ನಾಚಿಕೆ ಕಣ್ಣು ರೆಪ್ಪೆ ಮುಚ್ಚಿದ ಸದ್ದು

ನಿನ್ನೆ ರಾತ್ರಿ ನೆನಪಿದೆಯೆ ಗೆಳತಿ ಹಾಸಿಗೆಯ ಮೇಲಿದ್ದ ಏರುಸಿರು, ಕತ್ತಲೂ ನಾಚುವಂಥ ಪಿಸುಮಾತು ನಾ ನಿನಗೆ ಹೇಳಿದ್ದು ನೀ ನನಗೆ ಹೇಳಿದ್ದು ಮೌನಕ್ಕೆ ಶರಣಾಗಿ ಬಿಸಿಯುಸಿರು ಬಿಡುತ್ತಾ ತುಟಿಯ ಮೆತ್ತಗೆ ಕಚ್ಚಿದ್ದು, ಹಸಿ ಹಸಿ ಮೈಯ ತಬ್ಬಲು ಯಾರೋ ಕಣ್ಣು ರೆಪ್ಪೆಗಳ ಮುಚ್ಚಿದ ಸದ್ದು, ಕತ್ತಲ ಹೊರತು ಇದ್ದದ್ದು ನಾವೇ ತಾನೆ, ನಿನ್ನ ನಾಚಿಕೆ ಇರಬೇಕು! ಮೆಲ್ಲಗೆ ಕದ್ದು ನೋಡುತ್ತಾ ಹೊರ ಜಾರಿದ್ದು ಎದೆ ಮೇಲಿನ ಬೆವರು, ಹೊರಗೆ ಮೈ ಕೊರೆವ ಚಳಿ ಇದ್ದರೂ, ಬೆವೆತ ದೇಹಗಳ ನಡುವೆ ಕೊನೆಗೂ ಸುಟ್ಟದ್ದು ರಾತ್ರಿಯ ಏಕಾಂತವ ಹಿಡಿ ಹಿಡಿಯಾಗಿ ಕಾಡಿದ್ದ ವಿರಹವನ್ನು, ಮತ್ತೆ ನಾಳೆ ಕಾಡಬಹುದೆಂದು ಗೊತ್ತಿದ್ದರೂ, ತಂಡಿ ಗಾಳಿಯು ಸುತ್ತ ಸುತ್ತಿದ್ದರೂ. ರಾತ್ರಿಗೆ ಚಳಿಯ ಮೈಥುನ ಕಣ್ಣೆವೆಯಿಕ್ಕದಂತೆ ಕಾಡಿದ್ದು ಮಾತ್ರ ಸತ್ಯ, ಅಲ್ಲಿಯವರೆಗೂ ಮೈಲಿಗೆಯಾಗಿದ್ದ ದೇಹಗಳು ಮಡಿಗೊಂಡಿದ್ದೇ ರಾತ್ರಿಯಲಿ ಮಿಂದಾಗ. -ಪ್ರವರ