ರಾತ್ರಿ ಕನವರಿಕೆಗಳು ಕೇಳಿಸಿಕೊಳ್ಳಿ

ಮೊಂಬತ್ತಿ,
ಯಾರಿಗೋ ಅನುವು
ಮಾಡಿಕೊಟ್ಟಂತೆ ಕರಗುತ್ತಿದೆ.
ಕತ್ತಲೊಳಗೆ ತಾನೂ
ಅಡಗಿಕೊಂಡು
ಹಾಸಿಗೆಯ ಮೇಲಿನ
ಪಿಸು ಮಾತುಗಳ
ಚಡಪಡಿಕೆಗೆ....

ಅಹೋ ರಾತ್ರಿಗಳನ್ನು
ನಾನು ಕಣ್ಣುಗಳ ಮುಚ್ಚದಂತೆ
ಕಳೆದಿದ್ದೇ,
ಎದೆ ಬಗೆದ ಕನಸುಗಳ ಜೊತೆ,
ಗೆಜ್ಜೆ ಸದ್ದು ಕೇಳುವ
ಗೀಳು ಹತ್ತಿದ್ದರಿಂದಲೋ ಏನೋ
ಮೌನವಾಗಿ
ಕತ್ತಲ ಕೂಡಿಸಿದ್ದೆ


ರಾತ್ರಿಯಾಗಸಕೆ
ಅಂಟಿಸಿದ ಚುಕ್ಕಿಗಳು
ಜಾರಿಬಿದ್ದದ್ದು ಸಾಗರದಲ್ಲಿ,
ತೇಲಲೊಲ್ಲದೇ ಮುಳುಗಲೊಲ್ಲದೇ
ಅಲೆಗಳ ಜೊತೆ ತುಳುಕಾಡುತ್ತಿವೆ.
ಅದೇ
ನೀನು ಬಿಸಾಡಿ ಹೋದ
ನೆನಪುಗಳಂತೆ

ಹಗಲಿಂದ ರಾತ್ರಿಗೆ ಜಾರಿಕೊಂಡಿದ್ದ
ಕೌತುಗಳನ್ನು ಅವುಚಿಕೊಂಡು
ಮೆತ್ತನೆ ಹಾಸಿಗೆಯ ಮೇಲೆ
ಮಲಗಿದ್ದೆ,
ಒಳದನಿಯ ಮರ್ಮರ ಕೇಳಿಸಿಕೊಂಡವರು
ಕನವರಿಸುತಿದ್ದೀಯ ಎಂದು
ಬಡಿದೆಬ್ಬಿಸಿದರು

ಮೌನಕ್ಕೆ ಶರಣಾಗುವ
ಮುಂಚೆ ಒಂದಷ್ಟನ್ನು ಬೊಗಸೆಯಲ್ಲಿ
ನೀಡುತ್ತೇನೆ
ಸಾಧ್ಯವಾದರೆ ಎದೆಯಲ್ಲಿರಿಸಿಕೋ

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