Posts

Showing posts from January, 2013

ನವಿಲ ಗರಿ ನೇವರಿಸಿದ ಪುಸ್ತಕದ ಹಾಳೆಯಲ್ಲಿ

Image
ಎದೆಗೆ ಚಿಮ್ಮಿ ನೆಗೆವ ನಿನ್ನ ನೆನಪುಗಳಲ್ಲಿ ಕಹಿ ಶರಾಬಿನ ರುಚಿ ಇದೆ, ನಾಲಿಗೆಗೆ ಹಿಡಿಸದಿದ್ದರೂ ನಶೆಗೆ ಬೇಕು ಬಾನಿಗೂ ಹಿಡಿದ ಸಂಜೆಹೊತ್ತಿನ ಝೋಂಪಿನಂತೆ ಕೈಗೆ ಸಿಗದಿದ್ದರೂ ಕಂಡರೂ ಕಾಣಲಿ ಚುಕ್ಕಿಗಳು. ಬೆಳಕಿಗಿಂತ ಹೆಚ್ಚು ಕತ್ತಲಲ್ಲೇ ಕಾಣುತ್ತಿ ಕಣ್ಣ ಪರದೆಯ ಮೇಲೆ ಇಷ್ಟಗಲ ಚಿತ್ರಗಳು, ಕಾಡಿಗೆ ತೀಡಿದ್ದ ಕಪ್ಪು ಕಣ್ಣು, ಮೂಗುತ್ತಿಯಿದ್ದ ಚೂಪು ಮೂಗು, ಕೆಂಡದಂಥ ತುಟಿ. ರಾತ್ರಿಯೆಲ್ಲಾ ಬೆವರು ಶಾಲು ಹೊದ್ದು ಕಾಯುತ್ತೇಬೆ ಬಾಟಲಿ ಹಿಡಿಯುವುದಕ್ಕೆ ಯಾರೋ ಬಿಡುತ್ತಿಲ್ಲ ಭುಜವ ಕಚ್ಚಿ ಸರಕ್ಕನೆ ನಾಲಿಗೆ ಎಳೆದುಕೊಂಡ ಸದ್ದು ಕಿವಿಯ ಬಳಿ ಎದೆ ಮೀರಿದ ಉಸಿರಾಟ. ಥೂ ಹಾಳು ನೆನಪುಗಳು ಮತ್ತೆ ಮತ್ತೆ ನೀರಾಗುವಂತೆ ಮಾಡುತ್ತವೆ ರಾತ್ರಿಯೆಲ್ಲಾ ಹುಡುಕಿದ್ದೇನೆ ನಿನ್ನದೇ ಹೆಜ್ಜೆ ಗುರುತುಗಳ, ನವಿಲ ಗರಿಯನ್ನು ನೇವರಿಸಿದ ಪುಸ್ತಕದ ಹಾಳೆಯಲ್ಲಿ ಹತ್ತಾರು ಕವಿತೆಗಳಿವೆ. ಎಷ್ಟೇ ಮಗ್ಗುಲು ಬದಲಾಯಿಸಿ ಓದಿದರೂ ನಿನ್ನದೇ ಅತೀ ಕಾಡುವ ನೆನಪುಗಳು -ಪ್ರವರ

