Posts

Showing posts from April, 2013

ಬೆತ್ತಲು ದೇಹ, ಸಿಂಬೆ ಸುತ್ತಿದ ಹಾವು

ತೊಟ್ಟಿಕ್ಕುತಿದ್ದ ಹನಿಗಳು ಶುಭ್ರವಾಗಿದ್ದವು, ಚಿಗುರೆಲೆ ಸ್ವಲ್ಪವೂ ಅಲುಗಾಡಲೇ ಇಲ್ಲ ಗಾಢ ಏಕಾಗ್ರತೆ ನೀರ ಮೇಲ್ಮೈಗೆ ಅಂಟಿಕೊಂಡ ದೋಣಿ ಮುಂದೆ ಚಲಿಸುತ್ತದೆ ಹುಟ್ಟಿನ ಬಲವಿಲ್ಲದೇ, ಕಾಲ ತಳ್ಳುತ್ತದೆ, ಚಲಾವಣೆಗೆ ಬರುವವರೆಗೂ ನಿಸ್ತೇಜ ದೇಹ, ಒಣಗಿದ ಕೊಂಬೆಗಳಲ್ಲಿ ಗೂಡುಗಳಿನ್ನೂ ಇವೆ, ಕನಸುಗಳ ಅಂಟಿಸಿಕೊಂಡು ಕಾಯುತ್ತಿವೆ. ಪೊಟರೆಗೋ ಮೌನದ ಅಮಲು ಒಳಗೊಳಗೆ ಗೂಬೆ ಕಣ್ಣು ರಾತ್ರಿಗಷ್ಟೆ ನೋಟ, ಚಂದ್ರನ ನೆರಳು; ಬೆಳ್ಳಗೆ ಬೆಳದಿಂಗಳು ಹಗಲ ಸಾಲ ಪಡೆದಂತೆ, ಹರಡಿಕೊಂಡು ಕುಳಿತಿರುವ ಚುಕ್ಕೆಗಳ ಎಣಿಸಲು ಸಂಖ್ಯೆಗಳಿಲ್ಲ, ಗಾಳಿಯೊಳಗೆ ತೇಲಿಬಿಟ್ಟ ಏರುಸಿರು, ಮೈಥುನವಾದ ಮೇಲೆ ಮೈ ತಣ್ಣಗೆ, ಅಂಗಾತ ಬೆತ್ತಲು ದೇಹ, ಸಿಂಬೆ ಸುತ್ತಿದ ಹಾವು. -ಪ್ರವರ

ಮುಗಿಯಬಾರದು ಸಂಜೆ

ಕೆಂಪು ಸಂಜೆಗೆ ಸಿಗು ಒಮ್ಮೆ ಹುಡುಗಿ ಮಾತನಾಡುವುದಿದೆ ನಿನ್ನೊಟ್ಟಿಗೆ, ಗಿಣಿಹಸಿರು ಸೀರೆಯಲಿ ಬಳುಕುತ್ತ ಬರಬೇಕು ಅಮಲೇರಬೇಕು ಈ ಕಣ್ಣಿಗೆ. ಮರದಡಿಗೆ ಬಿದ್ದಿರುವ ಒಣಗಿದೆಲೆಗಳ ಮೇಲೆ ಸದ್ದು ಮಾಡುತ ನಿನ್ನ ಗೆಜ್ಜೆ ಕುಣಿಸು, ಬಾಯಾರಿ ಕುಳಿತಿರುವೆ, ವಿರಹದಲಿ ಕಾದಿರುವೆ ಹೂದುಟಿಯ ಅಂಟಿಸಿ ನನ್ನ ತಣಿಸು     ಸಪೂರ ನಡುವನ್ನು ಮನದಣಿಯೆ ಬಳಸಿ ನಡೆಯಬೇಕಿದೆ ಕಾಲು ನೋಯುವಂತೆ, ತಂಡಿಗಾಳಿಗೆ ರೋಮ ನಿಮುರಿಕೊಳ್ಳುವ ವೇಳೆ ಬಾಚಿ ತಬ್ಬಿಬಿಡು ಬಿಸಿ ಏರುವಂತೆ  ನಿನ್ನೊಡನಿರುವಷ್ಟು ಕಾಲ ಮುಗಿಯಬಾರದು ಸಂಜೆ ಮನೆಯ ಸೇರಿದೊಡೆ ಮತ್ತೆ ವಿರಹ, ಮೈ ಮನದ ತುಮುಲಗಳು ಬಿಸಿ ಹೆಂಚಿನಂತೆ ಅದಕೆ ಹಾಳೆಯೊಳು ನನ್ನ ಬರಹ -ಪ್ರವರ

