ಲಚುಮಿಯೆಂಬ ಪ್ರೇತವೂ, ಬದುಕಲೆಂಬ ಪ್ರೀತಿಯೂ


                        "ಬೆಳಗ್ಗೆಯಿಂದ ಏನು ಬರೆಯಲಾಗುತ್ತಿಲ್ಲ ಸಾಕಾಗಿ ಹೋಗಿದೆ, ತಲೆ ಚಿಟ್ಟು ಹಿಡಿಸುವ ಗಲಾಟೆ ಬೇರೆ, ಎರೆಡು ಪ್ಯಾಕ್ ಸಿಗರೇಟ್ ಖಾಲಿಯಾದರೂ ಹೂ ಹೂ... ಅದೇ ಕಿಟಕಿ ಅದೇ ಬೀದಿ ಅದೇ ಚಿತ್ರಗಳು ಅದೇ ಮಾಸಲು ಜನ ಏನೂ ತೋಚುತ್ತಿಲ್ಲ ಬರೆಯಲು, ಥೂ ಎಲ್ಲಾದರೂ ಜನರಿಲ್ಲದ ಜಾಗಕ್ಕೆ ಹೋಗಿ ಪ್ರಯತ್ನಿಸಿದರೆ ಬರೆಯಬಹುದೇನೋ" ಎಂದು ಗೊಣಗುತ್ತಲೇ ಲುಂಗಿ ಕಿತ್ತು
ಬಿಸಾಡಿ ಪ್ಯಾಂಟು ಏರಿಸಿಕೊಂಡ ಅಂಗಿ ಸುಕ್ಕು ಸುಕ್ಕಾಗಿದ್ದರೂ ಅದನ್ನೇ ಏರಿಸಿಕೊಂಡ,  ಒಂದಷ್ಟು ಹಾಳೆಗಳ, ಪೆನ್ನು, ರೈಟಿಂಗ್ ಪ್ಯಾಡನ್ನು, ಹೆಂಡತಿಯಂಥ ಸಿಗರೇಟು ಪ್ಯಾಕನ್ನ ಜೋಳಿಗೆಯಂಥ ಬ್ಯಾಂಗಿಗೆ ತುರುಕಿಕೊಂಡು, ಬಿಸಿಲಲ್ಲಿ ಒಣಗುತ್ತಾ ನಿಂತಿದ್ದ ಚೇತಕ್ ಬಜಾಜನ್ನು ನಾಲ್ಕು ಕಿಕ್ಕು ಕೊಟ್ಟ ಒಂದು ತರಹದ ಸೌಂಡು ಮಾಡುತ್ತಾ ತುರಾಮುಟ್ಟಿಯಷ್ಟು ಹೊಗೆಯುಗುಳುತ್ತಾ ಸವಾರಿಗೆ ರೆಡಿಯಾಯ್ತು, ಸ್ವಲ್ಪ ಮುಂದಕ್ಕೆ ಚಲಿಸುತ್ತಲೇ ಯಾವಕಡೆ ಹೋಗಬೇಕೆಂದು ಊರಿನ ನಾಲ್ಕೂ ದಿಕ್ಕುಗಳನ್ನು ನೆನೆದು ಕೂಲಂಕುಶವಾಗಿ ಮನಸ್ಸಿಗೆ ತಂದುಕೊಂಡು "ಗೌಡರ ತೋಟಕ್ಕೆ ಹೋದರೆ ಹೇಗೆ ಛೇ ಛೇ ಬೇಡ ಗೌಡರ ಪೋಲಿ ಆಟಗಳನ್ನು ಹಾಳು ಮಾಡುವುದು ಬೇಡ, ಜೋಳದಕೂಡ್ಲಿಗಿ ರಸ್ತೆಯಲ್ಲಿರುವ ಆಲದ ಮರದಡಿಯಲ್ಲಿರುವ ಮಲಿಯಮ್ಮ
ದೇವಸ್ಥಾನಕ್ಕೆ ಹೋಗಿ ಕೂತರೆ ಹೇಗೆ ಥೂ ಅಲ್ಲೂ ಪೂಜಾರಿ ಸುಂಕಪ್ಪನ ಕಾಟ, ಸುಟ್ಟಕೋಡಿಹಳ್ಳಿಯ ದಾರಿ ಖಾಲಿ ಖಾಲಿ ಎನ್ನಿಸಿ ಅದೇ ಸರಿ ಅನ್ನಿಸಿ ಖರಾಬಾದ ಸೌಂಡು ಮಾಡುತ್ತಾ ಹೊರಟುಬಿಟ್ಟ...

