Posts

Showing posts from November, 2012

ನಾಚಿಕೆ ಕಣ್ಣು ರೆಪ್ಪೆ ಮುಚ್ಚಿದ ಸದ್ದು

Image
ನಿನ್ನೆ ರಾತ್ರಿ ನೆನಪಿದೆಯೆ ಗೆಳತಿ ಹಾಸಿಗೆಯ ಮೇಲಿದ್ದ ಏರುಸಿರು, ಕತ್ತಲೂ ನಾಚುವಂಥ ಪಿಸುಮಾತು ನಾ ನಿನಗೆ ಹೇಳಿದ್ದು ನೀ ನನಗೆ ಹೇಳಿದ್ದು ಮೌನಕ್ಕೆ ಶರಣಾಗಿ ಬಿಸಿಯುಸಿರು ಬಿಡುತ್ತಾ ತುಟಿಯ ಮೆತ್ತಗೆ ಕಚ್ಚಿದ್ದು, ಹಸಿ ಹಸಿ ಮೈಯ ತಬ್ಬಲು ಯಾರೋ ಕಣ್ಣು ರೆಪ್ಪೆಗಳ ಮುಚ್ಚಿದ ಸದ್ದು, ಕತ್ತಲ ಹೊರತು ಇದ್ದದ್ದು ನಾವೇ ತಾನೆ, ನಿನ್ನ ನಾಚಿಕೆ ಇರಬೇಕು! ಮೆಲ್ಲಗೆ ಕದ್ದು ನೋಡುತ್ತಾ ಹೊರ ಜಾರಿದ್ದು ಎದೆ ಮೇಲಿನ ಬೆವರು, ಹೊರಗೆ ಮೈ ಕೊರೆವ ಚಳಿ ಇದ್ದರೂ, ಬೆವೆತ ದೇಹಗಳ ನಡುವೆ ಕೊನೆಗೂ ಸುಟ್ಟದ್ದು ರಾತ್ರಿಯ ಏಕಾಂತವ ಹಿಡಿ ಹಿಡಿಯಾಗಿ ಕಾಡಿದ್ದ ವಿರಹವನ್ನು, ಮತ್ತೆ ನಾಳೆ ಕಾಡಬಹುದೆಂದು ಗೊತ್ತಿದ್ದರೂ, ತಂಡಿ ಗಾಳಿಯು ಸುತ್ತ ಸುತ್ತಿದ್ದರೂ. ರಾತ್ರಿಗೆ ಚಳಿಯ ಮೈಥುನ ಕಣ್ಣೆವೆಯಿಕ್ಕದಂತೆ ಕಾಡಿದ್ದು ಮಾತ್ರ ಸತ್ಯ, ಅಲ್ಲಿಯವರೆಗೂ ಮೈಲಿಗೆಯಾಗಿದ್ದ ದೇಹಗಳು ಮಡಿಗೊಂಡಿದ್ದೇ ರಾತ್ರಿಯಲಿ ಮಿಂದಾಗ. -ಪ್ರವರ