ಜುಟ್ಟು ಜನಿವಾರಗಳನೆಲ್ಲಾ ಕೊಟ್ಟುಬಿಟ್ಟಿದ್ದೇವೆ

Image
ಇಲ್ಲಿನ ಮಣ್ಣಿಗೂ ಸೂತಕ ಹಿಡಿಸಿದವರೊಂದಿಷ್ಟು ಜನರಿದ್ದಾರೆ ಮೆರೆಯುತ್ತಿದ್ದಾರೆ ಉಪ್ಪರಿಗೆಗಳಲ್ಲಿ ಹುರಿ ಮೀಸೆ ತಿರುವುತ್ತಾ... ಮಂದಿರ-ಮಸಿದಿ-ಚರ್ಚುಗಳ ದೇವರುಗಳನೆಲ್ಲಾ ದಾಳ ಮಾಡಿಕೊಂಡು ಗಂಟೆ ಜಾಗಟೆಗಳ ಬಾರಿಸುತ್ತಾ, ನಮ್ಮನ್ನು ಅಲ್ಲಿಂದಿಲ್ಲಿ ಎತ್ತಿ ಹಾಕುತಿದ್ದಾರೆ ಕಾಯಿಗಳಂತೆ, ಒಬ್ಬರಿಂದೊಬ್ಬರ ಕಡಿಯುತ್ತಾ. ವಿಧಾನ ಸೌಧದ ಏ.ಸಿ ಅಡಿಯಲ್ಲಿ ಸೆಕ್ಸು ನೋಡುತ್ತಿದ್ದವರು, ಆಕಳಿಸುತ್ತಿದ್ದವರು, ತೂಕಡಿಸುತ್ತಿದ್ದವರು, ನೋಟುಗಳೆಣಿಸುತಿದ್ದವರು... ಹೊರಗೆ ಸುಡು ಬಿಸಿಲಿನಲ್ಲಿ ಸಾಲಿನಲ್ಲಿ ಕಾಯುತ್ತಿದ್ದಾರೆ ಪಿಸುರುಗಣ್ಣಿನ ಮುದುಕರು, ಬಿಳಿಸೀರೆ ಹೆಂಗಸರು, ಕಾಲುಕಳೆದುಕೊಂಡವರು ಅವರು ಇವರು.... ಇದು ಈಗಿನದಲ್ಲ!! ನಿಮ್ಮನ್ನು ನೀವೆ ಆಳಿಕೊಳ್ಳಿ ಎಂದು ಬ್ರಿಟೀಶರು ಬಿಟ್ಟು ಹೋದಾಗಿನಿಂದ, ನಾವು ನಮ್ಮ ಮೈಧುನದ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆಂದು ಜುಟ್ಟು ಜನಿವಾರಗಳನೆಲ್ಲಾ ಕೊಟ್ಟುಬಿಟ್ಟಿದ್ದೇವೆ ಏನಾದರು ಮಾಡಿಕೊಳ್ಳಿ ಎಂದು. ನಾವೆಷ್ಟು ಮುಗ್ಧರೆಂದರೆ ಮತ್ತೆ ಅವರನ್ನೇ ತಂದು ಕೂರಿಸುತ್ತೇವೆ ಬೆನ್ನ ತೋರಿಸಿ ಚಾಟಿ ಕೊಟ್ಟು, ಬಾಸುಂಡೆ ಬರಿಸೆಂದು ಬೆತ್ತಲಾಗಿ ನಗುತ್ತಾ ನಿಲ್ಲುತ್ತೇವೆ, ಮತ್ತೆ ಹಸಿವಿಗೆ ಮೂಳೆಗೆ ಜೊಲ್ಲು ಸುರಿಸುತ್ತಾ ನಿಲ್ಲುತ್ತೇವೆ. -ಪ್ರವರ

ಕವಿತೆಯೊಂದು ಬದುಕಿದೆ

Image
ಕವಿತೆಯೊಂದು ಎದೆಯೊಳಿದ್ದು ಏನನ್ನೊ ಮತ್ತೆ ಬರೆಸಿದೆ, ಹಗಲು ರಾತ್ರಿ ದಣಿಸಿ ದಣಿಸಿ ಮೈಯ ಬೆವರ ಸುರಿಸಿದೆ ಒಂದು ಹಾಳೆ ನೂರು ಕವನ ಸಾಲದಂತೆ ನಾಳೆಯು, ಮಣ್ಣ ಗೋರಿಯಾಳವನ್ನು ಸೀಳಿದಂತೆ ಬೀಜವು ಅಳುವ ಜನರ ಕಣ್ಣಲೊಂದು ಹನಿಯು ಕುಳಿತು ಇಣುಕಿದೆ, ಒಣ ಮರದ ಬೇರ ಸೇರೊ ಆಸೆಯಲ್ಲೆ ಕಾದಿದೆ ನಾಳೆ ಕನಸ ಗಂಟಲಲ್ಲಿ ಕವಿತೆಯೊಂದು ಬದುಕಿದೆ ಸತ್ತ ಜಗಕೆ ಮೂಕ ಜನಕೆ ದನಿಯ ಆಸೆ ಉಳಿಸಿದೆ -ಪ್ರವರ

