ನದಿಯ ದಂಡೆಯೂ ಮತ್ತು ನನ್ನ ನಲ್ಲೆಯೂ

ನದಿಯ ದಂಡೆಯಲ್ಲೇಕೆ ನಿಂತಿರುವಿ ನಲ್ಲೆ,
ನಸುಕಿನಿಂದಲೂ ನಿನ್ನನೇ
ಹುಡುಕಿ ಬೆವರು ಹರಿದು
ಮೈಯೆಲ್ಲ ಉಪ್ಪಡರಿದೆ
ಈಗ ಕೊಂಚ ಸಮಾಧಾನಕ್ಕೆ
ತಣ್ಣಗಾಗಿಹೆ,

ತಂಗಾಳಿಯ ಪಿಸುಮಾತ ಕೇಳುತ್ತಿರುವೆಯೇನು
ನನಗೇನು ಕೇಳುತ್ತಿಲ್ಲವಲ್ಲ,
ನೀ ಎದುರಿಗಿದ್ದಕ್ಕೆ ನನ್ನ
ಎದೆ ಬಡಿತವೇರಿ
ಕಿವಿ ತಮಟೆಗಪ್ಪಳಿಸುತ್ತಿದೆ,

ಮಳೆ ನಿಂತು ಸುಮಾರು ಹೊತ್ತಾಯಿತು
ಹನಿ ತೊಟ್ಟಿಕ್ಕುತ್ತಿದೆಯಲ್ಲ,
ಹೋ ನೀರಿಗೆ ಕಲ್ಲು ಎಸೆಯುತ್ತಿರುವೆಯೇನು
ಅದಕ್ಕೇ ನೀರ ಮೇಲೆ
ಅಲೆಗಳು ನಗುತ್ತಾ ತೇಲುತ್ತಿವೆ
ನಿನ್ನ ಮೂಗುತ್ತಿಯಂತೆ.

ರೆಪ್ಪೆಗಳನ್ನೊಂಚೂರು ಮಿಟುಕಿಸು
ಅಷ್ಟು ಚೆಂದದ ಕಣ್ಣುಗಳಿಗೆ
ದೃಷ್ಟಿಯಾದೀತು,
ಹುಬ್ಬ ತೀಡಿದ್ದ ಕಪ್ಪು ಕಾಡಿಗೆಗೂ ಸಹಿತ,

ಕಾಲ್ಗೆಜ್ಜೆಯಲ್ಲಿದ್ದ ಎರಡು ಗೆಜ್ಜೆಗಳು
ಕಾಣುತ್ತಿಲ್ಲವಲ್ಲ,
ನೀರಲ್ಲಿ ಕಾಲಿಟ್ಟಾಗ ಮೀನುಗಳು
ಬೆರಳ ಚುಂಬಿಸಲು ಹೋಗಿ
ಆಯಾತಪ್ಪಿ ನುಂಗಿರಬೇಕು,

ಇಲ್ಲೇಕೆ ನಿಂತಿರುವೆ ನಲ್ಲೆ
ಮೌನಕ್ಕೆ ಶರಣಾಗಿ
ನದಿಯ ದಂಡೆಯ ಮೇಲೆ
-ಪ್ರವರ


Comments

Popular posts from this blog

ಫಸ್ಟ್ ಬೆಂಚ್ ಸುಂದ್ರಿ

ನದಿಯ ತಟದಲ್ಲೊಂದು ಬೋಳು ಮರ