ನನ್ನ ಅನುವಾದ

Image
ನನ್ನನ್ನು ನಾನು ಅನುವಾದಿಸಿಕೊಳ್ಳುತ್ತಿದ್ದೇನೆ, ಗೊತ್ತಿರದ ಪದಗಳನ್ನು ಹುಡುಕಿ ಕೋಶಗಳಲ್ಲಿ, ಕಾಲವನ್ನು ಆಪೋಶನ ತೆಗೆದುಕೊಂಡು, ನೆರಳಿಗೊಮ್ಮೆ ಬಿಸಿಲಿಗೊಮ್ಮೆ ಮುಖವೊಡ್ಡಿ ಕೊಡವಿದರೂ ಪೆನ್ನು ಬರೆಯುತ್ತಿಲ್ಲ, ಬಹುಃಷ ಶಾಯಿ ಇಲ್ಲವೇನೋ. ಅರ್ಥ ಸಿಗದವೊಂದಿಷ್ಟನ್ನು ಯಥಾವತ್ ಹಾಗೆ ಇಳಿಸಿದ್ದೇನೆ ಜೋಪಾನವಾಗಿ ಮಗುವಿನಂತೆ ಅಳುತ್ತಿದ್ದರೂ ಹಾಲುಣಿಸುವಂತಿಲ್ಲ. ಬಾಯಿ ಹೊರಳುತ್ತಿಲ್ಲ ಜೋರಾಗಿ ಓದಿಕೊಳ್ಳಲು ತೊದಲುತ್ತಿದ್ದೇನೆ, ಕನಸುಗಳಾದಿಯಾಗಿ ಅನುವಾದದ ಕೊನೆಯಲ್ಲಿ ನಾನು ನಾನಾಗಿಯೇ ಇದ್ದೇನೆ, ಎಲ್ಲರಿಗೂ ಅರ್ಥವಾದಗಿದ್ದರೂ ಸದ್ಯ ನನಗೆ ನಾನು ಓದುವಂತಾಗಿದ್ದೇನೆ

ಬದುಕು ಸುಡುಗಾಡಲ್ಲದೆ ಮತ್ತೇನು!

Image
ಬದುಕು ಒಂಥರಾ ಸುಡುಗಾಡು, ಮಣ್ಣ ಬದಲಿಗೆ ಬಣ್ಣ ಹೊದ್ದು ಸಿಕ್ಕದ್ದನ್ನೆಲ್ಲಾ ಮೆದ್ದು ಆಕೃತಿಗಳಾಗಿ ಪರದೆಯ ಮೇಲೆ ನಿಲ್ಲುತ್ತೇವೆ, ಆಸೆ ಹುಳುಗಳಿಂದ ಕೊಳೆಯುತ್ತೇವೆ, ಎಲ್ಲೊ ಒಂದೆಡೆ ಮೊಳೆಕೆಯೊಡೆಯುತ್ತೇವೆ, ಮೂಕವಿಸ್ಮಿತ ಕನಸುಗಳ ಮಡಿಚಿಟ್ಟು ಮತ್ತದೇ ಸುಡುಗಾಡು ಬದುಕು, ಅಮೂರ್ತ ಚಿತ್ರ ಕಂಡಾಗಲೂ, ನೋವುಂಡ ದನಿ ಕಿವಿಗೆ ಬಿದ್ದಾಗಲೂ ತಿರುಗೀ ನೋಡದೇ ಬದುಕುತ್ತಿರುವ ಹೆಣಗಳು ನಾವು ಹಾಗಾದರೆ! ಈ ಬದುಕು ಸುಡುಗಾಡಲ್ಲದೇ ಮತ್ತೇನು? ಹೊದ್ದಿರುವ ಬಣ್ಣ ಮಣ್ಣಲ್ಲದೇ ಮತ್ತೇನು? -ಪ್ರವರ