ಕನಸುಗಳೆಲ್ಲಾ ನೀಲಿಚಿತ್ರಗಳಂತೆ ಗೋಚರಿಸುತ್ತಿವೆ

Image
ಅಯ್ಯೋ ಇದೇನು ಇಂದು ಹುಣ್ಣಿಮೆಯೇ, ಕಣ್ಣು ಕುಕ್ಕುತ್ತಿರುವನಲ್ಲ ಬೆಳ್ಳಿ ಚಂದಿರ. ಮೊದಲು ಕತ್ತಲಿಗೆ ಮೈಯೊಡ್ಡಬೇಕು ಇಲ್ಲದಿದ್ದರೆ ವಿರಹದಲ್ಲಿ ಬೆಂದು ಹೋದೆನು, ಅಬ್ಬಾ ಕತ್ತಲು ಕೋಣೆ ಇಂಜಿದರೂ ಕಾಣಲೊಲ್ಲದಷ್ಟು ಕತ್ತಲು, ಬೆಳದಿಂಗಳಲ್ಲಿ ಸುರಿವ ಬೆವರ ಮೈಥುನಕ್ಕಿಂತ ಮೈ ಸೋಕುವ ಕತ್ತಲಡಿಯಲ್ಲಿ ನರಳುವುದೇ ವಾಸಿ ಆಗೋ ಕೇಳಿಸುತ್ತಿದೆಯೇ ಅಲೆಗಳು ಮೈ ನವಿರೇಳಿಸಿಕೊಂಡು ಯಾರದೋ ಆಲಿಂಗನಕೆ ಕೈ ಚಾಚುತ್ತಿರುವ ಹುಚ್ಚು ಸದ್ದು, ಒಮ್ಮೆಲೇ ಆಗಸಕ್ಕೆ ನೆಗೆದದ್ದು ಸುಸ್ತಾಗಿ ಮತ್ತೆ ಅಂಗಾತ ಮಲಗಿದ್ದು ಪಕ್ಕದ ಮನೆಯಲ್ಲಿದ್ದ ಮಂಚದ ಕಿರಲು ಸದ್ದು, ಬಾಗಿಲು ಕಿಟಕಿಗಳ ಸಂದು-ಗೊಂದುಗಳ ದಾಟಿಕೊಂಡು ಬಂದಿದೆ, ಕಿವಿ ಕಿವಿಚಿಡುವಷ್ಟು ನರಳಾಟ. ಕಸುಗಳೆಲ್ಲಾ ನೀಲಿ ಚಿತ್ರಗಳಂತೆ ಗೋಚರಿಸುತ್ತಿವೆ, ಕತ್ತಲು ಕೋಣೆಯ ಗೋಡೆ ಗೋಡೆಗಳಲ್ಲೂ ವಿಲಕ್ಷಣ ಆಕೃತಿಗಳು ತುಟಿಕಚ್ಚಿ ಪೋಲಿಯಾಗಿ ಕರೆದಂತಿವೆ ಹೇ ಬೆಳದಿಂಗಳೇ "ನನ್ನಾಕೆಯಿದ್ದಾಗ ಬಾ ನೋಡುವ" ತೊಡೆ ತಟ್ಟಿದ್ದು ನಾನಲ್ಲವೆಂದು ಹೇಳುವ ಹೊತ್ತಿಗೆ ನಿದ್ದೆ ಝೋಪು -ಪ್ರವರ

ಕೆಂಪು ದೀಪದ ಓಣಿ

Image
ಮೆತ್ತಗೆ ಹಸಿ ಹಿಸಿ ರಾತ್ರಿ ಹೆಜ್ಜೆಯಿಡುತಿತ್ತು, ಹೊಟ್ಟೆ ಹಸಿದವರೊಂದು ಕಡೆಯಾದರೆ, ಕಾಮದಿಂದಸಿದವರೊಂದು ಕಡೆ. ಸಂದಿ-ಗೊಂದಿಗಳಲ್ಲಿ ಸೆರಗ ತೆರೆದು ಎದೆಯ ಬಿಕರಿಗಿಟ್ಟು ನಗುತ್ತಲೇ ಎದುರು ನೋಡುತ್ತಿದ್ದಾರೆ, ಕಾಮಾಲೆ ಕಣ್ಣುಗಳ!! ಹಿಡಿಸಲಾರದಷ್ಟು ನೋವಿದ್ದರೂ ಪೌಡರ್ರು ಲಿಪ್ ಸ್ಟಿಕ್ಕು ಬಳಿದು, ಚಿಟಕಿ ಹೊಡೆದು ಕರೆವ ಬೆರಳುಗಳ ಸದ್ದ ಕಾಯುತ್ತಿದ್ದಾರೆ. ಪರದೆಯ ಹಿಂದೊಂದು ಮುಖ ಸರಿದ ಪರದೆಯ ಮುಂದೊಂದು ಮುಖ ಕೆಂಪು ದೀಪ ಉರಿಯುತ್ತಿದ್ದರೂ ಕತ್ತಲೆ ಹೀಯಾಳಿಸಿ ಬದುಕಿಸುತ್ತಿದೆ ಅದರಡಿಯಿದ್ದವರ, ಇದು ಬೆಳಕಿನಡಿಯ ಕತ್ತಲೆಯ ಬದುಕು ಹೊರಗೆ ಅಪ್ಪನ ವಿಳಾಸವಿಲ್ಲದ ಮಗು ಅಳುತ್ತಾ ಕೂತಿದೆ, ಕೆಳಿಸಿದರೂ ಕಿವಿಗೆ ಬೀಗ ಹಾಕಿಟ್ಟು ಹಾಸಿಗೆಯ ಕೊಡವುತಿದ್ದಾಳೆ ಹೆತ್ತವಳು, ಪ್ರೀತಿಯ ಅದುಮಿಟ್ಟುಕೊಂಡು ಗಾಂಜಾ ಅಫೀಮಿನ ಕಮಟು ವಾಸನೆಗೆ ತಲೆ ಸುತ್ತುತ್ತಾ ಮಲಗುತ್ತಿದೆ ಪ್ರತಿ ದಿನದ ಘೋರ ರಾತ್ರಿ, ಒಡೆದ ಕನ್ನಡಿಗಳಲ್ಲಿ ಅದೇ ಬಣ್ಣ ಮಾಸಿದ ಮುಖ, ಚಪ್ಪಲಿ-ಬೂಟುಗಳಿಂದ ತುಳಿಸಿಕೊಂಡ ದಳ ಉದುರಿದ ಹೂವು, ಬಟ್ಟೆಗಳಲ್ಲಿ ಕಂಕುಳದ ಬೆವರ ಜೊತೆ ಸೆಂಟಿನ ವಾಸನೆ. -ಪ್ರವರ