ಕೆಂಪು ಕೂಗು

ಮೈಮೇಲೆಲ್ಲಾ ಹಚ್ಚೆ ಹೊಯ್ಯಿಸಿಕೊಂಡ ಗೋಡೆಗಳಲ್ಲಿ ಶತಮಾನಗಳಷ್ಟು ನೋವಿದೆ, ಕೂಗಿದೆ, ಆರದ ಗಾಯಗಳಿವೆ, ಕಣ್ಣುಗಳಿಗೆ ಕಂಡಿದ್ದು ಮಾತ್ರ ಕೆಂಪು ಬಣ್ಣದ ದಿಕ್ಕಾರ ದಿಕ್ಕಾರ ರಕುತದ್ದು; ಹಿಡಿದ ಬೋರ್ಡು ಸ್ಲೋಗನ್ನುಗಳಿಗೆ ಕಿಂಚಿತ್ತು ಬೆಲೆ ಇಲ್ಲ, ಬಿಸಿ ಹೆಂಚಿನ ದಾರಿಯಲ್ಲಿ ನಡೆದ ಕಾಲುಗಳಿಗೆ ಸಿಕ್ಕದ್ದು ಬರೆ ಮಾತ್ರ, ಅಳದಿದ್ದರೂ ಕಣ್ಣುಗಳಲ್ಲಿ ಹತಾಶ ಮೌನವಿಲ್ಲ, ಎದೆಯೊಳಗಿನ ಬೆಂಕಿಗೆ ಹತ್ತಿ ಉರಿದದ್ದು ಬಸ್ಸಿನ ಟಯರ್ರುಗಳು, ಮಡಕೆ ತಲೆಯಿದ್ದ ಪ್ರತಿಕೃತಿ, ದನಿ ಏರಿದರೆ ಪೊಲೀಸರ ಬೂಟುಗಾಲಿನೊದೆ, ಲಾಠಿಚಾರ್ಜ್; ನೆಲಕ್ಕೆ ಬಿದ್ದರೂ ಪ್ರತಿಭಟನೆಯ ಸಣ್ಣಗಿನ ಕೂಗು ಮಾರ್ದನಿಸದೇ ಹೋಯ್ತು. ಚಲ್ಲಾಪಿಲ್ಲಿ ದಿಕ್ಕುಗಳು, ನಮ್ಮ ಹಕ್ಕುಗಳ ನಮಗೆ ಕೊಡಿ ಎನ್ನುವಾಗ ಹಣೆಗೆ ಕಪ್ಪು ಪಟ್ಟಿ, ಕಚ್ಚಿ ಹಿಡಿದ ನಾಲಿಗೆ, ಒಸರುತಿದ್ದ ಬೆವರು; ಹಿಡಿ ಹಿಡಿ ಸಿಟ್ಟು ತುಕ್ಕುಹಿಡಿದ ಜೈಲ ಕಂಬಿ, ಹರಿದ ಚಪ್ಪಲಿಗಳ ಹೊರತು ಅಲ್ಲಾರು ಇಲ್ಲ ಎದೆಮಟ್ಟ ಹರಡಿದ್ದ ಕೆಂಧೂಳ ನಡುವೆ ಗೋಡೆ ಮೇಲೆನ ಕೆಂಪು ಬಣ್ಣದ ದಿಕ್ಕಾರವಿದೆ, ಈವರೆಗೆ ಯಾರ ಕೈಯಲ್ಲೂ ಅಳಿಸಲಾಗಿಲ್ಲ, ಪ್ರತಿಭಟನೆಯ ನಿಲ್ಲಿಸಲಾಗಿಲ್ಲ.

