ಅಂಗಿ ಗುಂಡಿಗೂ ತಗುಲಲಿ ಕಣ್ಣ ಹನಿ

ಜೋಪಡಿಯೊಳಗೆ
ಹೊಟ್ಟೆಯುಬ್ಬಿಸಿ ಮಲಗಿದ್ದ
ಕವಿತೆಗಿನ್ನೂ ಹಸಿವಿದೆ,
ಮೇಲೆ ಕಾಣುವ ಹುಲ್ಲು ಛಾವಣಿಯ
ನಡುವಿನ ಕಂಡಿಗಳಲ್ಲಿ
ಬೆಳಕು ಇಣುಕುತ್ತಿದೆ
ನೋಡುವ ಹಂಬಲಕ್ಕೆ
ಗಕ್ಕನೆ ಕಣ್ಣ ರೆಕ್ಕೆ ಬಿಚ್ಚಿ,

ಅದೆಷ್ಟು ನರಳುತ್ತೀಯ
ಹಾಸಿಗೆಯಡಿಯಲ್ಲಿ,
ತಿಣುಕಾಡಿ ಹೊರಗೆ ಬಾ
ಹಸಿವ ನೀಗಿಸುತ್ತೇನೆ,
ಮೈಯ ಪೊರೆ ಕಳಚಿ ನಿಲ್ಲಬೇಕು
ನನ್ನ ನೋಟಕ್ಕೆ

ಗೋಡೆ ತಂತಿಗೆ ಸಿಕ್ಕಿಸಿದ
ರಶೀದಿಗಳ ಹಿಂದಿನ ಪದ್ಯದಡಿ
ಸಹಿ ಇದೆ ಒಮ್ಮೆ ನೋಡಿ ಬಿಡು
ಬೆಂಕಿ ತಗುಲಿದರೆ
ಅಕ್ಷರಗಳದು
ಸದ್ದು ಹೊರಡುವುದಿಲ್ಲ,
ಬೇಕೆಂದರೆ ಉಪ್ಪಡರಿದ ಗೋಡೆಗೆ
ಕಿವಿಯಿಟ್ಟು ಮೆಲ್ಲಗೆ ಕೇಳಿಸಿಕೊ....

ನಿನ್ನ ಒಂದೊಂದೇ ಪದಗಳ
ಹರವಿಡು ಬಂದವರೆಲ್ಲಾ
ಓದಿಕೊಂಡು ಹೋಗಲಿ,
ಅಂಗಿ ಗುಂಡಿಗೂ ತಗುಲಲಿ ಕಣ್ಣ ಹನಿ,
ಮೈಲಿಗೆಯ ಕೊಂಡಿ ಕಳಚಲಿ.

ಜೋಪಡಿಯೊಳಗೆ
ಹೊಟ್ಟೆಯುಬ್ಬಿಸಿ ಮಲಗಿದ್ದ
ಕವಿತೆಗಿನ್ನೂ ಹಸಿವಿದೆ,
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