ಮತ್ತದೇ ಬಿಂಬ

Image
ನಿನ್ನೆಗಳು ಹರಿದಿದ್ದವು , ಒಂದಷ್ಟು ತೇಪೆ ಹಚ್ಚಿ ನಗುತ್ತಾ ಬದುಕುತಿದ್ದೇವೆ , ತೇವವಾಗಿದ್ದ ಕಣ್ಣುಗಳ ಉಜ್ಜಿಕೊಂಡು , ಎಲ್ಲರೂ ಹಾಗೆ ಇದ್ದಾರೆ ಅಜ್ಜಿ ಹೊಲಿದಿಟ್ಟ ಕೌದಿಯಂತೆ ಚೂರು ವಾಸನೆಯಿದ್ದರೂ ನಾಳೆಗಳ ಚಳಿಯ ಬೆಚ್ಚಗಾಗಿಸಬಹುದು ಅಲ್ಲೆಲ್ಲೋ ಕಥೆಗಳ ಹೆಣೆದಿಟ್ಟು ಕನಸುಗಳ ಆಸೆಗೆ ಜೊಲ್ಲು ಇಳಿಸುತ್ತಾ ಮಲಗಿದ್ದೇವೆ ಕೋಣೆಯ ಮೂಲೆಯಲ್ಲಿ ಕಟ್ಟಿದ್ದ ಜೇಡವನ್ನು ನೋಡುತ್ತಾ , ಮತ್ತದೇ ಕತ್ತಲು ಮತ್ತದೇ ರಾತ್ರಿ ಹೊಸತಿರಬಹುದು ನಾಳೆ ರೆಪ್ಪೆ ಮುಚ್ಚಿದಂತೆ ಎಲ್ಲವೂ ನಿರಾಳ , ಮತ್ತದೇ ಹಾಳು ಮುಖ ಕನ್ನಡಿಯ ಮುಂತೆ , ನಿದ್ದೆಗಣ್ಣಿಗೆ ಗಾಜಿನೊಳಗಿನ ಪ್ರತಿಬಿಂಬ ಮೊಬ್ಬು ಮೊಬ್ಬು - ಪ್ರವರ

