Posts

Showing posts from March, 2013

ಹಸಿ ಕಣ್ಣುಗಳಿಗೆ ಸಾಂತ್ವಾನ ನೀಡಬೇಕು

Image
ಗೋಡೆ ಬಣ್ಣ ಕಳೆದುಕೊಂಡು ಸೆರಗು ತಲೆಗೆ ಹೊದ್ದು ಕೂತಿರುವಾಗ ಎಲ್ಲಾ ಮೂಲೆಗಳದೂ ಜೋಂಪು ಹಿಡಿದ ಮೋಹಕ ಸದ್ದು, ಒಂದಷ್ಟು ಕತ್ತಲು ತುಂಡು ತುಂಡಾದ ಬೆಳಕು. ಬಲೆ ಹೆಣೆದು ಅತಿಥಿಗಳ ಉಗುರು ಕಡಿಯುತ್ತಾ ಕಾಯುತಿದ್ದ ಜೇಡಕ್ಕೆ ಬಲೆ ಬಲೆಯೂ ಮುಳ್ಳು ತಂತಿ, ಮೊನ್ನೆ ಸಿಕ್ಕವರನ್ನೆಲ್ಲಾ ಉಂಡೆ ಕಟ್ಟಿ ಅಡುಗೇ ಮನೆಯಲ್ಲಿ ನೇತು ಬಿಟ್ಟಿದೆ, ಜೇಡದುಂಡೆಯಲ್ಲಿ ಯಾರದೂ ಅಳು ಸದ್ದು ಕೇಳಿಸುತ್ತಿಲ್ಲ ಉಸಿರು ಬಿಕರಿಗಿಟ್ಟಿದೆ. ಅಲ್ಲಿ ಕಿಟಕಿಯೊಳಗಿಂದ ಬಿದ್ದು ಗೋಡೆಗೆ ಆನಿಕೊಂಡಿದ್ದ ನೆರಳುಗಳಲ್ಲಿ ಅಗೋ ಇಷ್ಟುದ್ದ ಕೋರೆಹಲ್ಲುಗಳು ಸಾಣೆ ಹಿಡಿದಿದ್ದಷ್ಟು ಹೊಳಪು, ನಾಲಿಗೆಯಂಚಿಗೆ ಅಂಟಿಕೊಂಡಿದ್ದ ರಕ್ತವನ್ನು ಸೊರಕ್ಕನೆ ಎಳೆದುಕೊಂಡ ಸದ್ದು ಇದೇ ತಾನೆ ಕೇಳಿದೆ, ಅಗೋ ಗೋರಿಗಳಲ್ಲಿ ಮಲಗಿದ್ದಾರೆ ಎಸೆದಿರುವ ಹೂವುಗಳ ಮೇಲೆ ಸಂಬಂಧಿಕರ ಕಣ್ಣೀರಿದೆ, ಬಿಸಿಲಿಗೆ ಆವಿಯಾಗುವ ಮುನ್ನ ಆ ಕಣ್ಣುಗಳಿಗೆ ಸಾಂತ್ವಾನ ನೀಡಬೇಕು. ಪದ್ಯಕ್ಕೆ ನಗಿಸುವ ತಾಕತ್ತಿದೆಯೇ ಹೊರತು ಕಣ್ಣೊರೆಸುವ ತಾಕತ್ತಿಲ್ಲವೆಂದು ನನಗೂ ಗೊತ್ತು ಪೆನ್ನು ಹಾಳೆ ಇರುವ ನಾನು ಇನ್ನೇನು ಮಾಡಿಯಾನು.. -ಪ್ರವರ

