Posts

Showing posts from July, 2012

ನಾನೊಬ್ಬ ಕೊಳೆತ ಶವ

Image
ತದೇಕ ಚಿತ್ತದಿಂದ ನೋಡುತಿದ್ದರೂ ಅಸ್ಪಷ್ಟ ಚಿತ್ರಗಳೇ, ಕೈಗೆಟುಗ ಹಿಡಿಯಷ್ಟು ಮೊಬ್ಬುಗಪ್ಪು ದೂರದ ಗೆರೆಯ ಮೇಲೆ, ಸುಮಾರು ದೂರದಿಂದ ಹಿಂಬಾಲಿಸುತಲಿದ್ದೇನೆ ಯಾರೆಂದು ತಿಳಿಯದೇ, ನುಸಿ ಮರಳಿನ ಆಳಕ್ಕೆ ಇಳಿದಿರುವ ಹಾಗಿದೆಯಲ್ಲ ನಾನು ಅರೆಕೊಳೆತ ಶವವಿರಬಹುದು ಆಸೆಗಳ ಹುಳುಗಳು ನನ್ನೊಳಗೆ ವಿಲ ವಿಲನೆ ಒದ್ದಾಡುತ್ತಿರಬಹುದು ನೆಲಕ್ ಹಿಡಿದ ಮಂಪರಂತೆ ಅಲೆಯುತ್ತಿದೆ ಮಬ್ಬುಗಪ್ಪು, ಸೂರ್ಯನ ರಶ್ಮಿಯೋ ತೂಕಡಿಸುತ್ತಿದೆ ಮರಳ ಮೇಲೆ, ಚಣ ಚಣಕು ಬಿಸಿಯಾಟ ಕಣ್ಣೊಳ ತಲ್ಲಣಕೆ, ನಡೆದಷ್ಟೂ ದೂರಕ್ಕೆ ಬಯಲ ಬಿಸಿಲಿನ ತಂತಿ ಅದೇ ಆಕೃತಿಯ ಕುಣಿತ ಅದು ನನ್ನ ನೆರಳಿರಬೇಕು ನನ್ನ ಕೊಳೆತ ಶವದ ವಾಸನೆಗೆ ದೂರ ಓಡುತ್ತಿರಬೇಕು     

ಜೋಯಿಸರ ಮನೆಯೊಳಗೆ

Image
ಜೋಯಿಸರ ಮನೆಯ ಜೋಲಿಯೊಳಗಳುತಿದ್ದ ಕಂದನಾ ಕಿವಿಯೊಳಗೆ ಮಂತ್ರಗಳ ಜೋಗುಳ, ಲೋಬಾನದ ಹೊಗೆ, ಹಾಗೆ ಜಗಲಿ ಮೇಲಿದ್ದ ಮುದುಕಿಯಾ ಬೊಚ್ಚು ಬಾಯಿಯ ನಗೆ ತುಳಸಿ ಕಟ್ಟೆಗೆ ತಲೆಯು ತಿರುಗಿಹುದಂತೆ ಶಾರದಮ್ಮಳ ಪೂಜೆಗೆ ಪುಳಕಗೊಂಡು ಮತ್ತೆ ಮೂಡಿದ ಸೂರ್ಯ ಮೂಡಣದಿ ಕೆಂಪಾಗಿ ಜೋಯಿಸರ ಪೂಜೆಗೆ ಜಳಕಗೊಂಡು

ಅಲೆದಾಟ

Image
ಈಸೊಂದು ಕನಸುಗಳ ಹೆಗಲ ಮೇಲೊತ್ತುಕೊಂಡು ರಾತ್ರಿಗಳ ಅಲೆಯುತಿಹ ನಾನೊಬ್ಬ ಅಲೆಮಾರಿ, ಗೆರೆಗಳಬ್ಬರವೆಲ್ಲ ಹಗಲುಗಳುದರದಲಿ ಸರಿದಿಹವು ಕಾಣದಲೇ, ದೂರ ದಾರಿ ಅಲ್ಲೊಂದು ಚಣ ಇಲ್ಲೊಂದು ಚಣ ಮೊಬ್ಬು ಹಗಲಿಗೆ ಕನಸು ಭಾರ ಕತ್ತಲಿಗೆ ಮೈಯಿತ್ತ ದೀಪದಂತೆ -ಪ್ರವರ