    ಉಜ್ಜಿನಿ ಸರ್ಕಲ್ಲಿನಲ್ಲಿ ಧೂಳು ಎಬ್ಬಿಸುತ್ತ ಸಾಗುತಿದ್ದ ಲಾರಿಯನ್ನು ನಿಲ್ಲಿಸಿ ಬೈಯ್ಯಬೇಕೆನ್ನಿಸಿತಾದರೂ ಕಥೆ ಬರೆಯುವ ಮೂಡು ಹಾಳಾಗಬಾರದೆಂದು ಸುಮ್ಮನೇ ಇದ್ದ, ಊರು
ಬಿಟ್ಟ ಹೊರಗೆ ಹೋಗುತ್ತಲೇ ಮನಸ್ಸಿಗೆ ಹಿಡಿಸುವಂಥ ಜಾಗ ಕಾಣಲಿಲ್ಲ ಮುಂದೆ ಹೋಗುತ್ತಲೇ
ಊರ ಸ್ಮಶಾನ ಒಂದಷ್ಟು ಮರಗಳೆಲ್ಲಾ ಇದ್ದವು ಬರೆಯಲಿಕ್ಕೆ ಏಕ್ ಧಮ್ ಫಸ್ಟ್ ಕ್ಲಾಸ್
ಪ್ಲೇಸು ಎನ್ನಿಸಿತು. ಗಾಡಿಯ ಸೈಡು ಸ್ಟ್ಯಾಂಡು ಹಾಕಿ ನಿಲ್ಲಿಸಿ ಹೆಜ್ಜೆ ಇಟ್ಟರೆ
ಸ್ವಾಗತಿಸಿದ್ದು ವೀರಶೈವ ರುದ್ರಭೂಮಿ ಎಂಬ ದೊಡ್ಡ ಫಲಕ. ಮೀಸೆ ತಿರುವಿಕೊಂಡು ಕಾಲು
ಅಲ್ಲಾಡಿಸುತ್ತಾ ಕೂರುತಿದ್ದ ಊರಗೌಡರು, ಜುಟ್ಟು ತಿರುವಿಕೊಂಡು ಹೊಟ್ಟೆ ಸವರಿಕೊಂಡು
ಓಡಾಡುತಿದ್ದ ಬ್ರಾಹ್ಮಣರು, ಲಿಂಗಾಯತರು ಅಬ್ಬೊ ಮೆರೆದವರೆಲ್ಲಾ ಮಣ್ಣಲ್ಲಿ
ಮಲಗಿದ್ದಾರೆ ಊರು ಕೊಂಚ ಅರಾಮಾಗಿ ಉಸಿರಾಡುತ್ತಿದೆ. ಇದೇ ಊರಿನಲ್ಲಿ ಬೆಳದಿದ್ದ,
ಇಲ್ಲಿ ಮಲಗಿದ್ದವರನ್ನೆಲ್ಲಾ ನೋಡಿದ್ದೇನೆ ಒಂದಷ್ಟು ಬಾರಿ ಕಾಲು ಒತ್ತಿದ್ದೂ ಉಂಟು,
ಅಪ್ಪ-ಅಮ್ಮ ಅನಾರೋಗ್ಯದಿಂದ ನರಳುವಾಗ ಶೂದ್ರರೆಂಬ ಕಾರಣಕ್ಕೆ ಡಾಕ್ಟರ್ರಾದ ಮೌನೇಶರೂ
ಮುಟ್ಟಲಿಲ್ಲ. ಅವರಿವರ ಮನೆಯಲ್ಲಿ ಸಗಣಿ ಬಾಚುತ್ತಾ ಓದಿ ಪ್ರೈಮರಿ ಸ್ಕೂಲ್ ಮಾಸ್ತರಾಗಿ
ಸೇರಿಕೊಂಡದ್ದು ಎಲ್ಲವನ್ನೂ ನೆನೆದು ಮನಸ್ಸು ಕೊಂಚ ಭಾರವೆನಿಸಿತು. ಹಣೆಯಿಂದ
ಇಳಿಯುತಿದ್ದ ಬೆವರನ್ನು ಅಂಗಿಯ ತೋಳಿನಿಂದ ಒರೆಸಿಕೊಂಡು ಮುಂದಕ್ಕೆ ಅಡಿಯಿಟ್ಟ.

ತರಹೇವಾರೊ ಗೋರಿಗಳಿವೆ, ದುಡ್ಡಿದ್ದವರು ಹಾಲುಗಲ್ಲುಗಳ ಒಳಗೆ ಮಲಗಿದ್ದರೆ ಇಲ್ಲದವರು
ಕಾಡುಗಲ್ಲುಗಳ ಒಳಗೆ ಮಲಗಿದ್ದಾರೆ. ಅಪ್ಪ ಅಮ್ಮರನ್ನು ಹೂಳುವುದಕ್ಕೆ ಇಲ್ಲಿ ಅವಕಾಶ
ಮಾಡಿಕೊಡಲಿಲ್ಲ ಬೇರೆಲ್ಲೋ ಮಣ್ಣು ಮಾಡಿದರು. ಥೂ ಈಗವೆಲ್ಲಾ ಯಾಕೆ ಬರೆಯಲು ಕೂತುಬಿಡುವ
ಯೋಚನೆಯೊಂದಿಗೆ ನೆರಳಿರುವ ಜಬರ್ದಸ್ತಾದ ಜಾಗವನ್ನು ಹುಡುಕಾಡಿದ, ಆಲದ ಮರದ ಬಿಳಲುಗಳ
ಅಡಿಗೆ ಕೊಂಚ ಅಗಲವಾದ ನುಣುಪು ಹಾಸಿನ ಕಲ್ಲಿನ ಗೋರಿ. ಧೂಳು ಏನನ್ನೂ ಲೆಕ್ಕಿಸದೇ ಕೂತು
ಬ್ಯಾಗಿನಲ್ಲಿದ್ದ ಸಿಗರೇಟನ್ನು ಹಚ್ಚಿ ಬರೆಯಲಿಕ್ಕೆ ಕೂತುಬಿಟ್ಟ..... ಚೂರೇ ಚೂರಷ್ಟು
ಸದ್ದಿಲ್ಲ, ಘಾಢ ಮೌನ ಬರವಣಿಗೆ ಗಂಟೆಗಟ್ಟಲೆ ಸಾಗಿತ್ತದೆ, ಒಂದರ್ ಮೇಲೊಂದರಂತೆ
ಸಿಗರೇಟುಗಳು ಸುಡುತ್ತಾ ಹೋಗುತ್ತವೆ...

