತ್ತಿತ್ತ ಓಡಾಡಿಕೊಂಡಿದ್ದ ಮೋಡಗಳು ಒಂದಕ್ಕೊಂದು ಅಪ್ಪಿ ಪಿಸುಗುಡುತಿದ್ದವು, ಬಸ್ಸಿನ ಕಿಡಕಿಯಿಂದ ನುಗ್ಗುತಿದ್ದ ನುಗ್ಗಿ ಬರುತಿದ್ದ ಗಾಳಿ ಬೆವರಿದ್ದ ಮೈಗೆ ತಂಪೆರೆಯುತಿತ್ತು, ಟ್ರ್ಯಾಫಿಕ್ಕಿನಲ್ಲಿ ಸಿಕ್ಕಿ ಬಸ್ಸು ಮುಂದೆ ಸಾಗಲು ತುಸು ತಡವರಿಸುತಿತ್ತು, ಹಸಿರು ನಿಶಾನೆಗೆ ಕಾಯುತ್ತಾ ಕೂಗಾಡುತಿತ್ತು. ಥಟ್ಟನೇ ಕಂಡವಳು ಮುಸಲ್ಮಾನರ ಹುಡುಗಿ, ಬುರ್ಖಾವ ತೊಟ್ಟು ನವಿಲಿನಾ ನಡಿಗಿ, ಕಪ್ಪು ಕಾಡಿಗೆ ಹುಬ್ಬು ಬಿಲ್ಲದು, ಕಂದು ಕಣ್ಣಿನ ಬಣ್ಣವು ತುಂಬು ಚಂದ್ರನ ಬಿಳಿಯ ಕದ್ದು ಮುಖವು ನೋಡಲು ಸ್ವರ್ಗವು. ಯಾತಕಾ ಮರೆಯು ಹುಡುಗಿ, ತೆಗೆದಿಡು ಕೆಳಗೇ ಮುಸುಕನು, ನನ್ನ ಹಾಗೆ ನಿನ್ನ ನೋಡಿ ಪುಳಕಗೊಳ್ಳಲಿ ಮುದುಕನು (ಕಾಲೇಜಿಂದ ಬರುವಾಗ ಒಂದು ಹುಡುಗಿಯ ನೋಡಿ ಅನ್ನಿಸಿದ್ದು ಹೀಗೆ.....)

ಕಟ್ಟೆ ಒಂಟಿಯಾಗಿದೆ...

Image
ಒಗುರು ಒಗರಾದ ಬದುಕು, ಬಿಕ್ಕಳಿಕೆ ಆಡುವಾ ಪ್ರತಿ ಪದಕು, ಉಸುರುಗಟ್ಟುವ ಆಸೆ, ಗಾಳಿಗೆ ಕಷ್ಟವಾಗಿದೆ ಅಡ್ಡಾಡಲು ಒಳ-ಹೊರಕೂ. ಚಾಪೆ ಮಡಿಚಿಯಾಗಿದೆ, ನಗ್ಗಿದ್ದ ತಟ್ಟೆ ಲೋಟ ತೆಗೆದಿಟ್ಟಾಗಿದೆ, ಮನೆ ಹೊರಗೆ ನನಗಾಗಿದ್ದ ಕಟ್ಟೆಯಿನ್ನು ಒಂಟಿಯಾಗಿದೆ. ಎಲ್ಲರೂ ನನ್ನಿಂದ ದೂರಾದರೂ ಕೆಮ್ಮು-ದಮ್ಮುಗಳು ಮಾತ್ರ ಬಿಡದೇ ಗಟ್ಟಿಯಾಗಿ ಅಪ್ಪಿಕೊಂಡಿವೆ. ಹಾಗೆ ಕಣ್ಣೊಳಗಿದ್ದ ಪಿಸುರೂ.......