ಕತ್ತಿಗಳಿಗೆ ಜೇಡ ತುಂಡರಿಸಲಾಗುತ್ತಿಲ್ಲ

ಇತಿಹಾಸವಾಗಬೇಕೆಂದು ಸಾವಿರಾರು ಜನರಗಳ ಎದೆ ಬಗೆದು ವೀರಗಲ್ಲು, ಮಾಸ್ತಿಗಲ್ಲು, ಶಾಸನಗಳ ಕೆತ್ತಿಸಿದರು; ಈಗ ಅವೆಲ್ಲಾ ಮಣ್ಣೊಳಗೆ ಹುದುಗಿ ಹೋಗಿವೆ;. ರಕುತ ಕಾರಿ ಸತ್ತವರ ಸೂತಕದ ಮನೆಗಳಿಗೆ ಬೀಗ ಜಡಿದಾಗಿದೆ, ಕೀಲಿ ಕೈ ಹೊಟ್ಟೆಯೊಳಗಿಟ್ಟುಕೊಂಡು ಮಲಗಿಬಿಟ್ಟರು, ಅಲ್ಲಿ ಮೌನದ ದೀರ್ಘ ಡೇಗು. ಗೋಡೆಗೆ ನೇತುಬಿಟ್ಟಿದ್ದ ಕತ್ತಿ-ಗುರಾಣಿಗಳು ಮೊಂಡಾಗಿವೆ, ಕಟ್ಟಿರುವ ಜೇಡವ ತುಂಡರಿಸಲಾಗುತಿಲ್ಲ; ಗೋಡಗಳ ಸಂದಿಯಲ್ಲಿ ಬೀಜಗಳು ಕಣ್ಣು ಬಿಡುತ್ತಿವೆ, ಬಿರುಕು ಬಿಡಲು ಹೆಚ್ಚೇನು ಹೊತ್ತು ಬೇಕಾಗಿಲ್ಲ ಬೆಳೆವ ಬೇರುಗಳಿಗೆ ಹಾವುಗಳ ಕಾಲು. ಮಣ್ಣ ಪದರಗಳ ನಡುವೆ ತೆರೆಚಿದ ಗಾಯಗಳು, ಅಲ್ಲೇ ನರಳಾಟ. ಮಕ್ಕಾಡೆ ಮಲಗಿದ್ದಾವೆ, ಮೊಂಡಾಗಿವೆ ನೋಡು ರಾಜನ ಮುಖ ಕೆತ್ತಿದ್ದ ಪದಗಳ ಜೊತೆ; ಗೆದ್ದೆ ಎಂದು ಬೀಗಿದವರು! ಎದ್ದು ನಿಲ್ಲಲೂ ಆಗುತ್ತಿಲ್ಲ... -ಪ್ರವರ

ಯುಗಾದಿಗೊಂದು ಬೇಡಿಕೆ

ಹಸಿರುಟ್ಟ ಮಾಮರವೆ ಹೂಬಿಟ್ಟ ಬೇವ್ ಮರವೆ ದಾರಿಗುಂಟಲಿ ಹರವಿ ನಿಮ್ಮ ಚೆಲುವ;|| ಮನೆಯ ಬಾಗಿಲಿಗೆ ಬೇಕಿಲ್ಲ ತೋರಣ, ನಿಶ್ಯಕ್ತ ಜೀವಕ್ಕೆ ನೀಡಿ ಬಲವ|| ಬಳ್ಳಿಗಂಗಳ ನಡುವೆ ಉಂಗುರದ ಕೈಬೆರಳು, ಮುಳ್ಳು ಬೇಲಿಯ ಹಿಡಿದು ಬದುಕಿದಂತೆ|| ಸುಖದ ನಾಳೆಗಳ ಬೇಡಿಲ್ಲ ಈವರೆಗು, ಕೊಡು ಬದುಕ ಸಿಹಿ-ಕಹಿಯ ಕಲೆಸಿದಂತೆ|| ಅಂಡಲೆದ ಕಾಲಗಳ ಬಾಸುಂಡೆ ಮೈಮೇಲೆ, ಆವಿಯಾಯಿತು ನೋಡು ರಕುತ ಬೆವರು|| ನೀನು ದೇವರಂತೆ ಹೊಸ ವಸಂತವಂತೆ ನೋವುಗಳ ಮೇಲೆ ಮುಲಾಮು ಸವರು|| -ಪ್ರವರ

ಹಸಿವು ಎಂದರೆ ಬೂಟು ನೆಕ್ಕಲು ಹೇಳುತ್ತಾರೆ!!!