     ಸಂಜೆ ಆರುವರೆಯಾಯಿತು ಇನ್ನೂ ಬರೆಯುವ ಮನಸ್ಸಿದ್ದರೂ ಕಾಣುವಷ್ಟು ಬೆಳಕಿರಲಿಲ್ಲ,
ಅವನ ಪುಣ್ಯವೇನೋ ಎಂಬಂತೆ ಸ್ಮಶಾನದಲ್ಲೂ ಲೈಟು ಹಾಕಿಸಿದ್ದರು ಪಟ್ಟಣ ಪಂಚಾಯ್ತಿಯವರು.
ಮತ್ತೆ ಊರಿನೊಳಕ್ಕೆ ಹೋದರೆ ಬರೆಯುವ ಮೂಡು ಹಾಳಾಗುತಿತ್ತು. ಸರಿ ಮತ್ತೆ ಯಥಾರೀತಿ
ಬರೆಯಲು ಮುಂದುವರೆಸಿದ, ಜೀಗುಡುವ ಕತ್ತಲೆಂದರೆ ಕತ್ತಲು, ಗಂಟಲು ಹರಿಯುವಂತೆ
ಕಿರುಚಿದರೂ ಯಾರಿಗೂ ಕೇಳದಷ್ಟು ದೂರದ ಸ್ಥಳ. ಅದ್ಯಾವುದೋ ಋಷಿ ಧ್ಯಾನಕ್ಕೆ ಕೂತಾಗ
ಮೈಮೇಲೆಲ್ಲಾ ಹುತ್ತ ಬೆಳೆದಿತ್ತಂತೆ, ಈತ ಬರೆಯುತ್ತಿರುವುದ ನೋಡಿದರೆ ಕಥೆಯ ಆಳಕ್ಕೆ
ಹೋಗಿದ್ದಾನೆ ಎನ್ನಿಸುತ್ತಿದೆ. ಆ ಭಯಾನಕ ಕತ್ತಲಿಗೆ ಚಂದಿರನೆಂಬೋ ಚಂದಿರನೇ
ಮಾಯವಾಗಿದ್ದಾನೆ ಒಂದಷ್ಟು ಚುಕ್ಕಿಗಳನ್ನು ಎಸೆದಿದ್ದಾನೆ ಪಾರಿವಾಳಕ್ಕೆಸೆದ ಅಕ್ಕಿ
ಕಾಳುಗಳಂತೆ.

ರಾತ್ರಿ ಹೊತ್ತು ಸ್ಮಶಾನಕ್ಕೆ ಬರುವುದಂದರೇನು ಬಂದು ಗೋರಿಯ ಮೇಲೆ ಕೂತು
ಬರೆಯುವುದೆಂದರೇನು, ಈ ಊರಿನ ಮಿಲ್ಟ್ರಿ ರಾಜಪ್ಪನೇ ಒಮ್ಮೆ ಅಕಸ್ಮಾತಾಗಿ ಬಂದು ಏನನ್ನೋ
ನೋಡಿ ಭಯಗೊಂಡು ಒಂದು ವಾರಗಟ್ಟಲೇ ಚಳಿ-ಜ್ವರ ಬಂದು ನರಳಿದ್ದೇನು, ಆತನ ಹೆಂಡತಿ
ಊರಮ್ಮದೇವಿಯನ್ನು ಹಗಲು ಇರುಳನ್ನದೇ ಹರಕೆಯೊತ್ತು ಕಷ್ಟಪಟ್ಟಿದ್ದೇನು. ಮೂಗಪ್ಪ
ಡಾಕ್ಟರ್ರು ಅಂಡಿಗೆ ಕೊಡುತ್ತಿದ್ದ ಎರಡು ಇಂಜೆಕ್ಷನ್ನಿಗೂ ಕಡಿಮೆಯಾಗದ ಜ್ವರ ಕೊನೆಗೆ
ಇಳಿದಿದ್ದು ಮಾತ್ರ ದನಕಾಯೋ ಈರಜ್ಜನ ಮಂತ್ರಿಸಿದ ನಿಂಬೆಹಣ್ಣಿಗೆ. ಅಂಥದ್ದರಲ್ಲಿ
ಸಾಮಾನ್ಯ ನರನಾದ ಈ ಮೇಸ್ತರಿಗೇನು ಬಂತು, ಇಷ್ಟಗಲದ ಹುರಿ ಮೀಸೆ ತಿರುವುವರೂ ಈ ಕಡೆ
ತಲೆ ಹಾಕಿ ಮಲಗಲಿಕ್ಕೆ ಉಚ್ಚೆ ಹೊಯ್ಯಿಕೊಳ್ಳುವಾಗ, ಇವನು ಮಾತ್ರ ಆರಾಮಾಗಿ ಕೂತು
ಬರೆಯುತ್ತಿದ್ದಾನೆ. ಸೇದಿದ ಸಿಗರೇಟುಗಳೆಲ್ಲವನ್ನು ಮ್ಯಾಗಳಗೇರಿಯ ಗೌಡರ ಗೋರಿಯ ಮೇಲೆ
ಹಾಕಿದ್ದಾನೆ ಬೇರೆ. ಯಾರೋ ಸುಮಾರು ಹೊತ್ತಿನಿಂದ ಇವನನ್ನೇ ನೋಡುತಿದ್ದಾರೆ....

