ಲೊಚಗುಡುತಿತ್ತು ಬಾಯ್ ಬಿರಿದ ಹಲ್ಲಿ


ಬಿಸಿಲನುಸಿರಾಡುತ್ತ
ಬದುಕುತಿಹ ನನ ಭೂಮಿ,
ಹಸಿದ  ಹೊಟ್ಟೆಯ ಕೂಗ
ಮಾರ್ದನಿಸಿದೆ,
ಕೋಟೆ ಕೊತ್ತಲುಗಳಲಿ
ಕೆಂಪು ರಕುತ ಹಿರಿ
ಮೆರೆದವರ ತೊಗಲನ್ನೆ
ಉಣಬಡಿಸಿದೆ,

ಒಣಗಿದೆದೆ ನೆನಪಲ್ಲಿ
ಮಣ್ಣೊಳಗೆ ಹುಡುಕಾಟ
ಹೂ ಹಣ್ಣು ಕಾಣದಿಹ
ಮುಳ್ಳಬೇಲಿ,
ಬಡಕಲೆದೆಕೂಸು
ಮೊಲೆಹಾಲಿಗಳುವಾಗ
ಲೊಚಗುಡುತಿತ್ತು
ಬಾಯ್ ಬಿರಿದ ಹಲ್ಲಿ

ಮೂಳೆ ಕಡಿಯುತಲಿದ್ದ
ನಾಯ ಬಾಯೋಳ ಜೊಲ್ಲು
ನಗುತಿತ್ತು ಬರಿಕೆರೆಯ
ಕುಹಕವಾಡಿ,
ಹುಲ್ಲ ಗುಡಿಸಲುಗಳು
ಜೀವಂತ ಮಸಣಗಳು
ಬದುಕಿದ್ದು ಸತ್ತವರು
ಅಲ್ಲಿ ಜೀವನಾಡಿ

ಬಂದರೂ ಬರಬಹುದು
ಕೆಂಪು ಬೆಂಕಿಯ ಮಳೆಯು
ಕಪ್ಪು ಮೋಡಗಳೆಲ್ಲ
ನಾವೆ ತಾನೆ,
ತಣಿದರೂ ತಣಿದೀತು
ಬಯಲೆಲ್ಲ ಹಸಿರೀತು
ಮರೆತು ಬಿಡು ಭೀಕರ
ಕಪ್ಪು ನಿನ್ನೆ
-ಪ್ರವರ

Comments

Popular posts from this blog

ಫಸ್ಟ್ ಬೆಂಚ್ ಸುಂದ್ರಿ

ನದಿಯ ತಟದಲ್ಲೊಂದು ಬೋಳು ಮರ