ತೋರಿಸುತ್ತೇನೆ ಬಣ್ಣ ಬಸಿದವರ ಮುಖಗಳ

Image
ಎಷ್ಟು ಚಂದವಿದೆ ಅಲ್ಲವೆ ಅರಮನೆ! ಸ್ವಾಗತ ದ್ವಾರದ ಕಮಾನಿನ ಸುತ್ತ ಹೂವು ಬಳ್ಳಿಯೂ ಇದೆ, ನಿಮ್ಮ ಮುಖಕ್ಕೆ ಹಚ್ಚಿದ  ಕ್ರೀಮು ಬಿಸಿಲಿಗೆ ಇಳಿದಿಲ್ಲ ತಾನೆ; ಗೋಡೆಗಂಟಿಸಿದ ಫಳಗುಡುವ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿಕೊಂಡು ಬಿಡು ಬಿಂಬ ನಿನಗೇನೊ ಹೇಳಬಹುದು. ಎದೆ ಬಿರಿದ ತಲ್ಲಣಗಳ ಬಾಚಿ ತಟ್ಟಿ ಮಾಡಿದ ಕಂಬವಿದು, ಬೆರಳುಗಳ ಸೋಕಿಸಬೇಡ ಕೆಂಪು ರಗುತ ಅಡರೀತು ಗೆರೆಗಳ ನಡುವೆ ಕಣ್ಣಿನ ಗಡಿ ಮೀರಿದರೆ ಹನಿಯುತ್ತದೆ ಕೆನ್ನೆ ತೋಯುವಂತೆ; ಯೋಚನೆ ಮಾಡು! ಮನಸ್ಸನ್ನು ಹೊರಗೆ ಕಸಿದಿಟ್ಟು ಒಳಗೆ ಬಾ ಇನ್ನೂ ತೋರಿಸುವುದಿದೆ, ಇಲ್ಲ ಕಣ್ಣುಗಳಿಗೆ ಮುಖವಾಡ ತೊಡಿಸಿಬಿಡು ಸ್ವಲ್ಪ ಹೊತ್ತು ನಾಟಕವಾಡಲಿ ಬಡಿವಾರದ ಚಿತ್ರಗಳ ಹಿಂದೆ ಬಳಿದಿರುವ ಬಣ್ಣಗಳು ಕಣ್ಣು ಕುಕ್ಕುತ್ತಿವೆ ತಾನೆ, ಬೆಳಕು ಚೂರು ತಗ್ಗಬೇಕು ನಾನೇ ತೋರಿಸುತ್ತೇನೆ, ಬಣ್ಣ ಬಸಿದವರ ಮುಖಗಳ: ಮೊಂಬತ್ತಿಯೂ ಕರಗುತ್ತಾ ಅಳುತ್ತದೆ, ಅದು ಯಾವಾಗಲೋ ಕೇಳಿಸಿಕೊಂಡಿದೆ ಕತ್ತಲ ಜನರ ದನಿಯ; ನೋಡಬೇಕೆ ಆ ಜನರ??? ಈಗ ಕಣ್ಣಿಗೆ ಹಾಕಿದ್ದ ಮುಖವಾಡ ಕಳಚು, ನೋಡು ಈ ಮಜಬೂತಾದ ಮಹಲನ್ನು, ಅವರದೇ ಸಮಾಧಿಗಳ ಮೇಲೆ ಕಟ್ಟಿಸಿದ್ದು, -ಪ್ರವರ

ಬುದ್ಧನಿಗೊಂದು ಸವಾಲು

Image
ದಯಮಾಡಿ ತುಟಿ ಬಿರಿದು ನಗಬೇಡ ಬುದ್ಧ ನಗಬೇಡ, ನಿನ್ನಂತಿರಬೇಕೆಂದು ಆಸೆಪಟ್ಟರೂ ನಾನು ಹಾಗೆ ಇರಲಾರೆ ಎಲ್ಲವನ್ನೂ ಸಹಿಸಿಕೊಂಡು ಕಣ್ಮುಚ್ಚಿಕೊಂಡು ಬೋಧಿ ವೃಕ್ಷದಡಿ ಕುಳಿತು ಹೆಂಡತಿ ಮಕ್ಕಳು ರಾಜ ವೈಭೋಗವನ್ನೆಲ್ಲಾ ತೊರೆದು ವರುಷಗಟ್ಟಲೇ ಧ್ಯಾನ ಮಾಡಿದಷ್ಟು ಸುಲಭವಲ್ಲ ಇಲ್ಲಿಯ ಬದುಕು, ನಿನ್ನ ಕಾಲ ಮುಗಿದು ಅನುಯಾಯಿಗಳೆನ್ನಿಸಿಕೊಂಡವರೆಲ್ಲಾ ಮಣ್ಣಿನಾಳಕ್ಕೆ ಹೋಗಿದ್ದಾರೆ ಲೆಕ್ಕ ಇಡಲು ನಾನು ಇರಲಿಲ್ಲ, ನಿನ್ನ ಕಪಾಲದಲ್ಲಿ ಬಿಕ್ಷೆ ಬೇಡಿಕೊಂಡು ಬಂದರೂ ತುತ್ತು ಕೂಳೂ ಸಿಗುವುದಿಲ್ಲ, ನಿನ್ನ ಸಿದ್ಧಾಂತಗಳನ್ನು ನಂಬಿಕೊಂಡವರು ಗಾಳಿಗೆ ತೂರಿ ಹೋಗಿದ್ದಾರೆ ಕರಗಿದ ಮೇಲೆ ಯಾರಿಗೂ ಕಾಣ ಸಿಗುವುದಿಲ್ಲ ತನ್ನನ್ನು ತಾನೆ ಮುಟ್ಟಿ ನೋಡಿಕೊಳ್ಳಬೇಕು ನಿನ್ನ ದೇಹ ಕರಗಿ ಶತಮಾನಗಳೇ ಗತಿಸಿವೆ, ಗಾಯತ್ರಿ ಮಂತ್ರಗಳು ಒಂದಷ್ಟು ಜನರ ಕಂಕುಳಲ್ಲಿ ಬಾಯಲ್ಲಿ ಬಿಟ್ಟರೆ, ಶಾಂತಿ ಮಂತ್ರ ಈಗ ಪಳೆಯುಳಿಕೆ ಅಷ್ಟೆ ಹಾಗೇನಾದರೂ ನಾನು ಬುದ್ಧನಂತಾಗುತ್ತೇನೆಂದರೆ ಅಂಡು ಬಡಿದುಕೊಂಡು ನಗುತ್ತಾರೆ. ನೀನು ಸಾರ್ವಕಾಲಿಕವೆಂದು ಓದಿದ್ದು ಬಿಟ್ಟರೆ ನಿಜಕ್ಕೆ ನನಗೆ ಹಾಗೆನ್ನಿಸಲೇ ಇಲ್ಲ, ಅನ್ನಿಸುವುದೂ ಇಲ್ಲ, ಒಮ್ಮೆ ಹಾಗಾಗಿದ್ದರೆ ಪ್ರಪಂಚ ಸ್ವರ್ಗವೆನ್ನಿಸಿಬಿಡುತಿತ್ತು, ಅತಿಮಾನುಷ ಸಾವುಗಳಿಲ್ಲದೇ ಆಪ್ತವೆನ್ನಿಸಿಬಿಡುತಿತ್ತು, ಬೇಕಿದ್ದರೊಮ್ಮೆ ಇಲ್ಲಿ ಬದುಕಿ ನೋಡು ನೀನು ನೀನಾಗಿಯೇ ಇದ್ದರೆ ಖಂಡಿತಾ ನಾನು ನೀನಾಗುತ್