"ಅಬ್ಬಾ ಎಷ್ಟು ಚೆಂದ ಐದಾನ ಹುಡ್ಗ, ಕಣ್ಣ ಮ್ಯಾಗಳ ಗಿಲ್ಯಾಸಿನ್ಯಾಗ ಒಳ್ಯಾಡ
ಕಣಗುಡ್ಡಿ, ಮೂಗಿನ ಕೆಳಾಗಿನ್ ಮೀಸಿ, ಕೆನ್ನಿ ಮ್ಯಾಲಿನ್ ಕುರುಚ್ಲು ಗಡ್ಡ,
ನೋಡಾಕತ್ತಿ ಗಂಟಿ ಆತು. ಥಟೂಗಾರ ಅಲ್ಲ್ಯಾಡವಲ್ಲ ನನ ಜೋಕುಮಾರ, ಕೆನ್ನಿ ಕಚ್ಚಾಕ
ಮನಸಾಗ್ಯಾದ ಅಂದ್ರು ಕಚ್ಚಂಗಿಲ್ಲ, ಮುದ್ದಾಡಬೇಕು ಅನ್ನ ಮನಸಾಗಿದ್ರು
ಮುದ್ದಾಡಂಗಿಲ್ಲ, ಈ ಮುಪ್ಪು ಕಾಣದ್ ದೇಹಾನ ಆವ್ನಿಗೆ ಒಪ್ಸ್ಬೇಕು ಅನ್ನೊ ಆಸಿ ಇದ್ರು
ಒಪ್ಸಹಂಗಿಲ್ಲ, ಒಂದಾ ನೋಟಕ್ಕ ಪ್ರೀತಿ ಸುರುವಾಗದು ಅಂದ್ರ ಇದಾ ಇರ್ಬೇಕು. ಊರ ಮ್ಯಾಲ
ಊರು ಬಿದ್ರು ಯ್ಯಾರ ಮ್ಯಾಲ ಯ್ಯಾರ್ ಬಿದ್ರು ನಾನು ಮಾತ್ರ ಈ ಸುರ ಸುಂದರಾಂಗನ ಬಿಡಾಕ
ಮನಸು ಬರಾಕವಲ್ಲುದು, ದ್ಯಾವಲೋಕದ್ ದ್ಯಾವೇಂದ್ರ ಇದ್ದಂಗೈದಾನ, ಊರುನ್ಯಾಗ ಅದೆಷ್ಟು
ಸೂಳ್ಯಾರ್ ಕಣ್ ಬಿದ್ದಾದೋ ಏನೋ ನನ ರಾಜಕುಮಾರನ್ ಮ್ಯಾಲ" ಎಂದುಕೊಳ್ಳುತ್ತಲೇ ಲಟಿಕೆ
ಮುರಿಯುತ್ತಾ ದೃಷ್ಠಿ ತೆಗೆದಳು.

ಕೈಯ್ಯಲಿದ್ದ ಪೆನ್ನು ಜಾರಿ ಬಿತ್ತು ತಣ್ಣಗೆ ಗಾಳಿ ಬೀಸಿದರೂ ಮೈಯಲ್ಲಿ ಬೆವರು ಕಿತ್ತು
ಬರುತ್ತಿತ್ತು, ಯಾರೋ ತನ್ನನ್ನೇ ನೋಡುತ್ತಿರುವಂತೆಯೂ, ತನ್ನ ಬಗ್ಗೆ
ಮಾತನಾಡುತ್ತಿರುವಂತೆಯೂ, ಹತ್ತಿರವೇ ಇರುವಂತೆಯೂ ಅನ್ನಿಸಲು ಹೆಚ್ಚು ಹೊತ್ತು
ಹಿಡಿಯಲಿಲ್ಲ, ಇದ್ದಕ್ಕಿದ್ದಂತೆ ಬೀಸಿದ ಜೋರು ಗಾಳಿಗೆ ಮರದ ಒಣಗಿದೆಲೆಗಳು ಮೇಲೆ
ಬೀಳಬೇಕೆ ಇಷ್ಟು ಸಾಕಿತ್ತು ಎದೆಬಡಿತ ಹೆಚ್ಚಾಗಲು, ಧಡಕ್ಕನೆ ಎದ್ದು ನಿಂತ. "ಕುಂದ್ರು
ಹೆದುರ್ ಬ್ಯಾಡ, ನಾನು ಲಚುಮಿ ಅದಿನಿ, ಇಪ್ಪತ್ತು ವರ್ಸದ್ ಇಂದೆ ಇಲ್ಲೇ ಹೂಣಿದ್ರು,
ಆಸಿ ತೀರದ್ ಜೀವುಕ್ಕ ಸಾವಿಲ್ಲ ಅಂತಾರಲ್ಲ ಅದ್ಕ ಏನ ನನ ಸರೀರ ಮಣ್ಣಾದ್ರು ಈ ಹಾಳು
ಜೀವ ಮಣ್ಣಾಗವಲ್ಲುದು, ಯಾವ್ ಜಲುಮದಾಗ ಯ್ಯೋನ್  ಪಾಪ ಮಾಡಿದ್ನೋ ಯೋನೊ.... ಆ ಸೂಳ್ಯಾ
ಮಗ ಊರು ಗೌಡ ಅವ್ನ್ ಆಸಿ ತೀರ್ಸೊಳ್ಳಾಕಾ ನನಗ ಕೊಡಬಾರದ್ ಹಿಂಸಿ ಕೊಟ್ಟ, ನನ ಮನ್ಯಾಗ