ಹೀಗೊಂದು ಹಗಲುಗನಸು

Image
ಉಸ್ಸಪ್ಪಾ!!! ಯಾವ್ ಸೀಮೆ ಕಾಲೇಜ್ ದೇವ್ರು, ಬೆಳಿಗ್ಗೆಯಿಂದ ಬೆಂಚ್ ಮೇಲೆ ಅಂಡು ಊರಿದೋರು ನಡುವೆ ಊಟಕ್ಕೆ ಉಚ್ಚೆಗೆ ಎದ್ದಿದ್ದು ಬಿಟ್ಟರೆ ಸಾಯಂಕಾಲವೇ ಎದ್ದಿದ್ದು, ಸಾಫ್ಟುವೇರು ಅದು ಇದು ಅಂತ ಕ್ಲಾಸಿನಲ್ಲಿ ಕೇಳಿ ಕೇಳಿ ತಲೆ ಗಿರಗಿಟ್ಲೆ ಹೊಡಿತಿತ್ತು, ಓದೋಕಂತ ಬೆಂಗಳೂರಿಗೆ ಅಪ್ಪ ದಬ್ಬಿದ್ದರು, ನಾನೂ ಕೂಡ ಸಾಫ್ಟ್ವೇರಲ್ಲಿ ಕಡೆದು ಗುಡ್ಡೆ ಹಾಕುವ ಕನಸು ಹೊತ್ತು ಬೆಂಗ್ಳೂರೆಂಬ ಮಾಯಾನಗರಿಯ ಒಡಲು ಸೇರಿದ್ದೆ. ಸಂಜೆ ಹೊತ್ತಾಗುತ್ತಿದ್ದರು ಬಿಸಿಲು ಚುರ್ರ್ ಅನ್ನುವಂತಿತ್ತು, ಎಮ್.ಸಿ.ಎ ಸೇರಿದ್ದಕ್ಕೊ, ಸಬ್ಜೆಕ್ಟು ತಲೆಗೆ ಹತ್ತದಿದ್ದಕ್ಕೊ, ಅಥವಾ ಬಿಸಿಲು ಚುರ್ರ್ ಅನ್ನುತ್ತಿದ್ದಕ್ಕೊ ಏನೋ ಒಂಥರಾ ಬೇಜಾರಾಗಿ ರೂಮು ಹೊಕ್ಕಿದೆ. ಮಂಚದ ತುಂಬ ಕಸದಂತೆ ಬಟ್ಟೆಗಳು, ಓದದಿದ್ದರೂ ಹರಡಿದ್ದ ಪುಸ್ತಕಗಳು, ಇನ್ನೂ ಕುಯ್ಯೊ ಮರ್ರೋ ಎಂದು ಸದ್ದು ಹೊರಡಿಸುತ್ತಾ ತಿರುಗುತಿದ್ದ ಫ್ಯಾನು ಮೂಡು ಇನ್ನೂ ಆಫ್ ಆಗಲು ಇಷ್ಟು ಸಾಕಲ್ಲವೇ!!!! ಗೋಡೆಗೊರಗಿ ಹಂಗೆ ಸ್ವಲ್ಪ ರಿಲೀಫ್ ಗೆಂದು ಕಣ್ಣು ಮುಚ್ಚಿದೆ, ಮನಸ್ಸು ಎಲ್ಲೆಲ್ಲೋ ಓಡುತ್ತಿದೆ, ಸೂರ್ಯನ ಬೆಳಕಿಗಿಂತ ವೇಗವಾಗಿ!!!!!! ಅದೆಷ್ಟೋ ದೂರ ಬಂದಿದ್ದೇನೆ, ರೆಕ್ಕೆ ಇಲ್ಲದೇ ಹಾರುತ್ತಿದ್ದೇನೆ.... ಕಣ್ಣಿಗೆಟುಕಿದ ದೂರಕ್ಕೆ ದೃಷ್ಠಿ ಹಾಯಿಸಿದಷ್ಟು ಚೂರೇ ಚೂರು ಹಸುರು ಕಾಣ ಸಿಗುತ್ತಿಲ್ಲ, ಬರಡು ಭೂಮಿ ಬಾಯ್ತೆರೆದು ಬೆಂಕಿಯುಗುಳಿದ ಹಾಗೆನಿಸುತ್ತಿದೆ, ಹಾವು ಬುಸುಗುಡುವ ಸದ್ದು ಬಿಸಿ ಗಾಳಿಯ