Posts

Showing posts from October, 2012

ಬಂಡಾಯ ಕಾವ್ಯ

Image
ಬಿಸಿಲ ನುಂಗುವ ಬಯಲು, ಚದುರಿದ್ದ ಮೋಡಗಳಿಗೆ ಕಾವಿಡುತಿದ್ದ ಬಿಸಿಯು, ಅಲ್ಲೆಲ್ಲೊ ಮರಳು ಸರಿಯುತಲಿದ್ದ ಸದ್ದು, ಮೊಬ್ಬು ಚಿತ್ರಗಳ ಸಾಲು, ಗಂಟಲು ಹರಿದು ಕೂಗಿದರೂ ಕೇಳಲೊಲ್ಲದ ಕಿವಿಯು, ಸುರಿದಾವಿಯಾದ ಮೈಯ ಬೆವರು, ಎಲ್ಲವೂ ನಿತ್ರಾಣ, ಆದರೂ ಅಲ್ಲೊಂದು ಗಹನವಾದ ರೇಖೆ, ರೂಪಾಂತರವಾಗೆ ಕಲ್ಲಿನೆದೆಯಂಥ ಬಂಡಾಯ ಕಾವ್ಯವಾಯ್ತು.

ಬಿನ್ನಾಣಗಿತ್ತಿ

Image
ಹೂ ನಗಿಯ ನಲ್ಲೆ ಬೀರುತ್ತ ನಗಿಯ ದಾರ್ಯಾಗ ಯಾಕ ನಿಂತಿ, ರೇಶಿಮಿಯ ಲಂಗ ಗಿಳಿ ಹಸಿರ ದಾವಣಿ ರವಿಕೆ ಎಲ್ಲಿ ಮರೆತಿ, ಮೈಯ್ಯಾಗ ರಂಗು ತುಂಬ್ಯಾನ ಚಂದ್ರ ತನ್ನೆಲ್ಲ ಬೆಳಕ ಕಲೆಸಿ ಅಂಕು ಡೊಂಕುಗಳ ತಿದ್ದಿ ತೀಡ್ಯಾನ ತನ್ನೆಲ್ಲ ಕಸುಬ ಬಳಸಿ ಹಾಗಲದ ಬಳ್ಳಿ ನಾಚ್ಯಾವ ನಿನ್ನ ಬಳುಕ್ಯಾಡೊ ಸೊಂಟ ನೋಡಿ, ಹೊಕ್ಕಳದ ಕೆಳಗೆ ಜಾರೈತಿ ಡಾಬು, ತುಂಬ ನುಣುಪು ತೀಡಿ. ಕೆಂದುಟಿಯ ಮ್ಯಾಲ ಸವರೈತಿ ಜೇನು ಸವಿಯಾಕ ಬಿಡೆಲೆ ಹುಡುಗಿ, ಏರುಸುರು ಬಿಡುತ ನಿಂತೀನಿ ನಾನು ಕಾಯುತ್ತ ನಿನ್ನ ಕೆಣಕಿ -ಪ್ರವರ

ಬೆತ್ತಲಾದ ಕಪ್ಪು ಸಂಜೆ

Image
ನೀರವತೆಯ ಹೊಸ್ತಿಲಲ್ಲಿ ನಿಂತಿದ್ದ ಸಂಜೆಯದು, ಮೌನಗಳ ಸಂತೆ, ಅಲ್ಲೆಲ್ಲೋ ಚೂರು ರಂಗು ಸೂಜಿ ಮೊನೆಯಿಂದ ಕೊರೆದಂತೆ. ಎಲ್ಲವೂ ಎಲ್ಲರೂ ಅದರೊಳಗೆ ಕರಗಿ ಲೀನವಾದಂತೆ ಭಾಸ, ಜೀಗುಡುವ ಸದ್ದು. ಅಲ್ಲಿ, ಬೆತ್ತಲಾದದ್ದು ಎಲ್ಲವನ್ನೂ ಕಳಚಿದ್ದ ಕಪ್ಪು ಸಂಜೆ ಹಾತೊರೆತ ಇದ್ದದ್ದು ಕರಗುತಿದ್ದ ಬಣ್ಣದಲ್ಲಲ್ಲ, ಕಡುಗಪ್ಪು ಕತ್ತಲಲ್ಲಿ,!! ನಾಳೆಗಳ ಹೆಕ್ಕಿ ತೆಗೆಯುತ್ತಿದೆ ಉಗುಳ ನುಂಗಿಕೊಂಡು. -ಪ್ರವರ

