Posts

Showing posts from February, 2011

ದತ್ತು ಪಡೆಯಿರಿ ನನ್ನ ಕೊಬ್ಬಿದ ಕನಸುಗಳ....

Image
ಕೈಗೆಟುಕದಿರುವ ಒಂದಿಷ್ಟು ಕನಸುಗಳಿವೆ ಯಾರಾದರು ದತ್ತು ತೆಗೆದುಕೊಳ್ಳಿ ನನ್ನಿಂದ ಎಲ್ಲವೂ ನನಸಾಗಲು ಹಾಂ! ಎಂದು ಒಪ್ಪಿರುವಾಗ ಇವಷ್ಟೇ, ನನ್ನ ಸತಾಯಿಸುತಿವೆ...... ನಾಲ್ಕೈದಿರಬಹುದು ಅಷ್ಟೆ, ಸ್ವಲ್ಪ ಪ್ರೀತಿ ತೋರಿದ್ದಕ್ಕೆ ಕೊಬ್ಬಿ ಕೊರಡಾಗಿವೆ, ಒದ್ದು ಬುದ್ದಿ ಕಲಿಸೋಣವೆಂದರೆ ಮನಸ್ಸೇ ಬರುತ್ತಿಲ್ಲ ಪ್ರೀತಿಯಿಂದ ಸಲುಹಿರುವೆನಲ್ಲವೆ......... ಸಾವಿರಾರು ಬಣ್ಣಗಳ ತುಂಬಿರುವೆ ಹಗಲಿರುಳೆನ್ನದೆ ಚಿತ್ತಾರವಾಗಿಸಿಹೆ ಕಪ್ಪು ಕನಸುಗಳಿಗೆ ಬಣ್ಣ ಕೊಡುವುದೆಂದರೆ ಸುಮ್ಮನೆಯೇ,..... ಸಾವಿರಾರು ಸುಂದರಿಯರು ಬೆವರು ಸುರಿಸಿದ್ದಾರೆ ನನ್ನ ಬಿಸಿಲ ಬಯಲ ನಾಡಿನ ಮುಗುದ ಜನಗಳ ಮುಗುಳು ನಗುವಿನ ಹಸನಾದ ಹರವಿದೆ, ಇವರೆಲ್ಲರ ಕರೆಸಿ ಹೇಳಿ ಮಾಡಿಸಿದ ಕಣ್ಣ ಕನಸುಗಳಿಂದು ನನಸಾಗುತ್ತಿಲ್ಲ..... ಸರಿ ದಾರಿ ತೋರಿಸಿ ನನ ಕನಸುಗಳ ಕೈ ಹಿಡಿಯಿರಿ...... ನಿಮ್ಮ ಕನಸುಗಳೆಂದು ಭಾವಿಸಿರಿ ನಿಮ್ಮ ಮನಸುಗಳೆಂದು ಪೋಷಿಸಿರಿ....

ನದಿಯ ತಟದಲ್ಲೊಂದು ಬೋಳು ಮರ

Image
ನದಿಯ ತಟದಲ್ಲೊಂದು ಬೋಳು ಬೋಳಾದ ಮರ ಅದರ ಬುಡದಲ್ಲೊಂದಿಷ್ಟು ಹಸಿರು ಹುಲ್ಲು ಬೋಳಾದ ಮರಕ್ಕೆ ಹತ್ತಾರು ಕಾಗೆ-ಗುಬ್ಬಿ ಗೂಡುಗಳು ನದಿಯ ದಂಡೆಯಲ್ಲಿದ್ದರೂ ನೀರುಣ್ಣದ ಮರ ಎಷ್ಟೇ ಗಾಳಿ ಬೀಸಿದರೂ ನಿಂತಿದೆ ಅಲ್ಲಾಡದೆ ಸುಮಾರು ವರುಷಗಳಾಯಿತು ಹಾಗೆ ನಿಂತು ಯಾರನ್ನೋ ಕಾಯುತ್ತಿರುವಂತಿದೆ ಹಸಿರುಡಲೊಲ್ಲದು, ಇರಬೇಕಂತೆ ಹೀಗೆ ವಿಧವೆಯಂತೆ ಯಾರದೋ ಮನೆಯ ಹಬ್ಬದಡುಗೆಗೆ ಉರಿ ಹಚ್ಚಿದ ಒಲೆಯ ಕಟ್ಟಿಗೆಯಾಗಬೇಕಂತೆ ಅದಕ್ಕೆ ಈ ತಪಸ್ಸು....

ನಾಚುತ್ತಿದೆ ನೂರು ದಾಟಿದ ಮುದುಕಿ

Image
ಕುಣಕಿ ಚೀಲದಲಿ ನಾಲ್ಕೈದು ಎಲೆ, ಪುಡಿಯಡಿಕೆ, ಚಿಕ್ಕ ದಬ್ಬಿಯಲ್ಲೋಸ್ಟು ನುಣ್ಣನೆಯ ಸುಣ್ಣ.... ಬೆಳ್ಳಿ ಕೂದಲ ಹೊದಿಕೆ ತಲೆಗೆ ನೂರಾರು ಹೊಲಿಗೆ ಹಾಕಿರುವ ಸೀರೆ ಮುಚ್ಚಲು ಸುಕ್ಕುಗಟ್ಟಿದ ಮೈಯ್ಯ... ಬಾಯಿ, ಇಲಿಯ ಬಿಲದಂತಿದೆ ಹುಡುಕಾಡಿದರು ಒಂದೇ ಒಂದು ಹಲ್ಲಿಲ್ಲ... ತನ್ನ ಗಂಡ ಪ್ರೀತಿಯಿಂದ ಕೊಟ್ಟಿದ್ದ ಬೆಳ್ಳಿ ಕೈಗಡಗಗಳು ಹಾಗೆಯೇ ಫಳಗುಡುತ್ತಿವೆ, ಸವೆಯಬಾರದೆಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿವೆ.... ಗಂಡನ ಹೆಸರ ಕೇಳಿದರೆ! ಇನ್ನು ನಾಚುತ್ತಿದೆ ನೂರು ದಾಟಿದ ಮುದುಕಿ, ಮೊನ್ನೆ ಹತ್ತು ತುಂಬಿದ ಮರಿ ಮೊಮ್ಮಗನ ಮದುವೆ ನೋಡಬೇಕಂತೆ.... ಅಬ್ಬಬ್ಬಾ ಬದುಕುವ ಪ್ರೀತಿಯೆಂದರೆ ಇದು, ಈಗಿನವರು ನಾವುಗಳು ಅರವತ್ತಕ್ಕೆ ಸುಸ್ತೋ ಸುಸ್ತು... (ಮನೆಯಲ್ಲಿ ಇದ್ದ ಮೂರು ಅಜ್ಜಿಗಳಲ್ಲಿ, ಒಬ್ಬಜ್ಜಿಯ ಬದುಕು ಹೀಗೆ)