ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, March 6, 2013

ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು

ಮೊನ್ನೆ ಮೊನ್ನೆಯಷ್ಟೇ
ಕೆನ್ನೆ ಮೇಲೆ ನಿನ್ನ ಐದೂ ಬೆರಳುಗಳು
ಮೂಡಿದ್ದುದನ್ನು ಕನ್ನಡಿಯಲಿ
ನೋಡಿಕೊಂಡು ಅತ್ತುಬಿಟ್ಟಿದ್ದೆ,
ಜೋರಾಗಿ ಬಿಕ್ಕಳಿಸುವಾಗ
ಒತ್ತಾಯವಾಗಿ ನೀರು ಕುಡಿಸಿದ್ದರು
ಬಳೆ ಸದ್ದು ಕಿವಿಯಲ್ಲಿತ್ತು
ಅಮ್ಮ ಇರಬೇಕು...

ರಾತ್ರಿ ಪಾಪಸ್ ಕಳ್ಳಿಯ ನೆರಳು
ನೋಡಿ ದೆವ್ವವೆಂದು ಹೆದರಿದ್ದೆ
ಉಚ್ಚೆ ಹೊಯ್ಯಿಸಲು ನನ್ನ ಜೊತೆ
ನಿದ್ದೆಗಣ್ಣಲಿ ನೀನಿದ್ದೆ,
ಎದುರು ಮನೆ ಐನಾರಪ್ಪನ
ಹೂಸಿನ ಸದ್ದಿಗೆ
ಇಬ್ಬರೂ ಜೋರಾಗಿ ನಕ್ಕಿದ್ದೆವು

ಓದುವಾಗ ಪುಸ್ತಕದ ಮೇಲೆ
ಹಾಗೆ ಮಲಗಿದ್ದೆ,
ನೀನೆ ಕೈಯ್ಯಲ್ಲಿ ಬಾಚಿಕೊಂಡು
ಮಂಚದ ಮೇಲೆ ಹಾಕಿ
ಹೊಚ್ಚಿದ್ದೆ,
ನಾನೂ ಬೆಚ್ಚಗೆ ಮಲಗಿದ್ದೆ.
ಅಲ್ಪ ಸ್ವಲ್ಪ ಎಚ್ಚರವಿದ್ದೆ
ಮಲಗಿದವನಂತೆ ನಾಟಕವಾಡಿದ್ದೆ ಅಷ್ಟೆ.

ಥೂ ಅದೆಷ್ಟು ಬೇಗ
ಬೆಳೆದುಬಿಟ್ಟೆ,

ಕನ್ನಡಿಯಲ್ಲಿ ಕೆನ್ನೆ ಮುಟ್ಟಿ
ನೋಡಿಕೊಳ್ಳುವ ನನ್ನ ಪ್ರತಿಬಿಂಬ
ಗೊಣಗುತ್ತದೆ ನಿನ್ನ ಕೈಬೆರಳಚ್ಚಿಲ್ಲವೆಂದು,

ನಿನ್ನ ಬುಜದೆತ್ತರಕ್ಕೆ
ನಾನು ಬೆಳೆಯಲೇಬಾರದಿತ್ತು!
ಬೆಳೆದುಬಿಟ್ಟೆ,
ನಿನ್ನ ಹೆಗಲ ಮೇಲಾಡುವ ಆಸೆ
ಇನ್ನೂ ಇದೆ
ಅಮ್ಮ ಬಯ್ಯುತ್ತಾಳೆ
ಕತ್ತೆ ವಯಸ್ಸಾಯ್ತೆಂದು
ಅದಕ್ಕೇ ಸುಮ್ಮನಿದ್ದೇನೆ

ಇಷ್ಟು ಬೇಗ ಬೆಳೆಯಬಾರದಿತ್ತು
ನಾನು
ನಿನ್ನ ಬುಜದೆತ್ತರಕ್ಕೆ
-ಪ್ರವರ

No comments:

Post a Comment

ಅನ್ಸಿದ್ ಬರೀರಿ