ಥೇಟ್ ಕಾಮನಂತೆ

ಚಳಿಗಾಲಕೆ ಮುಖವೊಡೆದಿದೆ ತುಟಿಯ ಸಹಿತ, ಗಂಡ ಅದೇ ಸಾರಾಯಿಯ ಗಬ್ಬು ವಾಸನೆಯಲ್ಲಿಯೇ ಮುದ್ದಿಸುತ್ತಾನೆ ಚಿನ್ನ-ರನ್ನ ಎಂದು ಥೇಟ್ ಕಾಮನಂತೆ, ಪ್ರೀತಿಯಿಂದಲೋ, ಕುಡಿದ ಅಮಲಿನಲ್ಲೋ ತಿಳಿಯಲಾಗಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ. ಈ ಸೌಭಾಗ್ಯವೆಲ್ಲಾ ರಾತ್ರಿಗಷ್ಟೆ ಹಗಲು ಕಥೆಯೇ ಬೇರೆ!! ಫೇರಂಡ್ ಲೌಲಿ, ಪಾಂಡ್ಸ್ ಪೌಡರ್ರುಗಳ ಯಾವತ್ತೂ ನೋಡಿಲ್ಲ ಅವು ನನಗ್ಯಾಕೆ ಬೇಕು ಬಿಡಿ ನಾನೇನು ಥಳಕು ಬಳುಕು ಮಾಡಿಕೊಂಡು ಬಡಿವಾರ ಮಾಡಲು ಪುರುಸೊತ್ತೆಲ್ಲಿದೆ, ಬಡಿವಾರದ ಮನೆ ಹಾಳಾಯ್ತು ಅಷ್ಟು ರೊಕ್ಕವೆಲ್ಲಿಂದ ಬರಬೇಕು, ಕಂಕುಳಲ್ಲಿ ಗೇಣುದ್ದ ಹರಿದ ಕುಬುಸಕ್ಕೆ ಕೈ ಹೊಲಿಗೆ ಹಾಕಿಕೊಂಡಿದ್ದೇನೆ. ಮೊದಲ ರಾತ್ರಿ ಜೊತೆ ಮಲಗಿ ಎಂದು ಗಂಡನನ್ನು ಕೇಳಿದ್ದು ಬಿಟ್ಟರೆ ಇಲ್ಲಿಯವರೆಗೂ ಯಾರಲ್ಲಿಯೂ ಏನೂ ಕೇಳಿಕೊಂಡಿಲ್ಲ, ಇದ್ದರೆ ಉಣ್ಣುತ್ತೇನೆ ಇಲ್ಲದಿದ್ದರೆ ಉಂಡವರಂತೆ ಹೊಟ್ಟೆಯುಬ್ಬಿಸಿ ಉಪವಾಸ ಮಲಗುತ್ತೇನೆ, ಅಕ್ಕಿ ಇಲ್ಲವೆಂದು ಪಕ್ಕದ ಮನೆಯವರ ಮುಂದೆ ಕೈ ಚಾಚಿದರೆ ಹೇಗೆ. "ಅದೇನೋ ಅನ್ನುತ್ತಾರಲ್ಲ ಹಾಗೆ" ನಾನು ರಾತ್ರಿಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದೇನೆ ನಿದ್ದೆಯಲ್ಲಿ ಹೆಚ್ಚು ಹಸಿವಾಗುವುದಿಲ್ಲ ಗಂಡನೂ ನನ್ನ ಹೆಚ್ಚು ಹಸಿಯಲು ಬಿಡುವುದಿಲ್ಲ, ಸೀಮೆ ಎಣ್ಣೆ ಬುಡ್ಡಿಯ ಪಕ್ಕದಲ್ಲಿ ಅಹೋ ರಾತ್ರಿ ಒಂದಷ್ಟು ಕನಸುಗಳನ್ನೂ ಕಂಡಿದ್ದೇನೆ ಅವೆಲ್ಲವೂ ಹೊಸತು. ನನ್ನನ್ನು ನಾನು ಒಂದು ದಿನವಾದರೂ ನೋಡಿಕೊಳ್ಳಬೇಕು ಸಾಯುವುದರೊಳಗೆ ಕನ್ನಡಿಗೆ ದುಡ್ಡು ಕೂಡಿಡಬೇ