ಹಸಿವು ಹೆಗಲೇರಿ ಬಿಕ್ಕಿ ಅಳುತಿದ್ದರೆ ಬೂಟುಗಾಲು ತೋರಿಸಿ ನೆಕ್ಕಲು ಹೇಳಿದರು, ಕಣ್ಣೀರು ಬೂಟು ತಾಕಿದರೆ ಪಿಸ್ತೂಲು ಹಣೆಗೆ, ಜೇಡಕ್ಕೆ ಹೆಣೆದುಕೊಂಡಂತಿರಲಿ ರೆಪ್ಪೆಗಂಟಿದ ನೋವುಗಳು. ಬಿಲ್ಡಿಂಗುಗಳಡಿಯಲ್ಲಿ ಮೈಮುರಿದು ಬಿದ್ದಿರಬೇಕು; ಮುಖವರಳಿಸಿ ನಕ್ಕರೆ ತುಪುಕ್ಕೆಂದು ಉಗಿದಾರು; ತೊಟ್ಟ ಬಟ್ಟೆಯಲ್ಲೇ ಒರೆಸಿಕೊಳ್ಳುವ ಮುಗ್ಧತೆ ಬೆನ್ನಿಗೆ, ಹಸಿವಿಗೆ ಅಂಗಲಾಚಿ ಕಕ್ಕಸ ಗುಂಡಿಗೆ ಕೈ ಮುಗಿದು ನೆಗೆದರೂ ತುತ್ತು ಅನ್ನ ಗಂಟಲು ಸೇರಲಿಲ್ಲ, ಉಸಿರು ಕೈಹಿಡಿಯದೇ ಬಿದ್ದ ಶವದ ಅನಾಥ ಸಾವಿಗೆ ಅಯ್ಯೋ ಎನ್ನುವವರಿಲ್ಲ; ಮೂಗು ಮುಚ್ಚಿಕೊಂಡು ಥೂ ಎಂದವರೇ ಹೆಚ್ಚು ಬಿಳಿಯಂಗಿ ತೊಟ್ಟ ಜನ; ಹೊಟ್ಟೆ ಬಿರಿತ ಜನ, ಕೂಗಲಿನ್ನೆಲ್ಲಿಯ ದನಿ, ಹೊಟ್ಟೆಯಲ್ಲಿ ಇದ್ದರೇ ತಾನೆ ಒಂದು ಹಿಡಿ ಕೂಳು, ಹೆಂಡತಿ ಮಕ್ಕಳ ಬಿಕರಿಗಿಟ್ಟೂ ಬೊಗಸೆ ಚಾಚಿದರು, ಕೊನೆಗೆ ಅನ್ನದ ಬದಲು ತುಂಬಿದ್ದು ಉಗುಳು; ಅವರಾರು ಕಾಣುತಿಲ್ಲವೆಂದು ಕೂಲಿಂಗ್ ಗ್ಲಾಸು ಹಾಕಿಕೊಂಡರು, ವೈಭೋಗದ ಮನೆಯಲ್ಲಿ ಅಕ್ಷತೆಯಾದ ಅಕ್ಕಿ ಸೆಂಟು ವಾಸನೆಯ ಜನಗಳ ಚಪ್ಪಲಿಯಡಿಯಾಳಾಯ್ತೇ ಹೊರತು ಹಸಿದು ನಿಂತವರ ಹೊಟ್ಟೆಗೆ ತುತ್ತು ಕೂಳಾಗಲಿಲ್ಲ -ಪ್ರವರ

