ಅರಸಿಕ ದಂಡೆ

ಮರಳ ಮೇಲೆ
ಕೊರೆದ ಚಿತ್ರಗಳೆಲ್ಲಾ
ಅಲೆಗಳಿಗೆ ಅಳಿಸಿದವು,
ಬಿಡಿ ಬಿಡಿಯಾಗಿ ಚಿತ್ರಿಸಿದ್ದು,
ಯಾರ ಯಾರದ್ದೋ
ನೆನಪುಗಳ ಅಚ್ಚಂತಿದ್ದವು,
ಮನಸ್ಸೊಳಗೆ ಬಯ್ದುಕೊಳ್ಳದೇ
ಬೇರೆ ವಿಧಿಯಿಲ್ಲ!

ಪಾಪ,
ಅಲೆಗಳದೇನು ತಪ್ಪು
ಅದಕ್ಕೂ ಸಿಟ್ಟಿರಬಹುದು
ತನ್ನೊಳಗೆ ಕಹಿ-ಸಿಹಿಗಳೆಲ್ಲಾ
ಕರಗಿ ಹೋಗಿ
ಕಾಲಗಳೇ ಗತಿಸಿದರೂ
ಅದನ್ನು ಕೇಳುವವರಿಲ್ಲ.
ತನಗಿರದ ಆ ಸಾಂಗತ್ಯ
ಮರಳ ದಂಡೆಗೇಕೆ?

ಅಕ್ಕಪಕ್ಕ ಇದ್ದರೂ
ಇಬ್ಬರದೂ ಏಕಾಂತವೇ,
ದಂಡೆ ಯಾರದೋ ನೆನಪಲ್ಲಿ
ಮುದ್ದೆಯಾಗಿ ಕೂತಿದ್ದರೆ,
ಅಲೆ ವಿರಹಕ್ಕೆ
ಆಗಾಗ ದಂಡೆಯತ್ತ
ನುಲಿಯುತ್ತ ಸುಳಿಯುತ್ತದೇ
ಚುಂಬಿಸುತ್ತದೆ
ಆಗಲೂ ಅಲುಗಾಡದೇ ಸುಮ್ಮನೇ ಕೂರುವ
ದಂಡೆಗೆ ಅರಸಿಕ ಎನ್ನಬೇಕೋ
ಏಕಾಂಗಿ ಎನ್ನಬೇಕೊ
-ಪ್ರವರ

Comments

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ರೆಕ್ಕೆ ಸುಟ್ಟ ಚಿಟ್ಟೆ