Posts

Showing posts from February, 2013

ರಾತ್ರಿ ಕನವರಿಕೆಗಳು ಕೇಳಿಸಿಕೊಳ್ಳಿ

ಮೊಂಬತ್ತಿ, ಯಾರಿಗೋ ಅನುವು ಮಾಡಿಕೊಟ್ಟಂತೆ ಕರಗುತ್ತಿದೆ. ಕತ್ತಲೊಳಗೆ ತಾನೂ ಅಡಗಿಕೊಂಡು ಹಾಸಿಗೆಯ ಮೇಲಿನ ಪಿಸು ಮಾತುಗಳ ಚಡಪಡಿಕೆಗೆ.... ಅಹೋ ರಾತ್ರಿಗಳನ್ನು ನಾನು ಕಣ್ಣುಗಳ ಮುಚ್ಚದಂತೆ ಕಳೆದಿದ್ದೇ, ಎದೆ ಬಗೆದ ಕನಸುಗಳ ಜೊತೆ, ಗೆಜ್ಜೆ ಸದ್ದು ಕೇಳುವ ಗೀಳು ಹತ್ತಿದ್ದರಿಂದಲೋ ಏನೋ ಮೌನವಾಗಿ ಕತ್ತಲ ಕೂಡಿಸಿದ್ದೆ ರಾತ್ರಿಯಾಗಸಕೆ ಅಂಟಿಸಿದ ಚುಕ್ಕಿಗಳು ಜಾರಿಬಿದ್ದದ್ದು ಸಾಗರದಲ್ಲಿ, ತೇಲಲೊಲ್ಲದೇ ಮುಳುಗಲೊಲ್ಲದೇ ಅಲೆಗಳ ಜೊತೆ ತುಳುಕಾಡುತ್ತಿವೆ. ಅದೇ ನೀನು ಬಿಸಾಡಿ ಹೋದ ನೆನಪುಗಳಂತೆ ಹಗಲಿಂದ ರಾತ್ರಿಗೆ ಜಾರಿಕೊಂಡಿದ್ದ ಕೌತುಗಳನ್ನು ಅವುಚಿಕೊಂಡು ಮೆತ್ತನೆ ಹಾಸಿಗೆಯ ಮೇಲೆ ಮಲಗಿದ್ದೆ, ಒಳದನಿಯ ಮರ್ಮರ ಕೇಳಿಸಿಕೊಂಡವರು ಕನವರಿಸುತಿದ್ದೀಯ ಎಂದು ಬಡಿದೆಬ್ಬಿಸಿದರು ಮೌನಕ್ಕೆ ಶರಣಾಗುವ ಮುಂಚೆ ಒಂದಷ್ಟನ್ನು ಬೊಗಸೆಯಲ್ಲಿ ನೀಡುತ್ತೇನೆ ಸಾಧ್ಯವಾದರೆ ಎದೆಯಲ್ಲಿರಿಸಿಕೋ

ಸವೆತ

ಅತ್ತ ಸಾಗರವಂತೆ ಆಪ್ತದಲೆಗಳಂತೆ, ನಿರ್ಲಿಪ್ತ ಬಂಡೆಗಲ್ಲುಗಳಂತೆ ಇಲ್ಲೇ ಬರೆದಿದ್ದೆ ಈ ಮರಳ ಮೇಲೆ ಅಳಿಸಿ ಹಾಕಿದ್ದಾರೆ ಬರೆದದ್ದು ನನಗಿನ್ನೂ ನೆನಪಿದೆ ನೂರುಗಾವುದ ದೂರ ನಡೆದರೂ ಮುಗಿಯಲೊಲ್ಲದ ದಿಕ್ಕು, ನಿನ್ನನೇಕೆ ಹಿಂಬಾಲಿಸುತಿದ್ದೇನೆ? ಆಸೆ ತೀರದ ಆತ್ಮದಂತೆ, ಬೆರಳಿನ್ನೂ ಸವೆದಿಲ್ಲ ಮತ್ತೆ ಮತ್ತೆ ಬರೆಯುತ್ತೇನೆ! ಅಳಿಸಿ ಅಳಿಸಿ ನಿನ್ನ ಕೈ ಸವೆಯುವಂತೆ.