ನನ್ನ ನೇಣಾಕಿ, ಆತ್ಮಹತ್ತಿ ಮಾಡ್ಕ್ಯಂಡಾಳ ಅಂತಾ ಸುದ್ದಿ ಹಬ್ಸಿದ್ರು.... ಬದುಕಾಕ
ಭಾಳ ಆಸಿ ಇಟ್ಕೊಂಡಿದ್ದೆ, ಮಕ್ಳು ಮರಿ ಗಂಡನ್ ಜೋಡಿ ಬಾಳ್ವಿ ಮಾಡ್ಬೇಕು ಅಂತಾ ಕನಸ್
ಕಂಡಿದ್ದೆ, ಮದುವಿಆದ ಯಾಲ್ಡ ವರಸಕ್ಕ ನನ ಗಂಡ ಅನ್ನಿಸ್ಕೊಂಡಾವ ದ್ಯಾವರ ಪಾದ ಸೇರ್ದ,
ಒಂಟಿ ಹೆಣ್ಮಗಳನ್ನ ಹ್ಯಾಂಗ್ ನೋಡ್ತಾರ , ಮಾತಿಗ್ ಮಾತ್ರ ತಂಗ್ಯವ್ವ ತಾಯವ್ವ ಅಂದು
ಉಬ್ಬಿದ್ ಎದಿ ನೋಡಿ ಜೊಲ್ಲು ಇಳ್ಸ ಮಂದಿ, ಕಷ್ಟದಾಗ ಕಣ್ಣೀರ್ ಹಾಕಕಾರ ಸಮಾಧಾನ ಮಾಡೋ
ನ್ಯವುದಾದ ಬುಜ ಸವುರಿ ಚಟ ತೀರ್ಸೊಳ ಮಂದಿ, ನಾನ್ ನಿಂಗ ಆಸರಾಯ್ತಿನಿ ಅಂದು ಮಂಚಕ್ಕ
ಕರಿಯೋ ಮಂದಿ ಥೂ ಅವ್ರ್ ಬಾಯಾಗ್ ಮಣ್ ಹಾಕ್ಲಿ, ಅವರ ಅವ್ವ ಅಕ್ಕಾ ತಂಗ್ಯಾರಲ್ಲ ಹೆಣ್
ಅನ್ನೋದ್ ಮರ್ತಾರೇನ.... ಬದುಕಾಕ ಆಕಾಸದಷ್ಟು ಆಸಿ ಇತ್ತೋ ನನಗ ಆಸಿ ಇತ್ತು, ಮಣ್ಣಾಗ
ಮುಚ್ಚಿಬಿಟ್ರು ನನ ಬಾಳ್ನ ನನ ಆಸಿನ,~~~" ಇಪ್ಪತ್ತು ವರ್ಷಗಳ ಅಷ್ಟೂ ನೋವನ್ನು
ಅವನೆದುರಿಗೆ ನಿರರ್ಗಳವಾಗಿ ಹೇಳಿಬಿಟ್ಟಳು.

ಸ್ವಲ್ಪ ಹೊತ್ತು ಅಲ್ಲಿ ಗಾಢ ಮೌನ ಆವರಿಸಿತು, ಬಿದ್ದ ಎಲೆಗಳು ಬಿದ್ದಂತೆಯೂ, ನಿಂತ
ಗಾಳಿ ನಿಂತಂತೆಯೂ, ಆಗಸದಲ್ಲಿದ್ದ ಚುಕ್ಕಿಗಳೆಲ್ಲಾ ಕಣ್ಣು ಮುಚ್ಚಿ ಅತ್ತಂತೆಯೂ.....

ಕಾರ್ಲ್ ಮಾರ್ಕ್ಸ್, ಚೇ ಗುವೆರಾ, ಲೋಹೀಯ ಮುಂತಾದ ಎಡಪಂಕ್ತೀಯರನ್ನು ಓದಿಕೊಂಡಿದ್ದ
ಈತನಿಗೆ ದೇವರು, ದೆವ್ವ, ಆತ್ಮ, ಭೂತಗಳ ಅಸ್ತಿತ್ವವೇ ಇಲ್ಲವೆಂಬ ಮನಸ್ಥಿತಿ
ಬಂದುಬಿಟ್ಟಿತ್ತು, ಆದರೆ ತಾನೀಗ ಮಾತನಾಡುತ್ತಿರುವುದು ಸಾಕ್ಷಾತ್ ಒಂದು ಹೆಣ್ಣು ಆತ್ಮ
ಲಚುಮಿಯ ಜೊತೆ, ಅದು ಕನಸೆಂದರೆ ಕನಸೂ ಅಲ್ಲ ಭ್ರಮೆಯೆಂದರೆ ಭ್ರಮೆಯೂ ಅಲ್ಲ,
ತನ್ನೆಲ್ಲಾ ಕಥೆಯನ್ನು, ಮನಸ್ಸಿನಲ್ಲಿ ಮಡುಗಟ್ಟಿದ್ದ ನೋವನ್ನು ಬಿಟ್ಟು ಬಿಡದಂತೆ
ತನ್ನ ಬಳಿ ಹೇಳುವುದೆಂದರೇನು ಸಾಮಾನ್ಯ ಮಾತೆ!!!  ಭಯದಿಂದ ಎದ್ದು ನಿಂತವನಿಗೆ ಅವಳ
ಕಥೆ ಕೇಳಿ ಮನಸ್ಸು ಭಾರವೆನಿಸಿತು ಒಂದು ಮಾತನ್ನೂ ಆಡದೇ ಅದೇ ಜಾಗಕ್ಕೆ ಕುಸಿದು
ಬಿಟ್ಟ.