ಆಂತರ್ಯದೊಳಗೊಂದು ಹುಡುಕಾಟ

Image
ಸುಮಾರು ದಿನಗಳಿಂದ ಹುಡುಕುತಿದ್ದೇನೆ, ಸಿಕ್ಕರೂ ಸಿಗಬಹುದೆಂಬ ಆಸೆಗೆ, ಧೂಳು ಹೊತ್ತಿದ್ದ ಪುಸ್ತಕಗಳನೆಲ್ಲಾ ಕೆದಕಿ. ಆತ ನನ್ನ ತಲೆಯನ್ನೇಕೆ ಹೊಕ್ಕಿದ್ದಾನೆ, ಸೊಳ್ಳೆ ಕಡಿತಕ್ಕೆ ಪರಪರನೆ ಕೆರೆದುಕೊಂಡಂತೆ, ಬಾಯಿಗೆ ಕೈ ಹಿಡಿದು, ಘಾಟಕ್ಕೆ ಕೆಮ್ಮಿದಂತೆ, ನನ್ನ ನೆರಳನ್ನೂ ನಾನು ಗಮನಿಸಿರಲಿಲ್ಲ ಇಷ್ಟು ಮತ್ತೆ ಕೋಪ ಯಾರ ಮೇಲೆಂದು ಗೊತ್ತಿಲ್ಲ. ಇದ್ದಕ್ಕಿದ್ದಂತೆ ಶಾಂತತೆ ಕತ್ತಲು ಕವಿದಂತೆ ಈಗ ಕೂತಿದ್ದೇನೆ ಕತ್ತಲಲ್ಲಿ ಯಾರನ್ನೋ ಆಲಿಸುತ್ತಾ ಕಣ್ಣು ಮುಚ್ಚಿ, ಮೇಜಿನ ಮೇಲೆ ಮೆಲ್ಲಗೆ ಉರಿಯುತಿದ್ದ ಮೊಂಬತ್ತಿಯಿಂದ ದೂರ ಕುಳಿತು ಅಸ್ಪುರ್ಶ್ಯನಂತೆ. ಕಣ್ಣು ಬಿಡಲು ಎಲ್ಲವೂ ಮೊದಲಿದ್ದ ಹಾಗೇ ಇವೆ!!!! ವಾಸ್ತವಕ್ಕೆ ಕಣ್ಣು ಕಟ್ಟಿ ಕೂಡ್ರಿಸಿದಂತೆ ಹಚ್ಚಿಟ್ಟ ಮೊಂಬತ್ತಿ ನಾನು ಹುಡುಕುತಿದ್ದ ಬೆತ್ತಲೇ ಬುದ್ಧ -ಪ್ರವರ

ನೀನು ಪಿಸುಗುಟ್ಟಿದ್ದು ಕೊನೆಗೂ ಕೇಳಿಸಲೇ ಇಲ್ಲ

ನೀರು ಸಣ್ಣಗೆ ಸದ್ದು ಮಾಡುತ್ತಾ ಹರಿಯುತಿತ್ತು, ನಿನ್ನ ಅಳುವಿನಂತೆ ಹನಿಗಳೂ ಸಹ ಒದ್ದೆಗೊಂಡಿದ್ದ ಕಣ್ ರೆಪ್ಪೆಗಳೂ ಸಹ ಬೆಳಕ ಚದುರಿಸುತ್ತಾ ಸಾಗಿದ್ದ ಅಲೆಗಳಲ್ಲಿ ನಿನ್ನ ಮನಸ್ಸು ಬಿಡದೇ ಪ್ರತಿಫಲಿಸುತಿತ್ತು ಅದು ಏಕಾಂತವೋ ಅಂತರ್ ಧ್ಯಾನದ ಮೌನವೋ ನೋಡುತ್ತಾ ನಿಂತವ ನಾನು ಮತ್ತು ಕಿತ್ತೆಸಿದಿದ್ದ ನಿನ್ನ ಕಾಲ್ ಗೆಜ್ಜೆಗಳು ನೀ ಪಿಸುಗುಟ್ಟದ್ದು ಕೊನೆಗೂ ಕೇಳಿಸಲೇ ಇಲ್ಲ ಮುಲುಕಾಟ ನನ್ನದೋ ಅತ್ತು ಅತ್ತೂ ಬತ್ತಿದ್ದ ನಿನ್ನ ಕಣ್ಣಿನದೋ ಒಂಚೂರು ತಿಳಿಯದೇ ಹೋದ್ದಕ್ಕೆ ನಮ್ಮೊಲುಮೆಗೆ ಒಂದು ಹಿಡಿ ಮಣ್ಣು ಬೀಳಲಿ ನೀನಿರುವವರೆಗೆ ಕವಿತೆ ಆಂತರ್ಯದೊಳಗೆ ಮಗುವಂತೆ ಬೆಚ್ಚಗಿತ್ತು ಈಗ ಬಿಕ್ಕಿ ಬಿಕ್ಕಿ ಅಳುತ್ತಿದೆ -ಪ್ರವರ