ಸಂಜೆ ಹೊತ್ತು ನೆನಪಾದವರು:(
ಮನೇಲಿ ಕೂತು ಕೂತು ಬೇಜಾರಾಗಿ ಸಂಜೆ ಹೊತ್ತು ಜೋಳದ ಕೂಡ್ಲಿಗಿ ಟಾರು ರೋಡುನಗುಂಟ ಹೊರಟೆ. ದೂರದೂರಿಂದ ಬಂದಿದ್ದ ಮೋಡಗಳೆಲ್ಲಾ ಒಂದಕ್ಕೊಂದು ಆಲಿಂಗನ ಮಾಡಿಕೊಂಡು ಸ್ವಾಗತಿಸುತಿದ್ದವು. ಸೂರ್ಯ ಒಬ್ಬನೇ ಅಲ್ಲೆಲ್ಲೋ ಕದ್ದು ಕೂತು ಇಣುಕುತಿದ್ದ. ನಾಲ್ಕೈದು ದಿನಗಳ ಮಳೆಗೆ ನೆಲ ಮೇಲೆಲ್ಲ ಹಸಿರು ಹಾಸಿತ್ತು, ಪಳುವಕ್ಕನ ಗುಂಡಿಯಲ್ಲಿ ತುಂಬಿದ್ದ ನೀರಲ್ಲಿ ಎಮ್ಮೆಗಳು ಆರಾಮಾಗಿ ಸುಖಿಸುತ್ತಿದ್ದವು. ಈರಯ್ಯಜ್ಜ ಅಲ್ಲೇ ಮರದಡಿಯ ಕಲ್ಲಿನ ಮೇಲೆ ಅಂಡಚ್ಚಿ ಗಣೇಶ ಬೀಡಿ ಸೇದಿ ಬುಸ್ಸೆಂದು ಹೊಗೆ ಬಿಡುತ್ತಿದ್ದ ಹಾಗೆ ಚಳಿಯ ಪರಿಗೆ ಕೈ ಹಾಕಿ ದೇಹದ ಭಾಗಗಳನೆಲ್ಲಾ ತುರಿಸಿಕೊಂಡು ಹಾ ಹಾ ಹಾಅ~~~ ಎನ್ನುತ್ತಾ ಸದ್ದೊರಡಿಸುತ್ತಿದ್ದ. ಆತನೆಡೆಗೊಂದು ಲುಕ್ಕು ಕೊಟ್ಟು ಹೊರಟೆ, ಆತ ಮಾತ್ರ ಫಳ್ಳೆಂದು ಹಲ್ಲಿಲ್ಲದ ಬಾಯ ತೆಗೆದು ನಕ್ಕೇಬಿಟ್ಟ. ಮುಂದೆ ಹೋಗುತ್ತಲೇ ಸಂಕಮ್ಮಜ್ಜಿ ಕಟ್ಟಿಗೆಗಳ ಹೊರೆ ತಲೆ ಮೇಲೆ ಎತ್ತಿಟ್ಟುಕೊಳ್ಳಲು ಕಷ್ಟಪಡುತಿತ್ತು, ಸ್ವಲ್ಪ ಹೊರೆಯ ಎತ್ತಿ ತಲೆ ಮೇಲಿಟ್ಟೆ, ಕೆಳಗಿದ್ದ ಬುತ್ತಿಗಂಟನ್ನು ಕೈಯಾಗ ಕೊಡು ಅಂತು ಕೊಟ್ಟೆ, ನಸ್ಯಾಪುಡಿಗೆ ಕಪ್ಪಗಿದ್ದ ಹಲ್ಲು ಬಿಟ್ಟು ನಗು ಬೀರಿತು ಮುದುಕಿ. ಊರಿಂದ ತುಸು ದೂರ ಬಂದವನೇ ಸುಮ್ಮನೆ ಸೇಂಗಾ ಹಾಕಿದ್ದ ಹೊಲದ್ದಲ್ಲಿ ಕೂತೆ. ಸಣ್ಣಗೆ ಬೆಳಕು ಕರಗುತಲಿತ್ತು, ಕಾಡುಗತ್ತಲು ತುಂಬಿದ್ದ ಮನಸ್ಸಲ್ಯಾರೋ ಲಾಟ...