"ಈಕೆಯನ್ನು ಮಾತನಾಡಿಸಿದರೆ ಒಳ್ಳೆಯ ಕಥೆಗಳು ಸಿಕ್ಕರೂ ಸಿಗಬಹುದು, ಒಂಟಿಯಾಗಿರುವ
ತನಗೂ ಮಾತನಾಡಲು ಯಾರಾದರೂ ಸಿಕ್ಕಂತಾಗುತ್ತದೆ. ಬಿಕೋ ಅನ್ನುತ್ತಿರುವ ಮನೆಯಲ್ಲಿ
ಇಬ್ಬರಿದ್ದಹಾಗಾಗುತ್ತದೆ  " ಎಂದು ಮನಸ್ಸಿನಲ್ಲೇ ಅಂದುಕೊಂಡು, ಒಣಗಿದ ಗಂಟಲಿಂದ
"ನನ್ನ ಜೊತೆ ಮನೆಗೆ ಬಂದು ಬಿಡು" ಹೇಳಿದ. "ನನ್ ಮಣ್ಣಾಗಿಟ್ ದಿನ, ಆ ಗೌಡನ್ ಜೀವ
ತೆಗಿಯಾಕ ಊರಾಕ್ ಹೊಂಟಿದ್ದೆ, ಊರಮ್ಮ್ ತಾಯಿ ಕ್ಯ್ವಾಣದ್ ರಗುತನ ಊರ್ ಸುತ್ತ
ಚೆಲ್ಲಾರಂತ, ಅಸ್ಥಿ ಇಲ್ದಿರಾ ಜೀವ ಊರಾಕ್ ಬರಂಗಿಲ್ಲಂತ.... ಅಷ್ಟ್ರಾಗ ಗೌಡ ಯ್ಯೋನೋ
ರೋಗ ಬಂದು ಸತ್ತ, ಇಲ್ಲ ಅಂದ್ರ ನನ ಕೈಯ್ಯಾಗ ಮಸಾಣ ಸೇರ್ತಿದ್ದ... ನಾನು ಊರಾಕ್
ಬರಾದಾದ್ರ ಯಾವ್ದಾದ್ರು ಅಸ್ಥಿಯೊಳಗ ಸೇರ್ಬೇಕು, ಇಲ್ಲ ಅಂದ್ರ ಒಂದ್ ಹೆಜ್ಜಿ ಕೂಡ ಒಳಗ
ಇಡಂಗಿಲ್ಲ" ಗಾಳಿಯಲ್ಲಿ ಸುತ್ತುತ್ತಾ ಹೇಳಿದಳು. ದೆವ್ವ ಭೂತ ಪ್ರೇತಗಳನ್ನು ಎಂದೂ
ಕಂಡಿರದ ಈತ ಒಂದು ಕ್ಷಣ ಯೋಚಿಸಿ ತನ್ನ ದೇಹವನ್ನೊಮ್ಮೆ ನೋಡಿಕೊಂಡು, ಹಣೆಯ ಮೇಲೆ
ಒಂದಷ್ಟು ಗೆರೆಗಳನ್ನು ತಂದುಕೊಂಡು "ಬೇಕಾದರೆ ನನ್ನ ದೇಹದ ಒಳಗೇ ಸೇರಿಕೋ, ನನಗೂ
ಒಳ್ಳೆ ಅನುಭವ ಸಿಕ್ಕೀತು". "ಅತ್ಲಾಗ ಸ್ವರ್ಗನೂ ಇಲ್ಲ, ಇತ್ಲಾಗ ನರ್ಕಾನು ಇಲ್ಲ,
ಪ್ರೇತದ್ದಾಂಗ ತಿಗುಗ್ಯಾಡೋ ನನಗ ಮುಕ್ತಿ ಕೊಡಪ್ಪ ದ್ಯಾವ್ರೆ ಅಂತಾ ಕ್ಯೇಳ್ತಿದ್ದೆ,
ಆದ್ರ ನಿನ್ನ ನೋಡ್ಯ್ದಾಗಿಂದ ಮತ್ತೆ ಬದುಕಾಕ ಆಸಿ ಹುಟ್ಯಾತಿ, ಮತ್ತೆ ನನ ಹೊಟ್ಟ್ಯಾಗ
ಒಂದ ಕೂಸಿನ್ ಕನಸು ಹುಟ್ಯಾತಿ, ಗಂಡನ್ ಕಳ್ಕೊಂಡ್ ರಂಡಿ ಅಂತಾ ಬಳಿ ಒಡ್ದಿದ್ರು, ಹಣಿ
ಮ್ಯಾಲಿನ್ ಕುಂಕುಮ ಅಳ್ಸಿದ್ರು ಆಸೌಭಾಗ್ಯ ನಂಗೇನ್ ಬ್ಯಾಡ, ಎಲ್ಲಾ ಗರತೀರಂಗ ಬಾಳ್ವಿ
ಮಾಡ್ಬೇಕನ್ನ ಆಸಿ ಹುಟ್ಯಾತಿ.... ಪ್ರತಿ ಹುಣುಮ್ಯಾಗ ಚಂದ್ರನ್ ನೋಡಿ ಮೈಯೆಲ್ಲಾ
ಕಾವೇರ್ತಿತ್ತು, ದೇಹ ಇಲ್ದಾಕಿ ಇನ್ನೇನ್ ಮಾಡ್ಯಾನು, ನಿನ್ನ ನೋಡಿದ್ ಮ್ಯಾಲ ನನಗ
