ಥೇಟ್ ಕಾಮನಂತೆ

ಚಳಿಗಾಲಕೆ ಮುಖವೊಡೆದಿದೆ
ತುಟಿಯ ಸಹಿತ,
ಗಂಡ ಅದೇ ಸಾರಾಯಿಯ ಗಬ್ಬು
ವಾಸನೆಯಲ್ಲಿಯೇ ಮುದ್ದಿಸುತ್ತಾನೆ
ಚಿನ್ನ-ರನ್ನ ಎಂದು ಥೇಟ್ ಕಾಮನಂತೆ,
ಪ್ರೀತಿಯಿಂದಲೋ, ಕುಡಿದ ಅಮಲಿನಲ್ಲೋ
ತಿಳಿಯಲಾಗಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ.
ಈ ಸೌಭಾಗ್ಯವೆಲ್ಲಾ ರಾತ್ರಿಗಷ್ಟೆ
ಹಗಲು ಕಥೆಯೇ ಬೇರೆ!!

ಫೇರಂಡ್ ಲೌಲಿ, ಪಾಂಡ್ಸ್ ಪೌಡರ್ರುಗಳ
ಯಾವತ್ತೂ ನೋಡಿಲ್ಲ
ಅವು ನನಗ್ಯಾಕೆ ಬೇಕು ಬಿಡಿ
ನಾನೇನು ಥಳಕು ಬಳುಕು ಮಾಡಿಕೊಂಡು
ಬಡಿವಾರ ಮಾಡಲು ಪುರುಸೊತ್ತೆಲ್ಲಿದೆ,
ಬಡಿವಾರದ ಮನೆ ಹಾಳಾಯ್ತು
ಅಷ್ಟು ರೊಕ್ಕವೆಲ್ಲಿಂದ ಬರಬೇಕು,
ಕಂಕುಳಲ್ಲಿ ಗೇಣುದ್ದ ಹರಿದ ಕುಬುಸಕ್ಕೆ
ಕೈ ಹೊಲಿಗೆ ಹಾಕಿಕೊಂಡಿದ್ದೇನೆ.

ಮೊದಲ ರಾತ್ರಿ ಜೊತೆ ಮಲಗಿ ಎಂದು
ಗಂಡನನ್ನು ಕೇಳಿದ್ದು ಬಿಟ್ಟರೆ
ಇಲ್ಲಿಯವರೆಗೂ ಯಾರಲ್ಲಿಯೂ ಏನೂ ಕೇಳಿಕೊಂಡಿಲ್ಲ,
ಇದ್ದರೆ ಉಣ್ಣುತ್ತೇನೆ ಇಲ್ಲದಿದ್ದರೆ
ಉಂಡವರಂತೆ ಹೊಟ್ಟೆಯುಬ್ಬಿಸಿ
ಉಪವಾಸ ಮಲಗುತ್ತೇನೆ,
ಅಕ್ಕಿ ಇಲ್ಲವೆಂದು ಪಕ್ಕದ ಮನೆಯವರ
ಮುಂದೆ ಕೈ ಚಾಚಿದರೆ ಹೇಗೆ.
"ಅದೇನೋ ಅನ್ನುತ್ತಾರಲ್ಲ ಹಾಗೆ"

ನಾನು ರಾತ್ರಿಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದೇನೆ
ನಿದ್ದೆಯಲ್ಲಿ ಹೆಚ್ಚು ಹಸಿವಾಗುವುದಿಲ್ಲ
ಗಂಡನೂ ನನ್ನ ಹೆಚ್ಚು ಹಸಿಯಲು ಬಿಡುವುದಿಲ್ಲ,
ಸೀಮೆ ಎಣ್ಣೆ ಬುಡ್ಡಿಯ ಪಕ್ಕದಲ್ಲಿ
ಅಹೋ ರಾತ್ರಿ ಒಂದಷ್ಟು ಕನಸುಗಳನ್ನೂ
ಕಂಡಿದ್ದೇನೆ ಅವೆಲ್ಲವೂ ಹೊಸತು.
ನನ್ನನ್ನು ನಾನು ಒಂದು ದಿನವಾದರೂ
ನೋಡಿಕೊಳ್ಳಬೇಕು ಸಾಯುವುದರೊಳಗೆ
ಕನ್ನಡಿಗೆ ದುಡ್ಡು ಕೂಡಿಡಬೇಕು...
-ಪ್ರವರ


Comments

Popular posts from this blog

ಫಸ್ಟ್ ಬೆಂಚ್ ಸುಂದ್ರಿ

ನದಿಯ ತಟದಲ್ಲೊಂದು ಬೋಳು ಮರ