ತೋರಿಸುತ್ತೇನೆ ಬಣ್ಣ ಬಸಿದವರ ಮುಖಗಳ


ಎಷ್ಟು ಚಂದವಿದೆ ಅಲ್ಲವೆ
ಅರಮನೆ!
ಸ್ವಾಗತ ದ್ವಾರದ ಕಮಾನಿನ ಸುತ್ತ
ಹೂವು ಬಳ್ಳಿಯೂ ಇದೆ,
ನಿಮ್ಮ ಮುಖಕ್ಕೆ ಹಚ್ಚಿದ  ಕ್ರೀಮು
ಬಿಸಿಲಿಗೆ ಇಳಿದಿಲ್ಲ ತಾನೆ;
ಗೋಡೆಗಂಟಿಸಿದ ಫಳಗುಡುವ ಕನ್ನಡಿಯಲ್ಲಿ
ಮುಖವನ್ನೊಮ್ಮೆ ನೋಡಿಕೊಂಡು ಬಿಡು
ಬಿಂಬ ನಿನಗೇನೊ ಹೇಳಬಹುದು.

ಎದೆ ಬಿರಿದ ತಲ್ಲಣಗಳ
ಬಾಚಿ ತಟ್ಟಿ ಮಾಡಿದ ಕಂಬವಿದು,
ಬೆರಳುಗಳ ಸೋಕಿಸಬೇಡ
ಕೆಂಪು ರಗುತ ಅಡರೀತು ಗೆರೆಗಳ ನಡುವೆ
ಕಣ್ಣಿನ ಗಡಿ ಮೀರಿದರೆ
ಹನಿಯುತ್ತದೆ ಕೆನ್ನೆ ತೋಯುವಂತೆ;
ಯೋಚನೆ ಮಾಡು!
ಮನಸ್ಸನ್ನು ಹೊರಗೆ ಕಸಿದಿಟ್ಟು
ಒಳಗೆ ಬಾ
ಇನ್ನೂ ತೋರಿಸುವುದಿದೆ,
ಇಲ್ಲ ಕಣ್ಣುಗಳಿಗೆ ಮುಖವಾಡ ತೊಡಿಸಿಬಿಡು
ಸ್ವಲ್ಪ ಹೊತ್ತು ನಾಟಕವಾಡಲಿ

ಬಡಿವಾರದ ಚಿತ್ರಗಳ ಹಿಂದೆ
ಬಳಿದಿರುವ ಬಣ್ಣಗಳು
ಕಣ್ಣು ಕುಕ್ಕುತ್ತಿವೆ ತಾನೆ,
ಬೆಳಕು ಚೂರು ತಗ್ಗಬೇಕು
ನಾನೇ ತೋರಿಸುತ್ತೇನೆ,
ಬಣ್ಣ ಬಸಿದವರ ಮುಖಗಳ:
ಮೊಂಬತ್ತಿಯೂ ಕರಗುತ್ತಾ
ಅಳುತ್ತದೆ,
ಅದು ಯಾವಾಗಲೋ ಕೇಳಿಸಿಕೊಂಡಿದೆ
ಕತ್ತಲ ಜನರ ದನಿಯ;

ನೋಡಬೇಕೆ ಆ ಜನರ???
ಈಗ ಕಣ್ಣಿಗೆ ಹಾಕಿದ್ದ ಮುಖವಾಡ ಕಳಚು,
ನೋಡು ಈ ಮಜಬೂತಾದ ಮಹಲನ್ನು,

ಅವರದೇ ಸಮಾಧಿಗಳ ಮೇಲೆ
ಕಟ್ಟಿಸಿದ್ದು,
-ಪ್ರವರ




Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