ನೀಲಿ ಹಾಯ್ಕುಗಳು

ನಾನು ಗಾಢವಾಗಿ ನಿನ್ನೊಳು ಧ್ಯಾನಿಸಬೇಕು ಕಳೆದು ಹೋಗುವ ಹಾಗೆ ನಿನ್ನ ಸೆರಗೊಳಗೆ ಬೆಳಕೂ ಕತ್ತಲಾಗುವಾಗ ನಾನ್ಯಾವ ಲೆಕ್ಕ! ನಾವಿಬ್ಬರು ಬೆವೆತು ರಾತ್ರಿಗೆ ಬಿಸಿಯೇರಿಸೋಣ ನಾಳೆ ಕತ್ತಲು ಮತ್ತೆ ನೆನೆಯುವಂತೆ ಅರ್ರೆರ್ರೆ, ನಿನ್ನ ಚುಂಬಿಸುವ ಭರದಲ್ಲಿ ಉಸಿರಾಡುವುದನ್ನೇ ಮರೆತಿದ್ದೇನಲ್ಲ ನೀನಿರುವವರೆಗೆ ರಾತ್ರಿಗಳೆಂದೂ ಕರಗಲೇಬಾರದು ಹುಣ್ಣಿಮೆಯ ಬೆಳದಿಂಗಳ ಹೀರಿ ನೀಲಿಯೇರುತ್ತದೆ ಮೈ ಕನಸುಗಳ ಜೊತೆಗೆ -ಪ್ರವರ

ಬೆಳಕ ಆಯುವ ಫಕೀರನೂ...

ಎಲ್ಲೆಲ್ಲಿಂದಲೋ ಕತ್ತಲ ಹಿಂಜಿ ಹೆಕ್ಕಿ ಬೆಳಕನ್ನು ಆಯ್ದು ಜೋಡಿಸಿಟ್ಟುಕೊಂಡು ಕಣ್ಣು ಸವೆಸಿಕೊಂಡಿದ್ದೇನೆ, ಹಾಗೆಂದು ನಾನೇನು ಕುರುಡನಲ್ಲ ಚಿತ್ರ ಆಕ್ರಮಣಕಾರಿಯಾಗಿ ಪರದೆಯ ಮೇಲೆ ಮೂಡುತ್ತದೆ ನನಗಷ್ಟೆ ಗೋಚರಿಸುವಂತೆ ನಾನಷ್ಟೆ ತಡವರಿಸಿ ನೋಡುವಂತೆ ಹಣೆ ಬೆವರ ಒಳಗಿಂದ ಪ್ರತಿಫಲಿಸುವಾಗ ಕೋಲ್ಮಿಂಚು ಗೋಡೆ ಬಣ್ಣಕ್ಕೆ ಅಂಟಿಕೊಂಡಿತು, ನನ್ನ ಪಾಡಿಗೆ ನಾನೆ ಸೂಜಿ ಪೋಣಿಸಿಕೊಂಡು ಹೊಲಿದುಕೊಂಡಿದ್ದು ಬೆಳಕಿನಂಗಿಯ, ಮೈಗೇರಿಸಿಕೊಂಡು ದಾರಿಯಲ್ಲಿ ನಡೆಯುತಿದ್ದರೆ ಕಾಣದಂತೆ ಅಂಡು ಬಡಿದುಕೊಂಡು ನಕ್ಕರು, ಕತ್ತಲಲ್ಲಿ ಕರಗಿ ಹೋಗಿದ್ದ ಅವರ್ಯಾರು ನನಗೆ ಕಾಣಿಸಲಿಲ್ಲ ಮುಂದಿದ್ದ ದಾರಿಯ ಹೊರತು, ಬೇಕಿದ್ದವರು ಹೆಜ್ಜೆ ಎಣಿಸಿಕೊಂಡು ಬರಲಿ, ಗೆರೆಯ ಕೊನೆಗೆ ಅಪರಿಮಿತ ಜಾಗವಿದೆ ಅಂಗಿಯೊಳಗೆ ಎಳೆದುಕೊಳ್ಳುತ್ತೇನೆ ಕೈಯ ಚಾಚಿ. -ಪ್ರವರ

