Posts

Showing posts from December, 2009

ಭಘ್ನ ಪ್ರೇಮಿ

Image
ಏಕೆ , ಮೊನ್ನೆ ಕೆರೆ ಏರಿಯ ಮೇಲೆ ಬರುವೆನೆಂದು ಏಕೆ ಬರಲಿಲ್ಲ? ಏನಾದರು ಮನೆಯಲ್ಲಿ ತೊಂದರೆಯಾಯ್ತೆ? ಅಥವಾ ನಾನೆ ಮರೆತುಹೋದೆನೆ ನಿನಗಾಗಿ ಅಮ್ಮ ಮಾಡಿದ್ದ ಕರ್ಜಿಕಾಯಿಗಳ ತಂದಿದ್ದೆ ಜೊತೆಗೆ ತಂಗಿ ಕಟ್ಟಿದ್ದ ಮೊಳ ಹೂವು ತಂದಿದ್ದೆ ನಿನಗಾಗಿ ಕಾದು ಕಾದು ಹೂವು ಬಾಡಿ ಹೋದವು ಇನ್ನು ಹಾಗೆ ಇವೆ ಕರ್ಜಿ ಕಾಯಿಗಳು. ಬಿಸಿಲಲ್ಲಿ ನಿನಗಾಗಿ ಕುಳಿತಿದ್ದ ನಾನು ಬೆವೆತು ಹೋಗಿದ್ದೆ. ಕೆರೆಯ ಅಲೆಗಳು ಹೋಗಿ-ಬಂದು ನಿನ್ನನ್ನೇ ಕೇಳುತ್ತಿದ್ದವು ಆಗ ಈಗ ಎಂದು ನಾನು ಸಮಯ ದೂಡಿದೆ... ಇರಲಿ, ಬಾ ಕುಳಿತುಕೋ, ಕೂತು ಮಾತನಾಡೋಣ... (ಹುಡುಗಿ ಓಡುತ್ತಾ ಬಂದಿದ್ದರಿಂದ, ಏರುಸಿರು ಬಿಡುತ್ತಾ ಹೇಳಿದಳು) ನನ್ನ ಮರೆತುಬಿಡು ಮಾವನ ಜೊತೆಯಲ್ಲಿ ಮದುವೆ ನಿಶ್ಚಯಿಸಿದ್ದಾರೆ. ಈ ತಿಂಗಳ ಕೊನೆಯ ವಾರವಂತೆ.... ಇಗೊ ಲಗ್ನ ಪತ್ರಿಕೆ. ನಾನಿನ್ನು ಬರುವೆ, ಗೆಳತಿ ಕಾಯುತ್ತಿರುವಳು. (ಕಾಲ್ಗೆಜ್ಜೆಯ ಸದ್ದು ಮಾಡುತ್ತಾ ಓಡಿದಳು) ಅಳುವುದೊಂದೆ ಬಾಕಿ ಉಳಿದಿತ್ತು ಕೈಯಲ್ಲಿನ ಪತ್ರಿಕೆಯ ನೋಡಿ ಹರಿದು ಹಾಕಿದ ನೋವ ತಡೆಯಲಾರದೆ