ಲೊಚಗುಡುತಿತ್ತು ಬಾಯ್ ಬಿರಿದ ಹಲ್ಲಿ

Image
ಬಿಸಿಲನುಸಿರಾಡುತ್ತ ಬದುಕುತಿಹ ನನ ಭೂಮಿ, ಹಸಿದ  ಹೊಟ್ಟೆಯ ಕೂಗ ಮಾರ್ದನಿಸಿದೆ, ಕೋಟೆ ಕೊತ್ತಲುಗಳಲಿ ಕೆಂಪು ರಕುತ ಹಿರಿ ಮೆರೆದವರ ತೊಗಲನ್ನೆ ಉಣಬಡಿಸಿದೆ, ಒಣಗಿದೆದೆ ನೆನಪಲ್ಲಿ ಮಣ್ಣೊಳಗೆ ಹುಡುಕಾಟ ಹೂ ಹಣ್ಣು ಕಾಣದಿಹ ಮುಳ್ಳಬೇಲಿ, ಬಡಕಲೆದೆಕೂಸು ಮೊಲೆಹಾಲಿಗಳುವಾಗ ಲೊಚಗುಡುತಿತ್ತು ಬಾಯ್ ಬಿರಿದ ಹಲ್ಲಿ ಮೂಳೆ ಕಡಿಯುತಲಿದ್ದ ನಾಯ ಬಾಯೋಳ ಜೊಲ್ಲು ನಗುತಿತ್ತು ಬರಿಕೆರೆಯ ಕುಹಕವಾಡಿ, ಹುಲ್ಲ ಗುಡಿಸಲುಗಳು ಜೀವಂತ ಮಸಣಗಳು ಬದುಕಿದ್ದು ಸತ್ತವರು ಅಲ್ಲಿ ಜೀವನಾಡಿ ಬಂದರೂ ಬರಬಹುದು ಕೆಂಪು ಬೆಂಕಿಯ ಮಳೆಯು ಕಪ್ಪು ಮೋಡಗಳೆಲ್ಲ ನಾವೆ ತಾನೆ, ತಣಿದರೂ ತಣಿದೀತು ಬಯಲೆಲ್ಲ ಹಸಿರೀತು ಮರೆತು ಬಿಡು ಭೀಕರ ಕಪ್ಪು ನಿನ್ನೆ -ಪ್ರವರ

ಪಾಪ ಯಾರಿಗೆ ಸುತ್ತೀತು

Image
ಗಾಳಕ್ಕೆ ಸಿಕ್ಕಿಸಿದ ಹುಳು ನೋವಿಗೆ ಹೊಯ್ದಾಡುತಿತ್ತು ಪಾಪ ಯಾರಿಗೆ ಸುತ್ತೀತು ಸೃಷ್ಠಿಕರ್ತನಿಗೋ, ಗಾಳಕ್ಕೆ ಸಿಕ್ಕಿಸಿದವನಿಗೋ. ಹುಳದಾಸೆಗೆ ಮೀನು ಗಾಳಕ್ಕೆ ಬಿತ್ತು, ವಿಲವಿನನೆ ಒದ್ದಾಡುತಿತ್ತು ಪಾಪ ಯಾರಿಗೆ ಸುತ್ತೀತು ಸೃಷ್ಠಿಕರ್ತನಿಗೋ, ಗಾಳ ಬೀಸಿದವನಿಗೋ, ಹುಳುವಿಗೋ, ಮೀನ ಸುಟ್ಟ, ಹಸಿವಿಗೆ ಗಬ ಗಬನೆ ತಿಂದು ಬಿಟ್ಟ, ಮುಳ್ಳು ಗಂಟಲಲ್ಲಿ ಸಿಕ್ಕಿ ನರಳಾಡುತಿದ್ದ, ಪಾಪ ಯಾರಿಗೆ ಸುತ್ತೀತು ಸೃಷ್ಠಿಕರ್ತನಿಗೋ ಹುಳುವಿಗೋ, ಸುಟ್ಟಿಟ್ಟ ಮೀನಿಗೋ?

ಹೊಸತು ನಾಳೆ

Image
ದಾಟಿಹೆವು ದೂರ ಮನಸೆಲ್ಲ ಭಾರ ನೆಚ್ಚಿಹೆವು ತುದಿಯ ಬೆಳಕ, ನಿನ್ನೆಯಂತೆಯೇ ನಾಳೆ ಕತ್ತಲ ಮರೆತುಬಿಡುವ ತವಕ. ನೀನು ನನ್ನವ ನಾನು ನಿನ್ನವ ಬಾಳು ಅಲೆಯ ತೆರದಿ, ಬಿಗಿದುಕೊಳ್ಳಲಿ ಅಪ್ಪಿಕೊಳ್ಳಲಿ ಸಂಬಂಧ ಖುಷಿಯ ಪರಿಥಿ ನೋವ ಕಹಿಯನು ಬೆಲ್ಲದೆದೆಯಲಿ ಹೂತು ಬಿಡುವ ಬನ್ನಿ, ನನ್ನೆದೆಯ ಕೊಂಚ ನಿನ್ನೆದೆಯ ಕೊಂಚ ಹಿಡಿ ನಗುವ ಹೊತ್ತು ತನ್ನಿ ಸಂಭ್ರಮದ ನಾಳೆ ಸವಿಯೋಣು ಬಾರ ಬೆಳಕಲ್ಲಿ ನಾವು ಕುಣಿದು, ಬಾನೆಲ್ಲ ರಂಗು ಭುವಿಯೆಲ್ಲ ರಂಗು ಕತ್ತಲೆಯ ನಿನ್ನೆ ಕಳೆದು -ಪ್ರವರ