ಮತ್ತ ಬಾಳ್ಯೇವು ಮಾಡ್ಬೇಕಂತ ಅನ್ಸಕತ್ತ್ಯಾತಿ. ನಿನ ಮೈಯಾಗ ಸೇರಾಕ್ ವಲ್ಲ್ಯ
ಅಂತೀನೇನು, ಆದರ ಒಂದಾ ಅಸ್ಥ್ಯಾಗ ಯಾಲ್ಡು ಆತುಮುಗಳು ಅಂದ್ರ ಸಾದ್ಯ ಇಲ್ಲದ್ ಮಾತು"
ಎಂದು ಮಿಂಚುತಿದ್ದ ಕೇಶರಾಶಿಯನ್ನು ಗಾಳಿಯಲ್ಲಿ ಹಾರಿ ಬಿಡುತ್ತಾ, ಜಾರುತಿದ್ದ
ಸೆರಗನ್ನು ಮತ್ತೆ ಸೊಂಟಕ್ಕೆ ಸಿಕ್ಕಿಸಿಕೊಂಡು ಹೇಳಿದಳು, ಪ್ರೇತವಾದರೂ ಅವಳ
ಸೌಂದರ್ಯಕ್ಕೆ ಈತನ ಮನಸ್ಸು ಒಂದು ಕಡೆ ವಾಲಿ ಬಿಟ್ಟಿತ್ತು "ಏನಾದರೂ ಆಗಲಿ ನನ್ನ
ದೇಹದೊಳಗೆ ಸೇರಿಬಿಡು,  ಮನುಷ್ಯಾತ್ಮ ಪ್ರೇತಾತ್ಮಗಳ ಸಮ್ಮಿಲಕ್ಕೆ ನನ್ನ ದೇಹ
ಸಾಕ್ಷಿಯಾಗಲಿ" ಅವಳಿಗೆ ಈತನ ಸಾಹಿತ್ಯ ಭಾಷೆ ಅರ್ಥವಾಗದಿದ್ದರೂ ಆಸೆಗಳನ್ನೆಲ್ಲಾ
ಒಗ್ಗೂಡಿಸಿ ಎದೆಯಲ್ಲಿರಿಸಿಕೊಂಡು ಒಂದೇ ಬಾರಿಗೆ ದೇಹ ಸೇರಲು ಅಡಿ ಇಡುತ್ತಾಳೆ. ಕಾಳ
ರಾತ್ರಿಯಲ್ಲಿ ಎಲ್ಲಿಂದಲೋ ನರಿಗಳು ಊಳಿದುವ ಸದ್ದು ಅಪ್ಪಳಿಸುತ್ತದೆ. ಒಂದೇ ದೇಹವನ್ನು
ಎರಡು ಆತ್ಮಗಳು ಆಕ್ರಮಿಸಿಕೊಳ್ಳುವುದಂದರೇನು, ಅಲ್ಲೇ ಇದ್ದುಕೊಂಡು ವಾಸ
ಮಾಡುವುದೆಂದರೇನು, ಹೆಣ್ಣು ಪ್ರೇತವೊಂದು ಗಂಡು ದೇಹವನ್ನೊಕ್ಕಿ ಅದರಾತ್ಮದೊಂದಿಗೆ
ಮಿಲನಗೊಳ್ಳುವುದೆಂದರೇನು...

ಲಚುಮಿ ಬಾಯೊಳಗಿಂದ ದೇಹ ಸೇರುವ ಹೊತ್ತಿಗೆ ಹಣೆಯಿಂದ ಬೆವರು ಹರಿಯತೊಡಗುತ್ತದೆ,
ಕಣ್ಣುಗುಡ್ದೆಗಳ  ಕಿತ್ತಂತೆನಿಸುತ್ತದೆ, ಎದೆಯ ಮೇಲಿನ ರೋಮಗಳ ಯಾರೋ ಎಳೆದಂತನಿಸುತದೆ.
ಇದ್ದಕ್ಕಿದ್ದಂತೆ ಪೆನ್ನು ಪೇಪರ್ರುಗಳ ಬಿಸಾಡಿ ನೆಲಕ್ಕೆ ಬಿದ್ದು ಮಣ್ಣಲ್ಲಿ
ಹೊರಳಾಡುತ್ತಾನೆ, ಕಲ್ಲುಗಳಿಗೆ ತೆರವಿ ರಕ್ತವೂ ಸುರಿಯುತ್ತದೆ. ಸ್ವಲ್ಪ ಸಮಯದ ನಂತರ
ಸುಧಾರಿಸಿಕೊಂಡು ತಲೆ ಕೊಡವುತ್ತಾ ಗಾಡಿ ಹತ್ತಿ ಹೊರಡುತ್ತಾನೆ. ಸೀಟಿನ ಮೇಲೆ
ಕೂರಲಾದಷ್ಟು ಸಂಕಟ, ಕೈಗಳೆಲ್ಲಾ ಪೂರ್ತಿಯಾಗಿ ಒದ್ದೆ, ನಡುಗುತಿದ್ದ ಕಾಲುಗಳು ಗಾಡಿ
ತಡವರಿಸುತ್ತದೆ....