ಅಂಗಿ ಗುಂಡಿಗೂ ತಗುಲಲಿ ಕಣ್ಣ ಹನಿ

ಜೋಪಡಿಯೊಳಗೆ ಹೊಟ್ಟೆಯುಬ್ಬಿಸಿ ಮಲಗಿದ್ದ ಕವಿತೆಗಿನ್ನೂ ಹಸಿವಿದೆ, ಮೇಲೆ ಕಾಣುವ ಹುಲ್ಲು ಛಾವಣಿಯ ನಡುವಿನ ಕಂಡಿಗಳಲ್ಲಿ ಬೆಳಕು ಇಣುಕುತ್ತಿದೆ ನೋಡುವ ಹಂಬಲಕ್ಕೆ ಗಕ್ಕನೆ ಕಣ್ಣ ರೆಕ್ಕೆ ಬಿಚ್ಚಿ, ಅದೆಷ್ಟು ನರಳುತ್ತೀಯ ಹಾಸಿಗೆಯಡಿಯಲ್ಲಿ, ತಿಣುಕಾಡಿ ಹೊರಗೆ ಬಾ ಹಸಿವ ನೀಗಿಸುತ್ತೇನೆ, ಮೈಯ ಪೊರೆ ಕಳಚಿ ನಿಲ್ಲಬೇಕು ನನ್ನ ನೋಟಕ್ಕೆ ಗೋಡೆ ತಂತಿಗೆ ಸಿಕ್ಕಿಸಿದ ರಶೀದಿಗಳ ಹಿಂದಿನ ಪದ್ಯದಡಿ ಸಹಿ ಇದೆ ಒಮ್ಮೆ ನೋಡಿ ಬಿಡು ಬೆಂಕಿ ತಗುಲಿದರೆ ಅಕ್ಷರಗಳದು ಸದ್ದು ಹೊರಡುವುದಿಲ್ಲ, ಬೇಕೆಂದರೆ ಉಪ್ಪಡರಿದ ಗೋಡೆಗೆ ಕಿವಿಯಿಟ್ಟು ಮೆಲ್ಲಗೆ ಕೇಳಿಸಿಕೊ.... ನಿನ್ನ ಒಂದೊಂದೇ ಪದಗಳ ಹರವಿಡು ಬಂದವರೆಲ್ಲಾ ಓದಿಕೊಂಡು ಹೋಗಲಿ, ಅಂಗಿ ಗುಂಡಿಗೂ ತಗುಲಲಿ ಕಣ್ಣ ಹನಿ, ಮೈಲಿಗೆಯ ಕೊಂಡಿ ಕಳಚಲಿ. ಜೋಪಡಿಯೊಳಗೆ ಹೊಟ್ಟೆಯುಬ್ಬಿಸಿ ಮಲಗಿದ್ದ ಕವಿತೆಗಿನ್ನೂ ಹಸಿವಿದೆ, -ಪ್ರವರ

ನಿರ್ಲಿಪ್ತ ಬುದ್ಧನ....

ಒಂದೇ ಸಮನೆ ಭೋರ್ಗರೆಯುತ್ತಿಹ ನಿನ್ನ ಕಣ್ಣ ಬೆಳಕಲ್ಲಿ ಒಂದು ಹಿಡಿ ಇತ್ತ ತಾ, ಎದೆಗೆ ಸುರಿದುಕೊಳ್ಳುತ್ತೇನೆ ಅಂಟಿಕೊಂಡಿದ್ದ ಇರುಳೆಲ್ಲ ಆವಿಯಾಗಲಿ, ನಾನೂ ನಿರ್ಲಿಪ್ತನಾಗುತ್ತೇನೆ ಮೌನದಂತೆ, ಬೆರಳ ಸಂದಿಗಳಿಂದ ಜಾರಿದ್ದ ಮನಸ್ಸು ಘನೀಕರಿಸಿ ಇಲ್ಲೇ ಜೋಳಿಗೆಯಲ್ಲೇ ಇಟ್ಟಿದ್ದೇನೆ. ಮೋಡಗಳೆಲ್ಲಾ ಸರಿವವರೆಗೂ ಕಾಯಬೇಕು ಶುಭ್ರ ಮುಗಿಲ ಎವೆಯಿಕ್ಕದಂತೆ ನೋಡಬೇಕು. ಅದೆಷ್ಟೋ ಬಾರಿ ಸುಡುಬೆಂಕಿಗೊಡ್ಡಿ ಕರಕಲಾಗಿದ್ದ ಕನಸುಗಳನ್ನು ನನ್ನ ಕೈಯಾರೆ ಮಣ್ಣು ಮಾಡಿದ್ದೇನೆ, ನೋಡು, ಅಂಗೈಯ ಗೆರೆಗಳಲ್ಲಿನ ಮಣ್ಣ ಕಲೆ ಮಾಸಿಲ್ಲ, ನಕ್ಕದ್ದು ಅದೇ ಕೊನೆ, ಶುಭ್ರ ನೀರಿಗೆ ಅಲೆಯುತಿದ್ದೇನೆ. ಸಣ್ಣಗೆ ಉರಿಯುತಿದ್ದ ಬೆಳಕು ನೀನೆಂದು ಅರಿವಿದ್ದರೂ ನಡುವೆ ಕೂತು ಮಿಣುಕಾಡುತ್ತೇನೆ, ಬೆನ್ನಿಗಂಟಿದ ಕತ್ತಲ ಕೊಡವಲು ಕೈ ಎಟಕುತ್ತಿಲ್ಲ ನೀನೆ ಬಾಹುಗಳ ಚಾಚಬೇಕು -ಪ್ರವರ