ಜೀಕುವ ಮುಂಗುರುಳು

Image
ಮುಂಗುರಳನ್ನು ಅದೆಷ್ಟು ಹೊತ್ತಿನಿಂದ ತಿರುವುತ್ತಲೇ ಇದ್ದೀಯಲ್ಲ, ಕೆನ್ನೆ ಸವರಿ ಛೇಡಿಸುತಿದ್ದ ಅದನ್ನು ಹಾಗೇ ಇರಲು ಬಿಡು, ನಾನು ಮುಟ್ಟದ ಹೊರತು ಕೆಂಪೇರಬಾರದು;  ಬಳ್ಳಿಯುಂಗುರ ಹೀಗೆ ನಿನ್ನ ಮುಂಗುರುಳಂತೆ ಬಳುಕುತ್ತದೆ, ಬಳಸಿ ನಿಂತರೆ ನಾಚಿಕೆಗೆ ಮೇಲೆ ಪುಟಿಯುತ್ತದೆ  ಮಳೆ, ಧೂಳು, ಸಣ್ಣಗಿನ ಸುಳಿಗಾಳಿ ಎಲ್ಲವೂ ಅದರೊಳಗೆ ಗಾಢವಾಗಿ ಧಾನಿಸುತ್ತಾ ಕೂರುತ್ತವೆ ಜಾರುವಾಟವಾಡುತ್ತವೆ ಜಾರು ಸೊಂಟದ ಮೇಲೆ ಬೆರಳಾಡಿಸಿದಂತೆ. ಎದೆಯುಬ್ಬಿಸಿ ಜೋರಾಗಿ ಉಸುರುವಾಗ ಚಂಗನೆ ಹಾರಿ ಜೀಕುತ್ತದೆ ಒಮ್ಮೆ ಹಿಂದಕ್ಕೂ, ಇನ್ನೊಮ್ಮೆ ಮುಂದಕ್ಕೂ ಜೋಕಾಲಿ; ನಿನ್ನ ಅರ್ಧ ಕಣ್ಣನ್ನು ಮುಚ್ಚಿ ತೂಗಿ ತೊನೆಯುವ ಆ ಮುಂಗುರುಳದೇ ಜಾದೂ  ಅದೆಷ್ಟು ಕಣ್ಣುಗಳು ನಿನ್ನ ಮೇಲೆ ಸುಳಿದಾಡುತ್ತಿವೆ, ಮೊದಲು ಲಟಿಕೆ ಮುರಿದು ದೃಷ್ಠಿ ತೆಗಿಸಬೇಕು; ಹಾಗೆ ನೇವರಿಸದೇ ಬಿಡು ಹುಡುಗಿ ನಿನ್ನ ಮತ್ತೆ ಮತ್ತೆ ನೋಡಬೇಕು.

ರಾತ್ರಿ ಹಬ್ಬಕ್ಕೆ ಮೈಥುನವಿಲ್ಲದಿದ್ದರೆ ಹೇಗೆ?