ಬರೆಯದೇ ಬಿಟ್ಟ ಎರಡು ಕವಿತೆಗಳು

Image
ಲಾಟೀನಿನ ಬೆಳಕಲ್ಲಿ ಬರೆದು ಅರ್ಧಕ್ಕೆ ಬಿಟ್ಟ ಇನ್ನೆರಡು ಕವಿತೆಗಳಿವೆ ಬಾರ ಕಮಾನಿನ ಹಾಗೆ, ನಿದ್ದೆಯಿಂದೆದ್ದು ಬರೆದಿದ್ದೆ ಬರಗೆಟ್ಟವನಂತೆ ಡಿಕಾಕ್ಷನ್ ನೇ ಗಟ-ಗಟ ಕುಡಿದು, ತಣ್ಣಗೆ ಗಾಳಿ ಬೀಸುತಿದ್ದ ಕಿಡಕಿಯ ಪಕ್ಕ ಕುಳಿತು, ಬಸುರಿ ಇಂಕು ಪೆನ್ನಿಗೆ ಪ್ರಸವ ಬಿಳಿಯ ಹಾಳೆಯ ಮೇಲೆ ಎಷ್ಟೋ ಹೊತ್ತು ತಿಳುಕಾಡಿದಕ್ಕೆ ಅಳುತ್ತಾ ಹೊರಬಂದವು ಕಪ್ಪು ಪದಗಳು, ಲಾಟೀನಿನ ಅಲ್ಪ ಬೆಳಕಿಗೆ ಎಲ್ಲವೂ ಮೊಬ್ಬು ಮೊಬ್ಬು, ಸೊಳ್ಳೆಗಳ ಕಾಟ ಬೇರೆ ಅಲ್ಲೆಲ್ಲೋ ಗೂರಲು ಹತ್ತಿ ಕೆಮ್ಮುತ್ತಿದ್ದವನ ಸದ್ದು, ಹಾಗೇ ಕತ್ತಲ ಬಿಕ್ಕಳಿಕೆ, ಯಾರೋ ನೆನೆದಂತೆ ದಿಂಬುಗಳ ಅಪ್ಪಿಕೊಂಡು. ನಿದ್ದೆಯ ಝೋಂಪಿಗೆ ತೂಕಡಿಸುತ್ತ ಮಲಗಿದ್ದೇನೆ ಲಾಟೀನ ಬೆಳಕಲ್ಲೇ, ಬರೆದು ಅರ್ಧಕ್ಕೆ ಬಿಟ್ಟ ಇನ್ನೆರಡು ಕವಿತೆಗಳಿವೆ ಬಾರ ಕಮಾನಿನ ಹಾಗೆ -ಪ್ರವರ

ನೀನಿಲ್ಲದೆ ನೀರವ ಮೌನ

Image
ಹೇ ಹುಡುಗಿ ನನ್ನ ಬಳಿ ನೀ ಬಿಟ್ಟು ಹೋದ ನೆನಪುಗಳಿಗೀಗ ರೆಕ್ಕೆ ಬಂದಿವೆ ಹಾರಲು ಹಾತೊರೆಯುತ್ತಿವೆ, ಇದುವರೆಗೂ ಕೂತು ಕಣ್ಣು ಬಿಡುತಿದ್ದವು ಗೂಬೆಗಳ ಹಾಗೆ, ಸತ್ತ ಕನಸುಗಳಿಹ ನನ್ನೆದೆ ಸುಡುಗಾಡಲ್ಲದೆ ಮತ್ತೇನು, ಒಡೆದ ಮಡಿಕೆಗಳ ಪುರಾವೆ ಬೇರೆ!!! ರಾತ್ರಿಗಳ ಕಾಡುತ್ತಿವೆ ವಿರಹವೆಂಬ ಪ್ರೇತಗಳು..... ತುಂಟ ಮಾತುಗಳು ಪಿಸುಗುಡುತಿದ್ದ ಕಿವಿಯಲ್ಲಿ ತುಸು ಮೌನ ಏನೋ ನಿರಾಳ, ಮತ್ತೆ ನೀನಿಲ್ಲದ ನನ್ನ ನೆರಳಿಗೆ ಸೂತಕದ ಛಾಯೆ -ಪ್ರವರ