ಫಸ್ಟ್ ಬೆಂಚ್ ಸುಂದ್ರಿ

ಮೊದಲ ಬೆಂಚಲಿ ನಗದೆ ಕುಳಿತ ಚೆಂದಗೆನ್ನೆಯ ಹುಡುಗಿಯೆ ಚೂರು ನಗದ ಕೆಂಪು ತುಟಿಗೆ ಯಾವ ಪಾಪವು ಅಡರಿದೆ ಹೆರಳ ತುಂಬ ಮಲ್ಲೆ ಹೂಗಳು ಘಮವ ಸುಮ್ಮನೆ ಬೀರಿವೆ ಹಿಂದೆ ಕೂತ ಹೈಕಳೆಲ್ಲ ಹೊಳ್ಳೆ ಅರಳಿಸಿ ಹೀರಿವೆ. ಅಷ್ಟು ಗದ್ದಲ ನಡುವೆ ನಿನ್ನ ಗೆಜ್ಜೆ ಸದ್ದು ಕೇಳಿದೆ, ಎಲ್ಲ ಕಿವಿಗಳು ನಿನ್ನ ಕಡೆಯೇ ದಿಕ್ಕ ಬದಲಿಸಿ ನೋಡಿವೆ. ಎದೆಗೆ ಗಕ್ಕನೆ ತುಂಬಿಕೊಂಡೆ ಕಣ್ಣಿನೊಳಗೆ ಬಿಡಿಸಿಕೊಂಡೆ ರಾತ್ರಿ ಕನಸಿಗೆ ಬಿಟ್ಟುಕೊಂಡೆ ಹುಳಗಳಂತೆ ನಿನ್ನನು -ಪ್ರವರ

ಕತ್ತಲುಂಡವು ಮಂದಿರ

ನೀಲಿಯಾಗಸದಲ್ಲಿ ಯಾರೋ ನಿನ್ನ ನೆನೆಯುತ ಕೂತರು ತೇಲಿ ಬಂದ ಮೋಡವೆಲ್ಲವ ಮಡಿಸಿ ಬದಿಯಲಿ ಬಿಟ್ಟರು ದಟ್ಟ ಹೆರಳಡಿಯಲ್ಲಿ ರಾತ್ರಿಯ ಕನಸು ಕಾಣುತ ಚಂದಿರ ಬೆಳದಿಂಗಳನ್ನು ಮರೆತೆಬಿಟ್ಟನು ಕತ್ತಲುಂಡವು ಮಂದಿರ ಧ್ಯಾನಗ್ರಸ್ಥ ರಾತ್ರಿಯೆಲ್ಲಾ ನಿನ್ನ ನೆನಪ ಮುಲುಕಾಟವು ಮೌನಿ ದೀಪಕೆ ಎಣ್ಣೆಯುಣಿಸಿ ಜೀವ ತೆತ್ತಿತು ಬತ್ತಿಯು ನಿನ್ನ ತೇಲಿಸಲೆಂದು ಅಲೆಯು ಬಾಹುಗಳನು ಚಾಚುತಿಹುದು ನೊರೆಯು ಉಕ್ಕಿ ಮರಳ ದಡಕೆ ಸೌಖ್ಯ ಪತ್ರವ ಹಂಚುತಿಹುದು -ಪ್ರವರ

