ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, July 18, 2012

ಹೊಲೆಯನೂ, ಕೃಥಾರ್ಥ ಕೆರವೂ

ಬಸ್ಟಾಂಡಿನ ಮುಂದೆ
ತ್ಯಾಪೆ ಹಚ್ಚಿದ ಛತ್ರಿಯಡಿ
ಕೆರ ಹೊಲೆಯುತಿದ್ದವನ
ಮೈಯೊಳಗೆ ಮೂರು ಪಾವು
ಮಾಂಸವಿಲ್ಲ,
ಸೂಳೆ ಮನೆಯಲಿ
ದಣಿದುದಕೋ ಏನೋ
ಬೆವರಿಳಿದೂ ಇಳಿದು
ಮೈ ಉಪ್ಪಡರಿದೆ,
ಕಣ್ಣೊಳಗಿನ ಪಿಚ್ಚು
ಅಲ್ಲಿದ್ದ ಕೆರಗಳನ್ನೇ ದುರುಗುಟ್ಟಿಕೊಂಡು
ನೋಡುತಿತ್ತು.
ಎಣ್ಣೆ ಕಾಣದೇ
ಕೂದಲು ಒಂದಕ್ಕೊಂದು ಅಂಟಿದ್ದವು
ನಾಯಿಗಳ ರತಿ ಕ್ರೀಡೆಯಂತೆ,

ಬ್ರಾಹ್ಮಣರ, ಲಿಂಗಾಯತ, ಐನಾರಪ್ಪನ, ಊರ ಗೌಡನ
ಕೆರಗಳೆಲ್ಲಾ ತಲೆ ಬಗ್ಗಿಸಿಕೊಂಡು
ಹೊಲೆಯನ ಮುಂದೆ ಕೂತಿವೆ,
ಅವೆಲ್ಲಾ ಮೇಲ್ಜಾತಿಯವರವಂತೆ
ಈತ ತನ್ನ ಕಾಲಡಿಯಲ್ಲಿ ಮೆಟ್ಟಿ
ಕಸುವಿಕ್ಕಿ ಹೊಲಿಯುತಿದ್ದಾನೆ,
ಬ್ರಾಹ್ಮಣನ ಜನಿವಾರ
ಹೊಲೆಯನ ಕೆರ ಹೊಲೆವ
ಸೂಜಿಯಲಿ ನುಸುಳಿತ್ತು,
ಒಂದು ಹೊಲಿಗೆಗೆ ಒಮ್ಮೆ
ಬಾಯ ಉಗುಳಿನ ಸ್ನಾನ ಮಾಡಿಸುತಿದ್ದಾನೆ
ಮಡಿ-ಮೈಲಿಗೆಯೆಲ್ಲ ಕೊಚ್ಚಿ ಹೋಗುವ ಹಾಗೆ.

ಒಬ್ಬೊಬ್ಬರೇ ಕೆರಗಳೋಯ್ಯುತಿದ್ದಾರೆ
ಜನಿವಾರ, ವೀಭೂತಿ, ಪೂಜೆ, ಅಧಿಕಾರಗಳೆಲ್ಲಾ
ಹೊಲೆಯನ ಉಗುಳಿಗೆ ಶುದ್ದವಾಗುತ್ತಿವೆ,
ತಲೆ ಬಗ್ಗಿಸಿ ಹೊಲೆಸಿಕೊಂಡ
ಕೆರಗಳೀಗ ನಿರಾಳ,

3 comments:

ಅನ್ಸಿದ್ ಬರೀರಿ