ಕಟು ವಾಸ್ತವ

Image
ನಾರುತಿದ್ದ ತಿಪ್ಪೆಯಲ್ಲಿ ಹರುಕಲು ಟೋಪಿ ಹಾಕಿಕೊಂಡು ಕಸ ಆಯುತಿದ್ದ ಹುಡುಗ ಅಲ್ಲೇ ಯಾರೋ ಬಿಸಾಡಿದ್ದ ಕೊಳೆತ ಟೊಮ್ಯಾಟೊಗಳತ್ತ ಆಸೆಯಿಂದ ನೋಡುತಿದ್ದಾನೆ, ಕೆ.ಎಫ್.ಸಿಯ ಮುಂದುಗಡೆ ಚಿಲ್ಲರೆಗೆ ಕೈ ಚಾಚುತ್ತಾ ಕೂತಿದ್ದ ಅಜ್ಜಿ ರೇಬಾನ್ ಗ್ಲಾಸು ಹಾಕಿಕೊಂಡು ಸೊಂಟ ಬಳುಕಿಸುತ್ತಾ ಹೊರ ಬಂದ ಹುಡುಗಿಗೆ ಕಾಣಿಸಲಿಲ್ಲ,   ಎಂಟು ದಾಟದ ಹುಡುಗಿ ಪುಟ್-ಪಾತಿನ ಮೇಲೆ ಆಸೆ ಕಂಗಳಿಂದ ಅವರಿವರ ಬೂಟುಗಳ ನೋಡುತಿದ್ದಾಳೆ ಪಾಲೀಷಿಗೆ,.... ಹಸಿದ ಹೊಟ್ಟೆಯ ಗೊಣಗಾಟಕ್ಕೆ. ಬ್ರಾಂಡೆಡ್ಡು ಮಾಲುಗಳನ್ನೇ ತುಂಬಿಕೊಂಡಿದ್ದ ಶಾಪಿಂಗ್ ಮಾಲ್ ಗಳೋಳಗೆ ಸೆಂಟು ಹೊಡೆದುಕೊಂಡು ಘಂ ಎನ್ನುತಿದ್ದ ತರಹೇವಾರಿ ಜನ, ಹೊಟ್ಟೆ ತುಂಬಿದವರೇ ಎಲ್ಲ ಜಾಗತೀಕರಣದ ಜೊಳ್ಳಿನೊಳಗೆ ಬಣ್ಣ ಹಚ್ಚಿಕೊಂಡವರೇ ಹಸಿವಿನ ಒರತೆಗೆ ಅಂಗಲಾಚುತಿದ್ದವರೊಂದು ಕಡೆಯಾದರೆ ಹೊಟ್ಟೆ ತುಂಬಿ ಕುರುಡಾದವರೊಂದು ಕಡೆ. ಈ ಕಟು ಸತ್ಯದ ನಡುವೆ ಮೂಕರಂತೆ ಬದುಕುತಿದ್ದೇವೆ. ಮೂಕರಂತೆ ಬದುಕುತಿದ್ದೇವೆ -ಪ್ರವರ

ತವಕ

Image
ಸಾಳೆಯ ಪುಟದಲ್ಲಿ ನನ್ನ ಹೆಸರಿಲ್ಲ, ಉಸಿರ ಹೊತ್ತು ಕಾಯುತಿದ್ದೇನೆ ಬೋಳು ಮರದಂತೆ ಬೇರ ಮಣ್ಣಿನಾಳಕ್ಕೆ ಬಿಟ್ಟು ಒಳಗೆಲ್ಲೊ ಅಡಗಿದ್ದ ನೀರ ಹುಕುಕಲೆಂದು ಬೆಳಕಿನಡಿ ಕತ್ತಲೆಯ ಮೂಸುತಿದ್ದ ಕನಸುಗಳ ಹೊತ್ತಿದ್ದೇನೆ ಬೆನ್ನು ಬಾಗಿಸಿಕೊಂಡು ಕೆಂಪು ಹುಡಿಯೊಳಗೆ ಬೀಜಕ್ಕೆ ಸಸಿಯಾಗೊ ತವಕವಿದೆ ಎದೆಯೊಳಗೆ ಹಸಿಗವಿತೆಯಿದೆ ಆ ಹಸಿಗವಿತೆ ನಾನು ನಾಳೆಯ ಪುಟದಲ್ಲಿ ನನ್ನ ಹೆಸರಿಲ್ಲ -ಪ್ರವರ

