Posts

Showing posts from October, 2013

ಹಸಿದ ತಕ್ಕಡಿ

ಬಿರಿದ ಹಗಲುಗಳಲ್ಲಿ ನಮ್ಮನ್ನೇ ಕಾಯುತಿದ್ದಾರೆ ಖೂನಿ ಮಾಡವ ಮಂದಿ ಅಗೋ ಫಳಗುಡುವ ಅಲಗು ಇಗೋ ಸುಡುತಲಿದೆ ಮುಗಿಲು ಪಕ್ಕೆಲುಬಿಗೆ ಅಂಟಿದ ಮಾಂಸವನ್ನು ಕೊಯ್ದು ತೂಗಿ ಮಾರುವವರಿದ್ದಾರೆ ಪಿಂಜಾರರ ಹುಡುಗ ದೊಗಲೆ ಪ್ಯಾಂಟು ಏರಿಸುತ್ತಾ ಓಡಿದ ರಕುತ ಅಂಟಿದ ತಕ್ಕಡಿಗೆ ಅದೆಷ್ಟು ಹಸಿವಿರಬಹುದು ಅದೆಷ್ಟು ದಾಹವಿರಬಹುದು ಒಂದು ಕಡೆ ಭಾರ ಮತ್ತೊಂದೆಡೆ ಹಗುರ ಚಂದಿರನ ತುಂಡರಿಸಿ ಹಾಕಿದರೂ ತೂಕದ ಕಲ್ಲು ಮೇಲೇಳಲೆ ಇಲ್ಲ ಸಮುದ್ರದಲೆಗಳು ನೀಣು ಬಿಗಿದುಕೊಂಡವು ತೋಳಗಳು ಬಾಲ ಮುದುರಿಕೊಂಡವು ಮೈಯತ್ ಬೀಳುತ್ತಲೇ ಮಸಣಗಳು ತುಂಬಿ ಹೋದವೊ ಹೂಳಲು ರೊಕ್ಕ ಕೇಳಿದರು ಖಾಲಿ ಬಕಣಗಳ ನೋಡಿ ಅನಾಥ ಮಾಡಿದರೊ "ಅವ್ವಾ ತಾಯಿ ದಫನು ಮಾಡಲು ನಿನ್ನ ಕೆನ್ನಾಲಿಗೆಯ ಚಾಚು" ಸಿಂಬಳ ಸೀಟುತ್ತಾ ಅವಲತ್ತುಕೊಂಡರು ಖೂನಿ ಮಾಡುವ ಮಂದಿ ರಕುತ ಅಂಟಿದ ತಕ್ಕಡಿ ಮೊಲೆ ಚೀಪುತಿದ್ದ ಕೂಸುಗಳ ಜೊಲ್ಲು ಸುರಿಸುತ ನೋಡುತ್ತಾ ಕುಂತವು

ಬಿಸಾಡಿದಂಥ ಚುಕ್ಕಿಗಳು

ನೋಡು ಹುಡುಗಿ , ಅಲ್ಲಿಂದಿಲ್ಲಿಗೆ ಓಡಾಡುವ ಚಂದಿರನ ಬೆಳದಿಂಗಳು ನಮ್ಮ ಕೋಣೆಯ ಹೊಸ್ತಿಲನ್ನು ದಾಟದಂತೆ ನಿರ್ಬಂಧಿಸಿದ್ದೇನೆ ಈಗೀಗ ತಾನೆ ಆವರಿಸಿಕೊಳ್ಳುತ್ತಿರುವ ಕತ್ತಲು ಮತ್ತದರ ಹಪಹಪಿ ಏನೆಂದು ಅರ್ಥ ಮಾಡಿಕೊಳ್ಳಬೇಕು , ನನ್ನ ಕಾಣುವಲ್ಲಿನ ನಿನ್ನ ಕುರುಡುತನ , ನಿನ್ನ ಕಾಣುವಲ್ಲಿನ ನನ್ನ ಕುರುಡುತನ ಸದ್ಯ , ಯಾರಿಗೂ ಕೇಳದಂಥ ಮೈಥುನದ ಸುಖವಾದ ನೋವು ಹೇಳಲಾಗದ ಅನುಭವ , ಹಿಡಿಯಲಾಗದ ಬೆಳಕು ರಾತ್ರಿಯಲ್ಲಿ ಆಕಾಶದ ತುಂಬೆಲ್ಲಾ ಬಿಸಾಡಿದಂಥ ಚುಕ್ಕಿಗಳು , ಈಗ ನಿನ್ನ ಬೆತ್ತಲೆಯ ದೇಹವನ್ನು ಬೆವರಿನ ರೂಪದಲ್ಲಿ ಅಂಟಿಕೊಂಡಿವೆ ಸಾಂಕ್ರಾಮಿಕವೆಂಬಂತೆ , ನಿನ್ನಿಂದ ನನಗೂ ಕೂಡ ನಿನ್ನ ಪ್ರಕೃತಿಯಂಥಹ ದೇಹದಲ್ಲಿ ಮಗುವಾಗುವ ಸಂಭ್ರಮ ; ಅಲ್ಯಾವ ಅಹಮು , ಗತ್ತು , ಸೊಕ್ಕು ಹುಟ್ಟಲಿಲ್ಲ ಕೇವಲ ಒಂದು ಹೆಣ್ಣು , ಒಂದು ಗಂಡು , ಮತ್ತೊಂದು ರಾತ್ರಿ ಅದ್ಯಾವುದೋ ಪರಿಮಳ ಹರಡಿಕೊಂಡ ಕೋಣೆ ಬೆವರದ್ದೋ , ಹೂವಿನದ್ದೋ ತಲೆ ದಿಮ್ಮೆನಿಸುವಂಥಾ ಮತ್ತು ಏರುಸಿರು ಬಿಡುತ್ತಾ ಒಬ್ಬರಿಗೊಬ್ಬರು ಸುತ್ತಿಕೊಳ್ಳುವ ಆ ಪರಿ ನಾವುಗಳು ಹಾವುಗಳೇ ಎನ್ನಿಸುತು ಕತ್ತಲಲ್ಲಿ ಹೂತಿಟ್ಟ ಬೀಜ ನಿನ್ನೊಳಗೆ ಪ್ರಖರ ಬೇರುಗಳ ಇಳಿಬಿಡುತ್ತಿದೆ ಚೂರು ರಕ್ತ ಸಿಂಪಡಿಸಿ ತುಟಿ ಕಚ್ಚಿಕೊಂಡದ್ದು ಪೊರೆ ಕಳಚಲಿಕ್ಕೋ ಅಥವಾ ದಾರಿ ಮಾಡಿಕೊಡುವುದಕ್ಕೋ ಕೊನೆಗೂ ತಿಳಿಯಲಿಲ್ಲ , ಹೆಣ್ಣಾಗಿ ನಿನಗೆ ಅದು ಒಮ್ಮೆಲೇ ಧುಮ್ಮಿಕ್ಕುವ ಜಲ