ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, October 15, 2012

ಕಟು ವಾಸ್ತವ


ನಾರುತಿದ್ದ ತಿಪ್ಪೆಯಲ್ಲಿ
ಹರುಕಲು ಟೋಪಿ ಹಾಕಿಕೊಂಡು
ಕಸ ಆಯುತಿದ್ದ
ಹುಡುಗ ಅಲ್ಲೇ ಯಾರೋ
ಬಿಸಾಡಿದ್ದ ಕೊಳೆತ ಟೊಮ್ಯಾಟೊಗಳತ್ತ
ಆಸೆಯಿಂದ ನೋಡುತಿದ್ದಾನೆ,

ಕೆ.ಎಫ್.ಸಿಯ ಮುಂದುಗಡೆ
ಚಿಲ್ಲರೆಗೆ ಕೈ ಚಾಚುತ್ತಾ ಕೂತಿದ್ದ ಅಜ್ಜಿ
ರೇಬಾನ್ ಗ್ಲಾಸು ಹಾಕಿಕೊಂಡು
ಸೊಂಟ ಬಳುಕಿಸುತ್ತಾ
ಹೊರ ಬಂದ ಹುಡುಗಿಗೆ
ಕಾಣಿಸಲಿಲ್ಲ,  

ಎಂಟು ದಾಟದ ಹುಡುಗಿ
ಪುಟ್-ಪಾತಿನ ಮೇಲೆ
ಆಸೆ ಕಂಗಳಿಂದ ಅವರಿವರ
ಬೂಟುಗಳ ನೋಡುತಿದ್ದಾಳೆ
ಪಾಲೀಷಿಗೆ,.... ಹಸಿದ ಹೊಟ್ಟೆಯ
ಗೊಣಗಾಟಕ್ಕೆ.

ಬ್ರಾಂಡೆಡ್ಡು ಮಾಲುಗಳನ್ನೇ
ತುಂಬಿಕೊಂಡಿದ್ದ ಶಾಪಿಂಗ್ ಮಾಲ್ ಗಳೋಳಗೆ
ಸೆಂಟು ಹೊಡೆದುಕೊಂಡು ಘಂ ಎನ್ನುತಿದ್ದ
ತರಹೇವಾರಿ ಜನ,
ಹೊಟ್ಟೆ ತುಂಬಿದವರೇ ಎಲ್ಲ
ಜಾಗತೀಕರಣದ ಜೊಳ್ಳಿನೊಳಗೆ
ಬಣ್ಣ ಹಚ್ಚಿಕೊಂಡವರೇ

ಹಸಿವಿನ ಒರತೆಗೆ
ಅಂಗಲಾಚುತಿದ್ದವರೊಂದು ಕಡೆಯಾದರೆ
ಹೊಟ್ಟೆ ತುಂಬಿ
ಕುರುಡಾದವರೊಂದು ಕಡೆ.
ಈ ಕಟು ಸತ್ಯದ ನಡುವೆ
ಮೂಕರಂತೆ ಬದುಕುತಿದ್ದೇವೆ.
ಮೂಕರಂತೆ ಬದುಕುತಿದ್ದೇವೆ
-ಪ್ರವರ

1 comment:

  1. NijavaagaLu naavu mookare swaami...vaastavakke anugunavaagide nimma kavana

    ReplyDelete

ಅನ್ಸಿದ್ ಬರೀರಿ