ನದಿಯ ದಂಡೆಯೂ ಮತ್ತು ನನ್ನ ನಲ್ಲೆಯೂ

Image
ನದಿಯ ದಂಡೆಯಲ್ಲೇಕೆ ನಿಂತಿರುವಿ ನಲ್ಲೆ, ನಸುಕಿನಿಂದಲೂ ನಿನ್ನನೇ ಹುಡುಕಿ ಬೆವರು ಹರಿದು ಮೈಯೆಲ್ಲ ಉಪ್ಪಡರಿದೆ ಈಗ ಕೊಂಚ ಸಮಾಧಾನಕ್ಕೆ ತಣ್ಣಗಾಗಿಹೆ, ತಂಗಾಳಿಯ ಪಿಸುಮಾತ ಕೇಳುತ್ತಿರುವೆಯೇನು ನನಗೇನು ಕೇಳುತ್ತಿಲ್ಲವಲ್ಲ, ನೀ ಎದುರಿಗಿದ್ದಕ್ಕೆ ನನ್ನ ಎದೆ ಬಡಿತವೇರಿ ಕಿವಿ ತಮಟೆಗಪ್ಪಳಿಸುತ್ತಿದೆ, ಮಳೆ ನಿಂತು ಸುಮಾರು ಹೊತ್ತಾಯಿತು ಹನಿ ತೊಟ್ಟಿಕ್ಕುತ್ತಿದೆಯಲ್ಲ, ಹೋ ನೀರಿಗೆ ಕಲ್ಲು ಎಸೆಯುತ್ತಿರುವೆಯೇನು ಅದಕ್ಕೇ ನೀರ ಮೇಲೆ ಅಲೆಗಳು ನಗುತ್ತಾ ತೇಲುತ್ತಿವೆ ನಿನ್ನ ಮೂಗುತ್ತಿಯಂತೆ. ರೆಪ್ಪೆಗಳನ್ನೊಂಚೂರು ಮಿಟುಕಿಸು ಅಷ್ಟು ಚೆಂದದ ಕಣ್ಣುಗಳಿಗೆ ದೃಷ್ಟಿಯಾದೀತು, ಹುಬ್ಬ ತೀಡಿದ್ದ ಕಪ್ಪು ಕಾಡಿಗೆಗೂ ಸಹಿತ, ಕಾಲ್ಗೆಜ್ಜೆಯಲ್ಲಿದ್ದ ಎರಡು ಗೆಜ್ಜೆಗಳು ಕಾಣುತ್ತಿಲ್ಲವಲ್ಲ, ನೀರಲ್ಲಿ ಕಾಲಿಟ್ಟಾಗ ಮೀನುಗಳು ಬೆರಳ ಚುಂಬಿಸಲು ಹೋಗಿ ಆಯಾತಪ್ಪಿ ನುಂಗಿರಬೇಕು, ಇಲ್ಲೇಕೆ ನಿಂತಿರುವೆ ನಲ್ಲೆ ಮೌನಕ್ಕೆ ಶರಣಾಗಿ ನದಿಯ ದಂಡೆಯ ಮೇಲೆ -ಪ್ರವರ

ಹಸಿದವರ ಬಿಕ್ಕಳಿಕೆ

Image
ಕಪ್ಪು ಜನ ಬಸಿದಿದ್ದ ಕೆಂಪು ರಕುತದ ಬಣ್ಣ ಧರ್ಪದರಮನೆ ಗೋಡೆ ಹೂವಾಗಿದೆ, ಬಡಕಲೆದೆ ಕೂಸು ಹಸಿವಿನಿಂದಳುವಾಗ ನಗುತ ಕೂತವರಿಗೆಲ್ಲ ಮಜವಾಗಿದೆ, ಕಲ್ಲೊತ್ತವರ ಬೆನ್ನು ಆಗಸಕೆ ಮುಖ ಮಾಡಿ ಸೂರ್ಯ ಕೆಂಡಕೆ ಸುಡುವ ತೊಗಲಾಗಿದೆ ಬೆನ್ನಿಗಂಟಿದ ಹೊಟ್ಟೆ ತೂಗಲಾರದ ಹಸಿವು ಅಂಗುಲದ ತುತ್ತಿಗೆ ಕೈ ಚಾಚಿದೆ - ಪ್ರವರ