ನನ್ನ ಜನರಿವರು

Image
ನನ್ನ ಕವಿತೆಗೆ ಎಣ್ಣೆ ಎರೆದು ಹಣತೆ ಹಚ್ಚಿದವರು ನನ್ನ ಜನ ಜಾತಿ ಮತ ಕುಲವೇನೆಂದು ತಿಳಿದಿಲ್ಲ ತಿಳಿದಿರುವುದೊಂದೆ ಬಾಳಬೇಕೆಂಬ......... ನೀರು ಕಾಣದೆ ಬಯಲು ಬರಡಾಗಿರಲು ಜಾಲಿ ಗಿಡಗಳು ಹಸಿರ ತೋರಿಸಿ ನಗುತಲಿವೆ ಇದೆ ನಗುವ ನನ್ನ ಜನ ನನಗೆ ಕಲಿಸಿದ್ದು....... ಸುರಿದ ಬೆವರಿನ ನಾತ ಆರುವ ಯಾವುದೇ ಸುಳಿವಿಲ್ಲ. ಕಷ್ಟದಲ್ಲಿಳಿದ ಉಪ್ಪು ಬೆವರಿನಂತವರು ನನ್ನ ಜನಗಳು ಕಪ್ಪು ಮಣ್ಣಿನಂತವರು ಸುರಿದಷ್ಟು ತಂಪು... ಬೆಳೆದಷ್ಟು ಹರವು... ಹಾಕಿರುವ ಕೆರಗಳು ಸವೆದು ಸಣಕಲಾದರೂ ಬಿಡಲೊಲ್ಲದ ನನ್ನ ಜನ ಜೀವನದ ಮೇಲಿನ ಆಸೆಯನು ನನಗೆ ಕಲಿಸಿದ್ದು..... ಹೊಟ್ಟೆ ತುಂಬಲಾರದ ಊಟ ಉಂಡರೂ ಸರಿಯೇ ಪ್ರೀತಿ ಸ್ನೇಹವ ಉಂಡು ಒಂದೊಮ್ಮೆ ಡೇಗಿದರೆ...... ಕನಸಿಲ್ಲದ ಊರಿಗೆ ನಿದ್ರೆಯ ಪಯಣ ಇಂಥವರು ನನ್ನ ಜನ ಜೀವನದ ಪಾಠವ ಹೇಳಿಕೊಟ್ಟವರು. (ದ.ರಾ.ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆಯ್ಕೆಯಾದ ಕವನ)

ಬಿಕ್ಷುಕ ಬಾಲೆ

Image
ತ್ಯಾಪೆ ಹಚ್ಚಿದ ಬಟ್ಟೆ ಮುಚ್ಚಿತ್ತು ದೇಹವ ಸಾರಿ ಹೇಳುತಿತ್ತು ತನ್ನ ಬಹು ವರ್ಷದ ಬದುಕ ಯಾರೋ ದಾನವಾಗಿ ಕೊಟ್ಟದ್ದು ಹಾಕಿ ಹಾಕಿ ಹರಿದಿತ್ತು.....! ಬಹು ದಿನಗಳಿಂದ ಎಣ್ಣೆ-ನೀರು ಕಾಣದ ಕೂದಲುಗಳು ಒಣಗಿದ ಜಾಲಿಗಿಡದಂತೆ ಗಾಳಿಗೆ ಓಲಾಡುತಿದ್ದವು ಕನಸು ತುಂಬಿದ ಕಂಗಳಲಿ ಜೀವನದ ಅರ್ಥವೇ ಕರಗಿ ಹೋಗಿತ್ತು ಹಾಗೆ...... ಮತ್ತೇನನ್ನೋ ಹುಡುಕುತಲಿತ್ತು.. ಹಾಡಲಾಸೆಯಿದ್ದರೂ ಮೌನಕೂಪಕ್ಕೆ ತಳ್ಳಿ ಮನಸ್ಸು ದಳ್ಳುರಿಯಲ್ಲಿ ಬೇಯುತಿತ್ತು. ನೋವುಗಳೆಲ್ಲಾ ಹೊರಹಾಕ ಬೇಕಾದಲ್ಲಿ ಒಂದಿಷ್ಟು ಜೋರಾಗಿ ಕೂಗಲೇ ಬೇಕಿತ್ತು ಅವರಿವರು ಕೊಟ್ಟ ತಂಗಳಿನ ಬಾಳು ನಡೆದಿತ್ತು ಹಲವು ತಿಂಗಳು ಹೊಟ್ಟೆ ತುಂಬಿಸುವ ಕೆಲಸವಲ್ಲವದು. ಸಾಯಲಿರುವ ಕನಸುಗಳಿಗೆ ಜೀವ ಕೊಡುವಾಸೆ. ಮಣ್ಣ ನೆಲವ ಕೆದರುತಲಿದ್ದ ಕೈಗಳು ಜೀವನದ ತುಣುಕುಗಳನ್ನೇನೋ ಹುಡುಕುತಲಿದ್ದವು ಹುಡುಕುತಲೇ..... ಇದ್ದವು....

