ಗೌತಮನ ಘಾಟುವಾಸನೆ

ನಾಲ್ಕು ಗೋಡೆಗಳು
ನಾಲ್ಕು ಮೂಲೆಗಳು
ಜೇಡರಬಲೆಯೊಳಗಿಂದ ನುಗ್ಗಿದ್ದ
ಧೂಳು,
ನನ್ನ ಮುಖದ ಮೇಲೊಷ್ಟು
ನೋವ ಮುಚ್ಚುವ ಕತ್ತಲು,
ಹಿಡಿ ಸುಣ್ಣದ ಪುಡಿ
ತೂರಿದಂತೆ ಬೆಳಕು, ಸುತ್ತಲೂ

ನನ್ನನ್ನೇ ದುರುಗುಟ್ಟುತಿದ್ದ
ನೆರಳುಗಳೇ
ಮೆಲ್ಲಗೆ ಮೂರ್ನಾಲ್ಕು ಬಾರಿ
ಪಿಸುನುಡಿದಂತೆ ಧೂಳ ಕಣಗಳ ನಡುವೆ
"ಸತ್ತರೆ ಮಣ್ಣ ಸೇರುತ್ತಾನೆ
ಕೊಳೆಯದಿದ್ದರೆ ಕೊಳ್ಳಿ ಇಡುವ
ಬೂದಿಯಾಗಲಿ ಮೂಳೆ"

ಬಾಗಿಲ ಕಿಂಡಿಯಲ್ಲಿ
ತೂರಿ ಬಂದ ತಂಡಿ ಗಾಳಿ
ಎದೆಯ ಬೆವರ ಬೆನ್ನ ನೇವರಿಸಿದ
ಸಾಂತ್ವಾನ,
ಜೊಲ್ಲು ಇಳಿಸುತ್ತಾ ಅಡಗಿದ್ದ
ಜೇಡರ ಹುಳದ ಬಲೆ
ತೊಟ್ಟಿಲಂತಿತ್ತು,
ಬಿದ್ದವರ ದನಿಯೂ ಕೇಳುತಿಲ್ಲ
ನಿದ್ದೆ ಹೋಗಿರಬೇಕು.

ನಾನಿನ್ನು ಮಲಗಿಲ್ಲ
ಮಾತುಗಳ ಪೀಕಲಾಟಕ್ಕೆ
ಶರಣಾಗಿ,
ಮೌನವಹಿಸಿ ಗೋಡೆಗೆ ಬೆನ್ನು ಮಾಡಿ
ಕಣ್ಣಾಲಿಗಳ ದಟ್ಟ ನೋಟ
ಹರವಿದ್ದೇನೆ,
ನೆಟ್ಟಗೆ ನಿಗುರಿ ಕೋವಿ ಹಿಡಿದು
ನಿಂತವರೆಡೆಗೆ ಪಾರಿವಾಳ ತೂರಲು
-ಪ್ರವರ ಕೊಟ್ಟೂರು

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