ನಾಳೆ ಮಲಗುತ್ತೇನೆ ಉಸಿರಿಲ್ಲದೆ

ನಾಳೆಗಳ ಕಾಯುತ್ತೇನೆ ಒಂದಷ್ಟು ನೆಮ್ಮದಿಗಾಗಿ ಸಿಕ್ಕರೂ ಸಿಗಬಹುದು ಸಾಂತ್ವಾನದ ಸಾವು ಮಲಗುತ್ತೇನೆ ಉಸಿರಿಲ್ಲದೇ. ಮರೆಯಾದ ನೆರಳುಗಳಿಗೆ ಹುಡುಕುತ್ತಿದ್ದಾರೆ ನಮ್ಮ ಜನ ಈ ಕತ್ತಲಲ್ಲಿ, ಘಾಟು ವಾಸನೆ ಮೂಗಿಗೆ ಕರ್ಚೀಫು ಹಿಡಿಯಬೇಕು. ಗಂಟಲಿಗೆ ಅಡರಿದರೆ ಕಷ್ಟ ಕೆಮ್ಮುತ್ತೇನೆ ಬಿಳಿ ಕರ್ಚೀಫಿನಲ್ಲಿ ರಕ್ತಕ್ಕೆ ಕೆಂಪಾದರೂ ಆದೀತು. ನಕ್ಕು ಸುಮಾರು ದಿನಗಳಾದವು ಆ ದಿನ ಇನ್ನೂ ನೆನಪಿದೆ, ಬೇಲಿ ಮೇಗಳ ಹೂವು ಮೆಲ್ಲಗೆ ಸರಿಯುತಲಿತ್ತು ಮುಳ್ಳುಗಳಿಗೆ ತಾಕದಂತೆ. ನನಗೆ ನೆನಪಿಲ್ಲ ತುಟಿ ಹೇಳಿದ್ದು. ಈ ಮಣ್ಣಿನಲ್ಲಿ ಏನೂ ಬೆಳೆಯುವುದಿಲ್ಲವಂತೆ ಇದು ಬರಡಂತೆ, ಬೀಜ ಹಿಡಿದು ಮಣ್ಣೊಳಗಿದ್ದ ಕೈ ಮೂಳೆಗಳು ಕಾಣುತ್ತಿವೆ ಗಾಳಿಗೆ ಮರಳು ಹಾರಿ. ಇನ್ನೂ ತಿರುಗುತಲಿದ್ದ ವಾಚಿನ ಮುಳ್ಳಿನ ಸದ್ದು ಸಣ್ಣಗೆ ಕೇಳುತ್ತಿದೆ, ಗಾಳಿ ಬೀಸಿದ ದಿಕ್ಕಿನೆಡೆ ಮರಳ ದಾರಿ, ಹಗಲು ಇರುಳುಗಳು ಏಕವಾಗಿ ನಾನು ನಾಳೆಗಳನ್ನ ಕಾಯುತ್ತಲೇ ಇದ್ದೇನೆ, ಮೂಕಗೊಂಡು ನೋಡುತ್ತಾ ನಿಂತ ಅಸ್ಥಿಗಳ ಜೊತೆ!!! -ಪ್ರವರ