ಹೆಣಗಳಿಗೆ ಪವಿತ್ರ ಗಂಗೆ ಸ್ವರ್ಗದ ಟಿಕೇಟು ಕೊಡುತಿದ್ದಾಳೆ

ಎಲ್ಲೆಲ್ಲಿಂದಲೋ ಕಲೆತು ಹರಿದಿದ್ದ ನೀರದು, ನದಿಯಂತೆ, ಪವಿತ್ರವಂತೆ ಯಾರೋ ಹೇಳಿದ್ದು ನಾನು ನಿಮ್ಮಂತೆಯೇ ಕೇಳಿದ್ದು ನದಿಯೆಂದ ಮೇಲೆ ತಟವಿಲ್ಲದಿದ್ದರೆ ಹೇಗೆ! ಕಣ್ಣಿಗೆಟುಕುವ ಅನತಿ ದೂರದವರೆಗೂ ಕಲ್ಲು ಚಪ್ಪಡಿಗಳ ಹಾಸಿ ಮಾಡಿದ್ದ ದಂಡೆಯದು. ಪವಿತ್ರವೆಂದ ಮೇಲೆ ದಿನಕ್ಕೆ ನಾಲ್ಕುಬಾರಿ ಮುಳುಗಿ ಏಳದಿದ್ದರೆ ಹೇಗೆ, ಗಂಟೆ ನಾದವ ಕೆಳುತಿದ್ದ ದೇವರನೊಬ್ಬ ಬಿಟ್ಟು ಮಿಕ್ಕೆಲ್ಲರೂ ಮಿಂದೆದ್ದು ಮಾಡಿದ ಪಾಪಗಳ ನೀರಿನೊಳಗೇ ಕರಗಿಸ ಬಿಡುತಿದ್ದಾರೆ, ಬಾಯಿಗೆ ಹೋಲ್ ಸೇಲಾಗಿ ಸಿಕ್ಕ ದೇವರುಗಳ ಜಪಿಸುತ್ತಾ, ಪುಣ್ಯಗಳ ಮೈಗಂಟಿಸಿಕೊಳುತಿದ್ದಾರೆ ದುಂಬಾಲು ಬಿದ್ದು. ದುಂಡಗೆ ಚಕ್ಕಳಮುಕ್ಕಳ ಹಾಕಿಕೊಂಡು ಅನ್ನದುಂಡೆಗಳ ಹಿಡಿದು ಕೂತಿದ್ದಾರೆ, ಪೂಜಾರಿ ಹೇಳಿಕೊಡುತಿದ್ದ ಗೋತ್ರದಲ್ಲಿ ಪಿತೃಗಳ ಮಂತ್ರ ಕಂಪನಕ್ಕೆ ಕಾಗೆಗಳು ಮೇಲೆ ಹಾರುತಿದ್ದವು ಬಿಡುವ ಪಿಂಡಕ್ಕೆ ಹಸಿದುಕೊಂಡು, ಅರ್ರೆ! ಮಣ್ಣಬಿಟ್ಟು ನೀರಿನಲ್ಲಿ ಎಸೆದಿದ್ದಾರಲ್ಲಾ ಹೆಣಗಳ! ಅವೆಲ್ಲಾ ಅರೆಬರೆ ಕೊಳೆತಿವೆ ದೋಣಿಯ ಹುಟ್ಟು ಹಾಕುತಿದ್ದಾರೆ ಮೂಗು ಮುಚ್ಚಿಕೊಂಡು, ಹುಟ್ಟು ಹಾಕುತಿದ್ದದ್ದು ನೀರಿಗಲ್ಲ ಅಡ್ಡ ಬರುತಿದ್ದ ಅರೆ ಬರೆ ಹೆಣಗಳ ಪಕ್ಕಕ್ಕೆ ಸರಿಸಲು ಹೆಣಗಳ ಜೊತೆ ತೇಲುತಿದ್ದದ್ದು ಒಂದಷ್ಟು ಮೀನುಗಳು. ಸತ್ತವರಿಗೆ ಇಲ್ಲಿಂದ ಸ್ವರ್ಗಕ್ಕೆ ನೇರ ಟಿಕೇಟಂತೆ, ಕೊಳೆತು ನಾರುತ್ತಿರುವ ಹೆಣಗಳ ಚಹರೆ ತಿಳಿಯುತ್ತಿಲ್ಲ ದೇವರೂ ಮೂಗು ಮುಚ್ಚಿಕೊಂಡು ಹೆಣಗಳ ತಿರು

ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು

ಮೊನ್ನೆ ಮೊನ್ನೆಯಷ್ಟೇ ಕೆನ್ನೆ ಮೇಲೆ ನಿನ್ನ ಐದೂ ಬೆರಳುಗಳು ಮೂಡಿದ್ದುದನ್ನು ಕನ್ನಡಿಯಲಿ ನೋಡಿಕೊಂಡು ಅತ್ತುಬಿಟ್ಟಿದ್ದೆ, ಜೋರಾಗಿ ಬಿಕ್ಕಳಿಸುವಾಗ ಒತ್ತಾಯವಾಗಿ ನೀರು ಕುಡಿಸಿದ್ದರು ಬಳೆ ಸದ್ದು ಕಿವಿಯಲ್ಲಿತ್ತು ಅಮ್ಮ ಇರಬೇಕು... ರಾತ್ರಿ ಪಾಪಸ್ ಕಳ್ಳಿಯ ನೆರಳು ನೋಡಿ ದೆವ್ವವೆಂದು ಹೆದರಿದ್ದೆ ಉಚ್ಚೆ ಹೊಯ್ಯಿಸಲು ನನ್ನ ಜೊತೆ ನಿದ್ದೆಗಣ್ಣಲಿ ನೀನಿದ್ದೆ, ಎದುರು ಮನೆ ಐನಾರಪ್ಪನ ಹೂಸಿನ ಸದ್ದಿಗೆ ಇಬ್ಬರೂ ಜೋರಾಗಿ ನಕ್ಕಿದ್ದೆವು ಓದುವಾಗ ಪುಸ್ತಕದ ಮೇಲೆ ಹಾಗೆ ಮಲಗಿದ್ದೆ, ನೀನೆ ಕೈಯ್ಯಲ್ಲಿ ಬಾಚಿಕೊಂಡು ಮಂಚದ ಮೇಲೆ ಹಾಕಿ ಹೊಚ್ಚಿದ್ದೆ, ನಾನೂ ಬೆಚ್ಚಗೆ ಮಲಗಿದ್ದೆ. ಅಲ್ಪ ಸ್ವಲ್ಪ ಎಚ್ಚರವಿದ್ದೆ ಮಲಗಿದವನಂತೆ ನಾಟಕವಾಡಿದ್ದೆ ಅಷ್ಟೆ. ಥೂ ಅದೆಷ್ಟು ಬೇಗ ಬೆಳೆದುಬಿಟ್ಟೆ, ಕನ್ನಡಿಯಲ್ಲಿ ಕೆನ್ನೆ ಮುಟ್ಟಿ ನೋಡಿಕೊಳ್ಳುವ ನನ್ನ ಪ್ರತಿಬಿಂಬ ಗೊಣಗುತ್ತದೆ ನಿನ್ನ ಕೈಬೆರಳಚ್ಚಿಲ್ಲವೆಂದು, ನಿನ್ನ ಬುಜದೆತ್ತರಕ್ಕೆ ನಾನು ಬೆಳೆಯಲೇಬಾರದಿತ್ತು! ಬೆಳೆದುಬಿಟ್ಟೆ, ನಿನ್ನ ಹೆಗಲ ಮೇಲಾಡುವ ಆಸೆ ಇನ್ನೂ ಇದೆ ಅಮ್ಮ ಬಯ್ಯುತ್ತಾಳೆ ಕತ್ತೆ ವಯಸ್ಸಾಯ್ತೆಂದು ಅದಕ್ಕೇ ಸುಮ್ಮನಿದ್ದೇನೆ ಇಷ್ಟು ಬೇಗ ಬೆಳೆಯಬಾರದಿತ್ತು ನಾನು ನಿನ್ನ ಬುಜದೆತ್ತರಕ್ಕೆ -ಪ್ರವರ

