Posts

Showing posts from December, 2011

ನಾವೇಕೆ ಕಿವುಡರಾಗಿದ್ದೇವೆ!!!

Image
ಗಂಟಲು ಹರಿಯುವಂತೆ ಕೂಗಿದರೂ ಯಾರೊಬ್ಬರಿಗೂ ಕೇಳಿಸುತ್ತಿಲ್ಲ, ಮಳೆ ಸುರಿಸಲೆಂದು ಕಪ್ಪಿಟ್ಟಿದ್ದ ಮೋಡಗಳೇ ಕೂಗಿಗೆ ಓಗೊಟ್ಟಿ ಚದುರಿರುವಾಗ ನಾವೇಕೆ ಕಿವುಡರಾಗಿದ್ದೇವೆ!!! ಮಸಣದಲಿ ಘೋರಿಗಳೊಳಗೆ ಮಲಗಿದವರೆಲ್ಲಾ ಎಚ್ಚರವಾಗಿ ಎದ್ದು ಕೂತಿರುವಾಗ, ನಾವಿನ್ನು ಬದುಕಿದ್ದೇವೆ ನಾವೇಕೆ ಕಿವುಡರಾಗಿದ್ದೇವೆ!!!! ನೂರುಗಾವುದ ದೂರದ ನೀಲಿ ಸಾಗರಕೆ ಕೇಳಿಸಿದೆಯಲ್ಲ ಅದಕೆ ಕಳಿಸುತಿದೆ ಅಲೆಗಳ ಸದ್ದು ಬಂದ ದಿಕ್ಕಿನೆಡೆಗೆ, ಸದ್ದು ನಮ್ಮ ಪಕ್ಕದಿಂದಲೇ ಬಂದಿದೆ ಆದರೂ ನಾವೇಕೆ ಕಿವುಡರಾಗಿದ್ದೇವೆ!!!! ಹಸಿದವರ ಕೂಗಿದೆ,ತುಳಿತಕೆ ಸಿಕ್ಕಿ ಜಿನುಗುತಿಹ ರಕುತದ ಕೂಗಿದೆ, ಹರಿದ ಚಿಂದಿ ಬಟ್ಟೆಯ ಕೂಗಿದೆ ಆದರೂ, ನಮಗೆ ಕೇಳಿಸುತ್ತಿಲ್ಲ, ಏಕೆಂದರೆ ನಾವು ಜಾಣ ಕಿವುಡರು.....

ಕಲ್ಲುಬಂಡೆ ಮತ್ತು ನದಿ

Image
ಏಸೊಂದು ವರುಸದಿಂದ ಆಸೆಯ ಉಸುರಿಲ್ಲದೆ ಅದೇ ನದಿಯ ದಂಡೆಯ ಮೇಲೆ ನಿಂತಲ್ಲೇ ನಿಂತಿದೆ ಬರೀ ಕಲ್ಲು, ಬೃಹತ್ ಬಂಡೆಗಲ್ಲು ಉಕ್ಕಿ ಹರಿದಿದ್ದ ನದಿಯ ಪರಿವೆಯಿಲ್ಲದೇ, ಪರಿಷೆಯಿಲ್ಲದೇ ತಾನೇನಾದೇನೆಂಬ ಅಂಜಿಕೆಯೂ ಇಲ್ಲದೇ, ಭಯಾನಕ ಅಲೆಗಳಿಗೆ ಎದೆಯೊಡ್ಡಿ ನಿಂತಿತ್ತು ಹೃದಯವಿಲ್ಲದೇ. ಹಸಿರು ಪಾಚಿಯ, ಖುಷಿಯ ಕುಹಕಕೆ ಮುಖವ ಕಿವುಚದೆ ನಿಂತಿದೆ, ಅಣಬೆಯ ಅಣಕಿಗೆ ಕಿವಿಯ ನೂಕದೇ ಕಲ್ಮುಖದ ಮೇಲೆ ನಗುವ ಕುಣಿಸಿದೆ. ಬಿಸಿಲ ಬಾಧೆಗೆ ನದಿಯು ಬಾಡಿ ಹನಿ ಹನಿಯು ಬಾಗಿ ನಡೆದಿವೆ, ನಾನು ಬಾಡೆನು, ಬಿಸಿಲಲೊಣಗೆನು ನಿನ್ನ ಬಿನ್ನಹ ಕೇಳೆನು ಎಲ್ಲೆ ಇರದ ಕಲ್ಲು ನಾನು ಇಲ್ಲಿಂದ ಎಲ್ಲಿಗು ಕದಲೆನು, ನೀಲಿ ಬಾನಲಿ ಮೋಡವಿರುವವು, ಅವುಗಳ ನೆರಳು ನನ್ನೆಯ ಮೇಲಿದೆ, ಮಳೆಯ ಹನಿಗಳು ಬಂದೆ ಬರುವವು ಎಂಬ ನಂಬಿಕೆ ಕಾಲನ ಮೇಲಿದೆ, ಹೃದಯವಿಲ್ಲದ ಕಲ್ಲು ನಾನು ಹೃದಯವಂತಿಕೆ ತುಂಬಿದೆ ಹೃದವಿರುವ ಮನುಜ ನೀನು ಮನಸು ಬರಿಯ ಮುಳ್ಳಲಿ ತುಂಬಿದೆ