ಬೆಂಕಿ ಹೊದ್ದವರು

Image
               ರಾತ್ರಿ ಹನ್ನೊಂದಾಗಿತ್ತು, ಎಲ್ಲರೂ ಬಂದೂಕುಗಳ ಬಿಗಿದಪ್ಪಿ ಮಲಗಿದ್ದರು. ಒಬ್ಬರಿಗೆ ಜೋಗುಳ ಹಾಡುತಿದ್ದ ಅಮ್ಮನಂತಾದರೆ, ಕೆಲವೊಬ್ಬರಿಗೆ ದುಖಃದಲ್ಲಿ ಸಾಂತ್ವಾನ ಹೇಳಿ ಮುತ್ತಿಕ್ಕುತಿದ್ದ ಹೆಂಡತಿಯಂತೆ, ಇನ್ನೂ ಕೆಲವೊಬ್ಬರಿಗೆ ಅದೇ ಎಲ್ಲವೂ. ಭ್ರಷ್ಟ ಸಮಾಜವನ್ನು ಬಂದೂಕು ಹಿಡಿದು ಸರಿ ಮಾಡುತ್ತೇವೆಂದು, ದುಷ್ಟ ರಾಜಕಾರಣಿಗಳಿಂದ ಮಲ ಹತ್ತಿ ಮಲಿನವಾಗಿರುವ ಸಮಾಜವನ್ನು ತುಪಾಕಿ ಹಿಡಿದು ಶುಚಿ ಮಾಡುತ್ತೇವೆಂದು ಹೊರಟು ಬಂದವರಿಗೆ ನಕ್ಸಲರೆಂದು ಹಣೆಪಟ್ಟಿ ಕಟ್ಟಿ ಪೋಲಿಸರಿಂದ ಬೇಟೆಯಾಡುವುದಕ್ಕೆ ಬಿಟ್ಟಿದ್ದರು. ತಪ್ಪಿಸಿಕೊಂಡು ತಪ್ಪಿಸಿಕೊಂಡು ಆಗುಂಬೆಯ ದಟ್ಟಡವಿಯ ಬಂದು ಸೇರಿದ್ದ ಒಂದು ಗುಂಪು, ಈಗಾಗಲೇ ಪೋಲಿಸರ ಗುಂಡಿಗೆ ಸಹ ಸದಸ್ಯರಾದ ಸಿದ್ದು, ಚಿದಾನಂದ ಪ್ರಾಣ ತೆತ್ತಿದ್ದರು. ಉಳಿದಿದ್ದ ಏಳು ಜನರಲ್ಲಿ ಮಂಜುವನ್ನು ಹೊರತುಪಡಿಸಿ ಎಲ್ಲರೂ ಮಲಗಿದ್ದಾರೆ. ಹಾಗಂತ ಇವರೇನು ಓದದವರೇನಲ್ಲ, ನಾಲ್ಕು ಜನ ಕಲಾ ವಿಷಯದಲ್ಲಿ, ಉಳಿದ ಮೂವರು ವಿಜ್ನಾನ ವಿಷಯದಲ್ಲಿ ಪದವಿ ಪಡೆದವರು. ಸಮಾಜದ ತುಳಿತಕ್ಕೆ ಸಿಕ್ಕು ನೋವುಂಡವರು, ಕನಸಿನ ಪ್ರಪಂಚದ ನಿರ್ಮಾಣಕ್ಕಾಗಿ ತಮ್ಮದೇ ಹಾದಿ ಹಿಡಿದು, ಅಪ್ಪ ಅಮ್ಮ ಸೇಹಿತರೆಲ್ಲರನ್ನೂ ಬಿಟ್ಟು ಬಂದವರು. ಪ್ರಾಣ ಹಾರಿ ಹೋಗಬಹುದೆಂದು, ಅಂಗ ಊನರಾಗೀವೆಂದು ಭಯದಿಂದಲೂ ನಡುಗುತ್ತಲೂ ಮಲಗಿದ್ದರು. ಬೆಳಕಿಗೆಂದು ಹಚ್ಚಿದ್ದ ಪಂಜುಗಳೆಲ್ಲಾ ಆರಿಸಿಯಾಗಿದೆ, ದಟ್ಟ ಡ ವಿಗೆ ಕಗ್ಗತ್ತಲ ಸೆರಗು ಹೊಚ್ಚಿತ್ತು