ಗೌತಮನ ಘಾಟುವಾಸನೆ

ನಾಲ್ಕು ಗೋಡೆಗಳು ನಾಲ್ಕು ಮೂಲೆಗಳು ಜೇಡರಬಲೆಯೊಳಗಿಂದ ನುಗ್ಗಿದ್ದ ಧೂಳು, ನನ್ನ ಮುಖದ ಮೇಲೊಷ್ಟು ನೋವ ಮುಚ್ಚುವ ಕತ್ತಲು, ಹಿಡಿ ಸುಣ್ಣದ ಪುಡಿ ತೂರಿದಂತೆ ಬೆಳಕು, ಸುತ್ತಲೂ ನನ್ನನ್ನೇ ದುರುಗುಟ್ಟುತಿದ್ದ ನೆರಳುಗಳೇ ಮೆಲ್ಲಗೆ ಮೂರ್ನಾಲ್ಕು ಬಾರಿ ಪಿಸುನುಡಿದಂತೆ ಧೂಳ ಕಣಗಳ ನಡುವೆ "ಸತ್ತರೆ ಮಣ್ಣ ಸೇರುತ್ತಾನೆ ಕೊಳೆಯದಿದ್ದರೆ ಕೊಳ್ಳಿ ಇಡುವ ಬೂದಿಯಾಗಲಿ ಮೂಳೆ" ಬಾಗಿಲ ಕಿಂಡಿಯಲ್ಲಿ ತೂರಿ ಬಂದ ತಂಡಿ ಗಾಳಿ ಎದೆಯ ಬೆವರ ಬೆನ್ನ ನೇವರಿಸಿದ ಸಾಂತ್ವಾನ, ಜೊಲ್ಲು ಇಳಿಸುತ್ತಾ ಅಡಗಿದ್ದ ಜೇಡರ ಹುಳದ ಬಲೆ ತೊಟ್ಟಿಲಂತಿತ್ತು, ಬಿದ್ದವರ ದನಿಯೂ ಕೇಳುತಿಲ್ಲ ನಿದ್ದೆ ಹೋಗಿರಬೇಕು. ನಾನಿನ್ನು ಮಲಗಿಲ್ಲ ಮಾತುಗಳ ಪೀಕಲಾಟಕ್ಕೆ ಶರಣಾಗಿ, ಮೌನವಹಿಸಿ ಗೋಡೆಗೆ ಬೆನ್ನು ಮಾಡಿ ಕಣ್ಣಾಲಿಗಳ ದಟ್ಟ ನೋಟ ಹರವಿದ್ದೇನೆ, ನೆಟ್ಟಗೆ ನಿಗುರಿ ಕೋವಿ ಹಿಡಿದು ನಿಂತವರೆಡೆಗೆ ಪಾರಿವಾಳ ತೂರಲು -ಪ್ರವರ ಕೊಟ್ಟೂರು

ಕತ್ತಲಿಗೆ ನಿಮ್ಮನು ಒಮ್ಮೆ ಒಡ್ಡಿ ನೋಡಿ

ಮೌನಕ್ಕೂ ವಿರಹ ಹೆಚ್ಚಾಗುತ್ತದೆಯಂತೆ ನನಗೇನು ಗೊತ್ತು ಒಬ್ಬಂಟಿಯಾಗಿ ಕತ್ತಲ ಜೊತೆ ಮಾತನಾಡುವಾಗ ಅನುಭವಿಸಿದ್ದು, ಕನಸುಗಳದ್ದು ಇದೇ ತೆವಲು ಮುನಿಸಿಕೊಂಡು ಕೈತಪ್ಪಿ ಹೋಗುತ್ತವೆ, ಸತ್ತವನ ಎದೆಯಿಂದ ಜೀವ ಹಾರಿ ಹೂವು ಬಿದ್ದಂತೆ, ಶಾಶ್ವತ ಧ್ಯಾನಕ್ಕೆ ಅಡಿ ಇಡುತ್ತದೆ ದೇಹ, ಜೀವ ಇನ್ನೊಬ್ಬನ ಬಾಯ ಸರಕಾಗುತ್ತದೆ! ನಾವೇನು ಕೊಳೆಯುವುದಿಲ್ಲ ಮಣ್ಣಿನಾಂತರ್ಯದಲಿ ಲೀನವಾಗುತ್ತೇವೆ, ಕತ್ತಲಲ್ಲಿ ಬೆಳಕು ಇಂಚಿಂಚಾಗಿ ಕರಗಿದಂತೆ, ನಾನಷ್ಟೇ ಅಲ್ಲ ಜೀವವಿದ್ದದ್ದೂ ಇಲ್ಲದ್ದೂ ಎಲ್ಲವೂ. ಬೆಳಕಲ್ಲಿ ಮಾತಿತ್ತು, ಕತ್ತಲಿಗೆ ಮೌನವಿತ್ತು, ಸಂಜೆ ಒಬ್ಬರಿಗೊಬ್ಬರು ಬೇಕೆಂಬ ಚಡಪಡಿಕೆ ವಿರಹವಲ್ಲದೇ ಮತ್ತೇನು. ಅನುಭವ ಸಿಗಬೇಕಾದಲ್ಲಿ ಗಾಡ ಕತ್ತಲಿಗೊಮ್ಮೆ ನಿಮ್ಮನ್ನು ಒಡ್ಡಿ ನೋಡಿ. -ಪ್ರವರ