Image
ರಾತ್ರೋ ರಾತ್ರಿ ಹಬ್ಬ; ರಂಗಿಲ್ಲ, ತೇರುಗಳ ಹಂಗಿಲ್ಲ ಜನಜಂಗುಳಿಯ ಗುಂಗಿಲ್ಲ; ಅದು ಕತ್ತಲ ದಿಬ್ಬ ದಿಟವಾಗಿಯೂ ಅದು ಕತ್ತಲ ಹಬ್ಬ, ದಾರಿಗುಂಟ ಗಿಜಿಗುಡುವ ತರಹೇವಾರಿ ಮುಖಗಳಿಲ್ಲ ಇದ್ದರೂ ಕಾಣುವುದಿಲ್ಲವೆನ್ನುವುದೇ ಸಮಾಧಾನ; ಖುಷಿ ಪಡುವ ಕಣ್ಣುಗಳು ಕುರುಡಾಗಿದ್ದಕ್ಕೆ. ಕೇಳುವ ಮನಸ್ಸಿದ್ದರೆ ಗೋಡೆ ಹಿಂದಿನ ಪಿಸುಮಾತುಗಳ ಹಾಗೆ ಕೇಳಿಸಿಕೊ; ರೋಮಗಳು ನಿಮುರಿಕೊಂಡಾವು ಬೆವರು ಅದರಗುಂಟ ಜಾರಲು ಶುರುವಿಡುತ್ತವೆ ಮೈ ಒದ್ದೆಯಾಗಲು ಹೆಚ್ಚು ಹೊತ್ತೇನು ಹಿಡಿಯುವುದಿಲ್ಲ ಬಿಸಿ ರರುತದ ಒಳ ಹರಿವು ಜೋರಿದ್ದರೆ ಮತ್ತೇನು ಕೇಳುವುದು, ಕತ್ತಲೊಳಗೆ ನಮಗೆ ನಾವೇ ಕಾಣದಿದ್ದಾಗ ಯಾರು ನೋಡಿಯಾರು ಮೆತ್ತಗೆ ಹೆಜ್ಜೆಯಿಡು; ಒದ್ದೆ ಅಂಗಿಯೊಳಗೆ ಗಾಳಿ ಹರಿದಾಡಲಿ ಕೇರೆ ಹಾವಿನಂತೆ ನಿರಾಳದ ಉಸಿರೀಗ ಬಿಡಬಹುದು; ಒಮ್ಮೆ ನಿಚ್ವಾಸ ಇನ್ನೊಮ್ಮೆ ಉಚ್ವಾಸ. ನೆಲಕ್ಕೆ ಕಾಲು ಸವರುತ್ತಾ ನಡೆಯುವಾಗ; ಬೆರಳಿಗಟೆಯುವ ಬಂಡೆಗಲ್ಲ ಮೇಲೆ ಅಂಗಾತ ಮೈ ಹರಡು; ಚುಕ್ಕಿ ಚಂದ್ರಮರ ಮುಖಗಳ ಮುಚ್ಚಿದ್ದು ಮೋಡದ ಸೆರಗು ಒಳಗೊಳಗೆ ನಡೆದದ್ದು ಕಾಣಲೂ ಇಲ್ಲ ; ಕೇಳಿಸಲೂ ಇಲ್ಲ ಇದು ಬಿಕನಾಸಿ ರಾತ್ರಿ ಹಬ್ಬವಲ್ಲವೆ? ಮೈಥುನವಿಲ್ಲದಿದ್ದರೆ ಹೇಗೆ ಸಡಗರಕ್ಕೆ ಸ್ಖಲ್ಲನವಾಗದಿದ್ದರೆ ಹೇಗೆ!!! -ಪ್ರವರ

ಮೈಯ ಬೆವರ ನೈವೇದ್ಯ

Image
ಗುಳೆ ಹೊರಟು ನಿಂತ ಕನಸುಗಳ ತಡೆಯಲಾರದೇ ಬಿಕ್ಕಿಸಿ ಅತ್ತು ಮೂಲೆ ಹಿಡಿದಿದ್ದ ಮಾತುಗಳನ್ನು ಹಿಡಿದು ರಮಿಸಿ ಪದ್ಯವಾಗಿಸಲು ಬರೆಯುತ್ತೇನೆ ಇದೋ ಮರಳುಗಾಡು ಮರಳಿನೊಳಗೆ ಕಪ್ಪೆ ಹುದುಗಿ ಎಂದೋ ಬರುವ ಮಳೆಗೆ ಅಂಡು ನೋಯುವಂತೆ ಕಾಯಬೇಕು; ನಾನೇನು ಕಪ್ಪೆಯಲ್ಲ ಜೀವ ಹಿಡಿದುಕೊಂಡುಕಾಯಲು; ಎಲ್ಲೋ ಓಡುವ ಮೋಡಗಳ ಗುಪ್ಪೆ ಹಾಕಲು ಬರೆಯುತ್ತೇನೆ ಹಿಡಿ ಮಣ್ಣಿಗೆ ಎದೆ ಪೀಠ ಒಳಗೊಳಗೆ ಹೊಯ್ದಾಟ; ತೂಕಡಿಸುವ ನೆರಳಿಗೆ ಮೈಯೊಡ್ಡಿ ನಿದ್ದೆ ಬೇಡಿದವರಲ್ಲ; ನಿಗಿ ನಿಗಿ ಕೆಂಡದ ನೆಲಕ್ಕೆ ಮೈಯ್ಯ ಬೆವರ ನೈವೇದ್ಯ, ಕೂನಿ ಕಹಾನಿಯ ಹೊತ್ತು ನಿಂತ ಜಾಲಿ ಗಿಡಕೆ ನೂರು ಕಣ್ಣು, ಸಾವಿರಾರು ಕೋರೆಹಲ್ಲು; ಒಂದು ಬಿಳಿಯ ಹೂವ ಅರಳಿಸಲು ಬರೆಯುತ್ತೇನೆ; ನನ್ನನ್ನೇ ಮುಕ್ಕಿದ ಮುಖದ ಚಹರೆಗಳ ಬದಲಿಸುತ್ತೇನೆ; ಇದೇನು ತೀಟೆಯಲ್ಲ ತೊಡೆ ತಟ್ಟುವ ಹಠ; ನಾನು ನಾನಾಗಿಯೇ ಇರಲು ಬರೆಯುತ್ತೇನೆ. -ಪ್ರವರ

