Posts

Showing posts from December, 2012

ಈ ಸಂಜೆ ನೀನು ಸಿಗಬೇಕಿತ್ತು ಹುಡುಗಿ,

Image
ಈ ಸಂಜೆ ನೀನು ಸಿಗಬೇಕಿತ್ತು ಹುಡುಗಿ, ಸಿಗಬೇಕಿತ್ತು ನಡುಗುತಿದ್ದ ತುಟಿಗೆ ತುಟಿಯೊತ್ತಿ ಸಮಾಧಾನಿಸಬೇಕಿತ್ತು ಯಾಕೋ ಗೊತ್ತಿಲ್ಲ ಕೊರೆವ ಚಳಿ ಇಲ್ಲ ಆದರೂ ಸಂಜೆಗೆ ಸಿಗಬೇಕಿತ್ತು ಹುಡುಗಿ ರೋಮಗಳೆಲ್ಲ ಎದ್ದು ನಿಲ್ಲುವಂತೆ ಮೈ ಮರುಗಟ್ಟಿದೆ ಹುಡುಗಿ ನೀ ಅಪ್ಪಬೇಕಿದೆ ಒಮ್ಮೆ ಉಸಿರುಗಟ್ಟುವಂತೆ ಬೆವರಿಳಿಯುವಷ್ಟು, ಬಿಸಿಯೇರುವಂತೆ ಬೆಳಕಿನ್ನು ಆರಿಲ್ಲ ಆದರೂ ಈ ಸಂಜೆಗೆ ಸಿಗಬೇಕಿತ್ತು ಹುಡುಗಿ ಕತ್ತಲೆಗೆ ನಿನ್ನೊಟ್ಟಿಗಿರಲು ಅಳುಕು ನನಗೆ ನಿನ್ನವನಾದರೇ ಹೇಗೆಂದು, ಕತ್ತಲೊಂಚೂರು ದೂರವಿದೆ ಆದರೂ ಈ ಸಂಜೆಗೆ ಸಿಗಬೇಕಿತ್ತು ಹುಡುಗಿ

ಅರಸಿಕ ದಂಡೆ

Image
ಮರಳ ಮೇಲೆ ಕೊರೆದ ಚಿತ್ರಗಳೆಲ್ಲಾ ಅಲೆಗಳಿಗೆ ಅಳಿಸಿದವು, ಬಿಡಿ ಬಿಡಿಯಾಗಿ ಚಿತ್ರಿಸಿದ್ದು, ಯಾರ ಯಾರದ್ದೋ ನೆನಪುಗಳ ಅಚ್ಚಂತಿದ್ದವು, ಮನಸ್ಸೊಳಗೆ ಬಯ್ದುಕೊಳ್ಳದೇ ಬೇರೆ ವಿಧಿಯಿಲ್ಲ! ಪಾಪ, ಅಲೆಗಳದೇನು ತಪ್ಪು ಅದಕ್ಕೂ ಸಿಟ್ಟಿರಬಹುದು ತನ್ನೊಳಗೆ ಕಹಿ-ಸಿಹಿಗಳೆಲ್ಲಾ ಕರಗಿ ಹೋಗಿ ಕಾಲಗಳೇ ಗತಿಸಿದರೂ ಅದನ್ನು ಕೇಳುವವರಿಲ್ಲ. ತನಗಿರದ ಆ ಸಾಂಗತ್ಯ ಮರಳ ದಂಡೆಗೇಕೆ? ಅಕ್ಕಪಕ್ಕ ಇದ್ದರೂ ಇಬ್ಬರದೂ ಏಕಾಂತವೇ, ದಂಡೆ ಯಾರದೋ ನೆನಪಲ್ಲಿ ಮುದ್ದೆಯಾಗಿ ಕೂತಿದ್ದರೆ, ಅಲೆ ವಿರಹಕ್ಕೆ ಆಗಾಗ ದಂಡೆಯತ್ತ ನುಲಿಯುತ್ತ ಸುಳಿಯುತ್ತದೇ ಚುಂಬಿಸುತ್ತದೆ ಆಗಲೂ ಅಲುಗಾಡದೇ ಸುಮ್ಮನೇ ಕೂರುವ ದಂಡೆಗೆ ಅರಸಿಕ ಎನ್ನಬೇಕೋ ಏಕಾಂಗಿ ಎನ್ನಬೇಕೊ -ಪ್ರವರ

ರಾತ್ರಿ ಬರೆಸಿದವರ್ಯಾರು?

Image
ರಾತ್ರಿಯಲ್ಲಿ ಒಮ್ಮಿಂದೊಮ್ಮೆ ಎದ್ದು ಕೂರಿಸಿ ನನ್ನೊಳಗಿಂದ ಯಾರೋ ಬರೆಸುತ್ತಾರೆ, ನನ್ನದೇನು ಕರ್ಮ ಯಾರದೋ ತೀಟೆಗೆ ನಾನು ಬರೆಯಬೇಕು ಅದೂ ಅಸ್ಪಷ್ಟವಾದ ತೊದಲಕ್ಷರದಲ್ಲಿ, ಅವಳೋ ಅವರೋ ಎಂದು ತಲೆ ಕೆದರುವ ಹೊತ್ತಿಗೆ ಮತ್ತದೇ ಝೋಂಪಿನಲ್ಲಿ ಬರೆಯ ಕೂರುತ್ತೇನೆ, ರೋಮಗಳು ಬೆವರಿಳಿದು ಉಪ್ಪಡರಿದರೂ ಸಹಿತ ಅದೇ ನಿದ್ದೆಮೂಟೆಯ ಕಣ್ಣಿನಲ್ಲಿ, ಇಲ್ಲಿ ನನ್ನ ಬಿಟ್ಟರೆ ಕತ್ತಲು ಹಿಡಿ ಬೆಳಕು ಹಾಗೆ ಒಂದಿಷ್ಟು ನೀಚ ಕನಸುಗಳು, ಉದುರು ಮರಳಿನಂತಿವೆ ಇನ್ಯಾರ ದೂರಬೇಕು ಕನಸುಗಳನ್ನಾ??? ಅಥವಾ ಕೈಗೆ ಸಿಗಲಾರದಿದರಲ್ಲಿ ಕುಳಿತು ಬರೆಸಿದವರನ್ನಾ??? -ಪ್ರವರ