ಒಂದು ರೋಡಿನ ಕಥೆಯಿದು


ಮಟ ಮಟ ಮದ್ಯಾನ್ಹ,
ಟಾರು ರೋಡಿಗೇನು ಬಿಸಿಲ ಝಳ
ಅಂಟೀತೆ?
ಅದೆಷ್ಟಾದರೂ ಬರೆ ಇಟ್ಟುಕೋ,
ತೃಪ್ತಿಯಾಗುವಷ್ಟು ಸುಟ್ಟುಕೋ ಎಂದು
ಬಟ್ಟೆ ಕಳಚಿ ಮಲಗಿದೆ,
ಹೈ ಹೀಲ್ಡ್ಸ್ ಚಪ್ಪಲಿ, ಬೂಟು ಹಾಕಿದವರ
ತುಳಿತ ಬೇರೆ,
ಕ್ಯಾಕರಿಸಿ ಉಗಿದವರು
ಅದೆಷ್ಟು ಜನರೋ ಏನೋ,

ಈ ಶಹರದ ಏಳ್ಗೆ ಕಂಡವರಲ್ಲಿ
ಉಳಿದದ್ದು ಮಾತ್ರ ಈ ಟಾರು ರೋಡು,
ಮಿಕ್ಕವರು ಜಪ್ಪಯ್ಯ ಎಂದರೂ ಏಳುತ್ತಿಲ್ಲ.
ಬಿಡಿ ಈಗಲಾದರೂ ಒಳ್ಳೆಯ ನಿದ್ದೆ

ಹೊಟ್ಟೆಡುಮ್ಮ ರಾಜನೂ
ರಾಣಿಯರೂ
ಅವರೊಂದಿಗಿನ ಮಾಣಿಗಳು,
ಕುದುರೆ ಸಾರೋಟುಗಳು,
ಮುಕ್ಕಾದ ಕೋಟೆಗಳು
ಬಣ್ಣ ಮಾಸಿದ ಅರಮನೆ
ನೋಡಿ ನೋಡಿ ತಿಕ್ಕಲು ತಿರುಗಿ ಹೋಗಿದೆ,

ಯುದ್ದವಾದಾಗ
ಕೊನೆಗೆ ಇದೇ ಜಾಗದಲ್ಲಿ
ರಕ್ತ ಮೆತ್ತಿಕೊಂಡ ನೆನಪು,
ನೆನೆಸಿಕೊಂಡರೆ ಕೆಮ್ಮು ಅಡರುತ್ತದೆ,
ಮೊಂಡುಗತ್ತಿಗಳಿನ್ನೂ ಮ್ಯೂಸಿಯಂನಲ್ಲಿವೆ
ಐದು ರೂಪಾಯಿಯ ಟಿಕೇಟ್!!!
ನೋಡಿಕೊಂಡು ಬನ್ನಿ,
ಆಗ ಇದೊಂದು ಕಚ್ಚಾ ರಸ್ತೆ
ಹೆಸರನ್ನು ಯಾರೂ ಉಲ್ಲೇಖಿಸಲೇ ಇಲ್ಲ
ಇತಿಹಾಸಗಳಲ್ಲಿ,
ಬಿಡಿ ಹಾಳಾಗಿ ಹೋಗಲಿ,

ಅದೆಷ್ಟೋ ವರ್ಷಗಳ ಮಾತು,
ಗುಲ್-ಮೊಹರ್ ಮರದ ಸಾಲುಗಳಡಿ
ಕೈ ಕೈ ಹಿಡಿದು ಓಡಾಡಿಕೊಂಡಿದ್ದ
ಪ್ರೇಮಿಗಳಿಗೆ ಈ ರಸ್ತೆ ಸ್ವರ್ಗ,
ಮಾಗಿಯ ಚಳಿ ಶುರುವಾಗಿ
ಹೂಗಳುದುರುತಿದ್ದರೆ
ಥೇಟ್ ಮದುವಣಗಿತ್ತಿಯ ಲುಕ್ಕು,
ಅದೊಂದು ಕಾಲ ಬಿಡಿ
ಇಂದು ವಯಸ್ಸಾಗಿದೆ
ವಾಕಿಂಗ್ ಸ್ಟಿಕ್ ಹಿಡಿದು,
ಪಾರ್ಕಿನ ಬೆಂಚುಗಳಿಗೆ ಆನಿಕೊಂಡು ಕೂತಿದ್ದಾರೆ,
ಅವರಿಗೂ ಈ ರೋಡಿನ ನೆನಪಿರಲಿಕ್ಕಿಲ್ಲ
ಮುಪ್ಪಾಯಿತಲ್ಲವೇ,

ಏನೆಲ್ಲಾ ಬದಲಾಯಿತು,
ಹಗಲು-ರಾತ್ರಿಗಳಿಗೆ
ವಯಸ್ಸಾಗಲೇ ಇಲ್ಲ
ಇದು ಮಾತ್ರ ಬೇಜಾರಿನ ಸಂಗತಿಯೇ ಸರಿ,
ಕಷ್ಟ-ಸುಖ ಮಾತನಾಡುವುದಕ್ಕೆ ಫುಟ್ ಪಾತ್ ಬಿಟ್ಟರೆ
ಇನ್ಯಾರು ಸಿಗುವುದಿಲ್ಲ,
ರಾತ್ರಿ ಮಾತ್ರ ಕುಡುಕರು, ಅಪಾಪೋಲಿಗಳು,
ಕೆಂಪು ಬೀದಿಯ ಹುಡುಗಿಯರು, ಸೂರಿಲ್ಲದವರು
ಸಿಕ್ಕರೂ ಈ ಟಾರು ರೋಡನ್ನು ಯಾರೂ ಮೂಸಿಯೂ ನೋಡುವುದಿಲ್ಲ,

-ಪ್ರವರ





 





Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