ರೆಪ್ಪೆ ಕತ್ತರಿಸಿದ ಕಣ್ಣು

Image
ಮೌನವಾಗಿದ್ದೆ ಹಿಡಿ ಮಾತುಗಳೂ ಜೊತೆಗಿದ್ದರೂ, ಸಾವು ಹೆಣೆದಿದ್ದ ಬದುಕಿನಂತೆ, ಆಕಾಶ ಎಂದೂ ಖಾಲಿಯಾಗುವುದಿಲ್ಲ ಅದು ನಮ್ಮ ಕುರುಡಷ್ಟೆ! ಎಲ್ಲವೂ ವಿಸ್ತಾರವಾಗಿ ಹರಡಿಕೊಂಡಿವೆ ಅಣು ಬಾಂಬುಗಳಂತೆ ಸಾವ ಹೆಗಲ ಮೇಲೆ ಕೂರಿಸಿಕೊಂಡಂತೆ ಹಗಲ ಹಲಗೆಯ ಮೇಲೆ ಹಾವುಗಳ ನರ್ತನ, ರೆಪ್ಪೆ ಕತ್ತರಿಸಿದ ಕಣ್ಣಿನಂತೆ ನಾಲ್ಕು ಜನಗಳ ಹೆಗಲು ಗಟ್ಟಿಗಿತ್ತು ಮಸಣ ಮುಟ್ಟಿಸಿದರು, ಸುಟ್ಟ ಮೇಲೆ ಗಾಳಿಯಲ್ಲಿ ಹಾರುತ್ತೇವೆ ಬೂದಿಯಾಗಿ ಧೂಪದ ನಡುವಿದ್ದ ದೇವರುಗಳಿಗೆಲ್ಲಾ ಯಾವಾಗಲೋ ಮೈಲಿಗೆಯಾಗಿವೆ, ನಾವೆಲ್ಲ ಯಾವ ಲೆಕ್ಕ? ಇರುವಷ್ಟು ಕಾಲ ಅತ್ತು ಮುಗಿಸುವ, ಹೂತಿಡುತ್ತಾರೆ, ಮಣ್ಣೊಳಗೆ ನಿಶ್ಚಿಂತವಾಗಿರುವ, ಕಣ್ಣು ಮುಚ್ಚಿ ತಣ್ಣನೆ ಬೆಳಕಂತಿದ್ದ ಬುದ್ದನಂತೆ..... -ಪ್ರವರ

ಮಣ್ಣಾಗಿ ಕಾಯುತ್ತೇನೆ

Image
ಹೆಜ್ಜೆಗಳಿಟ್ಟೂ ಇಟ್ಟು ದಾರಿಯಲ್ಲಿ ಹುಲ್ಲು ಬೆಳೆಯುತ್ತಿಲ್ಲ ಹೆಜ್ಜೆಗಳ ಗುರುತೂ ಮೂಡಿಲ್ಲ ಅಸ್ಪಷ್ಟ ಆಕಾರ. ಖಾಲಿ ಆಕಾಶಕ್ಕೆ ಬೊಟ್ಟು ಮಾಡಿ ನಿಂತ ಬೋಳು ಮರಕ್ಕೆ ತನ್ನ ಬೇರುಗಳ ಆಳ ತಿಳಿಯುತ್ತಿಲ್ಲ ಮಣ್ಣೊಳಗಿದ್ದ ಬಂಡೆ ಎಡತಾಕುತ್ತಿದ್ದರೂ! ಮೈ ಕೊಡವಿ ಕೂರುತ್ತಿಲ್ಲ ತಣ್ಣಗೆ ಗಾಳಿ ಬೀಸಿದರೂ, ಮೈತಾಕಿ ನನ್ನೆಡೆ ತೆವಳುತ್ತಿದ್ದ ನಿನ್ನ ನೆನಪುಗಳು ಬೇರುಗಳೋ ಬಿಳಲುಗಳೊ? ನನ್ನೊಳಗಿಂದ ಇಳಿದರೂ ಇಳಿಯಲಿ ಹೊರಕ್ಕೆಳೆಯಲಾಗದಷ್ಟು ಆಳಕ್ಕೆ, ಮಣ್ಣಾಗಿ ಕಾಯುತ್ತೇನೆ, ನನ್ನೊಳ ಸತ್ವವನೆಲ್ಲವನ್ನು ಹೀರಿ ಹೂವಾಗಿಸು ಬೆರಳು ಹಿಡಿದು ಕೂತವರಿಗೊಂಷ್ಟು ವಾಸನೆ ಬಡಿಯಲಿ, ಆಗಸ ನೀನೆಂದುಕೊಂಡತೆ ಯಾವಾಗಲೂ ಖಾಲಿಯಾಗೇ ಇರದು, ಬಸುರುಗಟ್ಟುತ್ತದೆ, ಒಂದಷ್ಟು ದಿನ ಕಾಯಬೇಕು ನಾನು ಎದುರು ನೋಡುತ್ತಿದ್ದೇನೆ ಸೋನೆ ಮಳೆಗೆ ನೀನು ನನ್ನೊಳಗೆ ಇಳಿಯುತ್ತೀ ಎಂದು! -ಪ್ರವರ