ಮುಗುಳು ನಕ್ಕವು ನೆನಪುಗಳು

Image
ನಿನ್ನೆ ಮೊನ್ನೆಗಳೆಲ್ಲಾ ಇನ್ನು ನೆನಪುಗಳಷ್ಟೆ ಕಣ್ಣಿನೊಳಗೆ... ಕ್ಯಾಂಟೀನಿನೊಳಗೆ ಚಹಾದ ಜೋಡಿ ಹರಟಿದ್ದು, ರಾತ್ರಿ ನಿದ್ದೆಯನೆಲ್ಲಾ ಮಾಸ್ತರರ ಪಾಠದ ನಡುವೆ ಹೊಡೆದದ್ದು, ಮೊದಲ ಕವನವ ಬೆಂಚ ಮೆಲ್ಗಡೆ ಬರೆದದ್ದು, ಜಗಳವಾಡುವ ಸಲುವಾಗಿ ಗೆಳೆಯನ ಕೆಕ್ಕರಿಸಿ ನೊಡಿದ್ದು, ಕ್ರಿಕೇಟಿನಲಿ ಸೋತೆವೆನ್ನುವ ಭಯಕೆ ಮೋಸವಡಿದ್ದು, ಪಾಠದ ನಡುವಲ್ಲಿ ಆಕಳಿಸಿದ್ದು ಒಂದೆ ಎರಡೆ, ಎಲ್ಲಾ ಕಣ್ಮುಂದೆ ಬಂದು ಹೋಗುವವು ಕಂಡು ಮುಗುಳುನಗುವವು

ಬುರ್ಖಾದೊಳಗಿನ ಹುಡುಗಿ ಹೇಳಿದ ಕಥೆ

Image
ಕಪ್ಪು ಕೋಣೆಯ ಒಳಗೆ ಕತ್ತಲೆಯ ಬದುಕು ನಾನೊಂದು ಕೆಲಸಮಾಡುವ ಬರಿದಾದ ಸರಕು ಕಣ್ಣಕನಸುಗಳೆಲ್ಲಾ ಹರಕು-ಮುರುಕು ಯಾರಿಗು ಕೆಳಿಸದಂತೆ ನಾನು ಮಾತನಾಡಬೇಕು ಕೇಳಿಸಲೂಬಾರದಂತೆ ನನ್ನ ಮನಕು ಒಳಗಿರುವ ನೋವು ಒಳಗೆ ಇರಬೇಕಂತೆ ಹೊರಗಿದ್ದರು ಯಾರು ಕೇಳುವರು ನನ್ನ ವ್ಯಥೆಯ-ಕಥೆ ಮುಖವನ್ನೇ ನೋಡದವರು ಇನ್ನೇನು ನನ್ನ ಮನವ ನೋಡಿಯಾರು ಧರ್ಮ ಕರ್ಮದ ಅಡಕತ್ತರಿಗೆ ಸಿಲುಕಿರುವ ಅಡಕೆಯಂತಾಗಿರುವೆ ಆದರೂ ಬಾಳುವೆನು ಹಣೆಬರಹವೆ ಇದೆಂದು

ಬಯಲು ಮತ್ತು ನಾಯಿ ಎಂಬೊ ನಾಯಿ

Image
ಎಂದೊ ನೀರು ಹರಿದಿದ್ದ ಹಗರಿಯಲಿ, ಮೂಸುತ್ತಾ ನಡೆದಿತ್ತು ಎಲುಬು ತುಂಬಿದ ನಾಯಿ.... ಶಕ್ಯವಿಲ್ಲದ ತನ್ನ ಬಾಲವನು ಮುಗುಳಿಯ ನಡುವಲ್ಲಿ ಸಿಕ್ಕಿಸಿಕೊಂಡು..... ಅಲ್ಲೊಂದು ಇಲ್ಲೊಂದು ಸತ್ತು ಒಣಗಿದ ಏಡಿಗಳ ಕಡಿದು ನಾಲಿಗೆಯ ಸವರುತಲಿತ್ತು ಜಾಲಿ ಗಿಡಗಳು ಹತ್ತಾರನು ಮೂಸಿ ಕಷ್ಟ-ಸುಖವನು ವಿಚರಿಸಿಕೊಂಡು ಕಾಲೆತ್ತಿ ನೀರ ಪೂಸುತಲಿತ್ತು ಏನೊ ಮಹತ್ಕಾರ್ಯ ಸಾಧಿಸಿದಂತೆ ಓ ಎಂದು ಅರಸಿ ಮಣ್ಣ ಹುಡಿಯಲ್ಲಿ ಉರುಳಾಡಿ....