ಬೇರು ಮತ್ತು ರೆಕ್ಕೆ

Image
ಬದುಕುಕೆಂದರೆ ಬರೀ ಬದುಕುವುದಲ್ಲ! ನೆಲವ ಕಚ್ಚಿ ಕೆದಕಬೇಕು ರೆಕ್ಕೆ ಬಿಚ್ಚಿ ಹಾರಬೇಕು ಬೇರೊ ಬಿಳಲೊ; ಮಣ್ಣೆಂಬ ಮಣ್ಣು ಎದೆ ತೆರೆದಿಡಬೇಕು, ಅದೆಷ್ಟೋ ಅತೃಪ್ತ ದೇಹಗಳು ಇಲ್ಲೇ ಕರಗಿ ಹೋಗಿವೆ ಮಣ್ಣೊಳಗೆ, ಕರಗದೇ ಉಳಿದದ್ದು ಬುರುಡೆ ಮತ್ತವರ ಅದಮ್ಯ ಬಯಕೆಗಳು, ಯಾರಿಗೂ ಕರಗಿಸಲಾಗಿಲ್ಲ ಈವರೆಗೆ.... ಬೇರುಗಳಿಗೆ ಎಟುಕಬಹುದು ಚಾಚಿ ನೋಡಬೇಕು, ಮುಂದೊಂದು ದಿನ ಕೊಂಬೆಗಳಂಚಿಗೆ ಹೂವುಗಳಾಗುತ್ತವೆ, ಕಂಕುಳಲ್ಲೇ ಮುದುರಿಟ್ಟ ಜೋಡು ರೆಕ್ಕೆಗಳಿನ್ನು ಬಲಿತಿಲ್ಲ ಕಾಯುತ್ತಾ ಕೂತರೆ ಕೂದಲಿಗೆ ಮುಪ್ಪೇರುತ್ತದೆ. ಹಾರಲಾರೆನೆಂದು ಬಿಸಿಯುಸಿರು ಬಿಡುತ್ತಾ ಕೂತರೆ ಮುಟ್ಟಲಾಗದು ನಭವ; ಕೊನೆಪಕ್ಷ ಬಾಣಗಳಿಗೆ ಸಿಕ್ಕು ಕತ್ತರಿಸಿ ಬಿದ್ದ ರಕ್ತ ಹತ್ತಿದ ಪುಕ್ಕಳನ್ನಾದರೂ ಕಟ್ಟಿಕೊಂಡು ಏಣಿ ಹಾಕುತ್ತೇನೆ; ದುಡಿದವರ ಮೈಯ ಬೆವರು ಮೋಡಗಳಾಗಿವೆ, ಕೂಡಿಸಿ ಮಳೆಯಾಗಿಸುತ್ತೇನೆ ತಂಪಾಗಲಿ ನೆಲ -ಪ್ರವರ