ಹಸಿದ ತಕ್ಕಡಿ


ಬಿರಿದ ಹಗಲುಗಳಲ್ಲಿ
ನಮ್ಮನ್ನೇ ಕಾಯುತಿದ್ದಾರೆ
ಖೂನಿ ಮಾಡವ ಮಂದಿ
ಅಗೋ ಫಳಗುಡುವ ಅಲಗು
ಇಗೋ ಸುಡುತಲಿದೆ ಮುಗಿಲು

ಪಕ್ಕೆಲುಬಿಗೆ ಅಂಟಿದ
ಮಾಂಸವನ್ನು ಕೊಯ್ದು
ತೂಗಿ ಮಾರುವವರಿದ್ದಾರೆ
ಪಿಂಜಾರರ ಹುಡುಗ ದೊಗಲೆ ಪ್ಯಾಂಟು
ಏರಿಸುತ್ತಾ ಓಡಿದ

ರಕುತ ಅಂಟಿದ ತಕ್ಕಡಿಗೆ
ಅದೆಷ್ಟು ಹಸಿವಿರಬಹುದು
ಅದೆಷ್ಟು ದಾಹವಿರಬಹುದು
ಒಂದು ಕಡೆ ಭಾರ
ಮತ್ತೊಂದೆಡೆ ಹಗುರ
ಚಂದಿರನ ತುಂಡರಿಸಿ ಹಾಕಿದರೂ
ತೂಕದ ಕಲ್ಲು ಮೇಲೇಳಲೆ ಇಲ್ಲ
ಸಮುದ್ರದಲೆಗಳು
ನೀಣು ಬಿಗಿದುಕೊಂಡವು
ತೋಳಗಳು
ಬಾಲ ಮುದುರಿಕೊಂಡವು

ಮೈಯತ್ ಬೀಳುತ್ತಲೇ
ಮಸಣಗಳು ತುಂಬಿ ಹೋದವೊ
ಹೂಳಲು ರೊಕ್ಕ ಕೇಳಿದರು
ಖಾಲಿ ಬಕಣಗಳ ನೋಡಿ
ಅನಾಥ ಮಾಡಿದರೊ

"ಅವ್ವಾ ತಾಯಿ
ದಫನು ಮಾಡಲು
ನಿನ್ನ ಕೆನ್ನಾಲಿಗೆಯ ಚಾಚು"
ಸಿಂಬಳ ಸೀಟುತ್ತಾ
ಅವಲತ್ತುಕೊಂಡರು

ಖೂನಿ ಮಾಡುವ ಮಂದಿ
ರಕುತ ಅಂಟಿದ ತಕ್ಕಡಿ
ಮೊಲೆ ಚೀಪುತಿದ್ದ ಕೂಸುಗಳ

ಜೊಲ್ಲು ಸುರಿಸುತ ನೋಡುತ್ತಾ ಕುಂತವು

Comments

Popular posts from this blog

ಬುದ್ದ

ರೆಕ್ಕೆ ಸುಟ್ಟ ಚಿಟ್ಟೆ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