ಊಟ ಮುಗಿಸಿ ಮತ್ತೆ ಬರೆಯಲಿಕ್ಕೆ ಶುರು ಮಾಡಿದ್ದ, ಕಣ್ಣಿಗೆ ರಾಚುವಷ್ಟು ಬೆಳಕ ಹೊತ್ತು
ಎದುರಿಗೆ ಕೂತಿದ್ದಾಳೆ, "ಅಬ್ಬಾ! ಏನೋ ಮಾತ್ರಿಕತೆ, ಹೆಣ್ಣು ಮನಸ್ಸನ್ನು ಇಷ್ಟೊಂದು
ಹಾಳು ಮಾಡುತ್ತಾಳೆ ಎಂದರೆ, ಅದರಲ್ಲೂ ಒಂದು ಪ್ರೇತಾತ್ಮ, ಏಕಾಂತವನ್ನ ಹೆಚ್ಚು
ಬಯಸುತ್ತಿದ್ದ ನಾನು ನನ್ನ ಮನಸ್ಸು ಅಪರಿಚಿತ ಆತ್ಮದೆದುರು ಸೋಲುವುದೆಂದರೇನು! ಸೋತು
ಮೋಹಿಸುವುದೆಂದರೇನು, ಸರಿಯಾಗಿ ನಿದ್ದೆ ಮಾಡುವುದಿರಲಿ ಕನಸುಗಳನ್ನೂ ಕಾಣದಂತಿದ್ದ
ನನ್ನನ್ನು ಕನವರಿಸುವಂತೆ ಮಾಡಿದ್ದು ಈಕೆಯೇ!" ಮನಸ್ಸಿನಲ್ಲೇ ಎಲ್ಲವನ್ನೂ
ಮಾತನಾಡಿಕೊಂಡ, "ಅಯ್ಯೋ ನನ್ ರಾಜ್ಕುಮಾರ ಏನ್ ಯ್ಯೋಚ್ನಿ ಮಾಡ್ತಿದಿ, ಕೈ ಯಾಕ
ನಡುಕ್ತವ? ಸಳಿ ಜರ ಏನಾರ ಬಂದಾತೇನು?, ಅದ್ಯಾಕ ಅಂತ ತಿಳಿವಲ್ಲುದು ನಿನ ಭಾಳ
ಮುದ್ದಾಡೊ ಆಸಿ ಆಗ್ಯಾದ, ಆದ್ರ ಏನ್ ಮಾಡ್ಲಿ ದ್ಯಾವರು ಮೆಚ್ಚಲ್ಲ, ಅಸ್ಥಿ ಇಲ್ದಿರಾ
ನಾನು ನಿನ್ನ ಪಿರೂತಿ ಮಾಡೋದಂದ್ರ ಏನು, ನಿನ ಜೋಡಿ ಬಾಳ್ವಿ ಮಾಡೋದಂದ್ರ ಏನು, ಒಂದಾ
ಸಾರಿ ನಿನ್ ನೋಡಿ ಭಾಳ ಒಳ್ಳೇವದಿ ಅಂತ ಅನ್ನಿಸ್ತು ಅದ್ಯಾಕ ಗೊತ್ತಿಲ್ಲ" ಒಳಗಿದ್ದ
ಮಾತುಗಳೆಲ್ಲಾ ನಾಲಿಗೆಯು ಹೊರದೂಡಿಬಿಡುತಿತ್ತು, ಅವಳನ್ನೇ ನೋಡುತ್ತಾ ಇವನು, ಇವನನ್ನು
ನೋಡುತ್ತಾ ಅವಳು..... ಮಾತುಕತೆಗಳು ಅನವರತವಾಗಿ ರಾತ್ರಿ ಕರಗುವವರೆಗೂ ನಡೆಯುತ್ತಲೇ
ಇತ್ತು, ನಿದ್ದೆ ಆವಾಹಿಸುತ್ತಲೇ ತೊಡೆಯಮೇಲೆ ತಲೆಯಿಟ್ಟು ಮಲಗಿದಂತೆಯೂ.......

"ಹಗಲ್ಯಾಕೆ ಇಷ್ಟೊಂದು ನಿಧಾನವಾಗಿ ಹೆಜ್ಜೆಹಾಕುತ್ತಿದೆ ಆಮೆಯಂತೆ, ಸೂರ್ಯ ನೆತ್ತಿಯ
ಮೇಲೆ ಕೂತವನು ಇಳಿಯುತ್ತಲೇ ಇಲ್ಲ, ಇಳಿಯುತ್ತಿರುವ ಬೆವರಿನ ಜೊತೆ ಕಾಯುತ್ತಲೇ
ಇದ್ದೇನೆ ರಾತ್ರಿಗೆ, ಮೊನ್ನೆ ಮೊನ್ನೆಯಷ್ಟೇ ಮಿಂಚಿನಂತೆ  ಓಡುತಿತ್ತು ಇಂದೇನಾಯ್ತು?
ಥೂ ಯಾವತ್ತೂ ಹೀಗಾಗಿರಲಿಲ್ಲ, ನಾನು ಏನನ್ನೂ ಕಾಯ್ದವನಲ್ಲ, ಯಾರನ್ನೂ ಎದುರು
ನೋಡಿದವನಲ್ಲ ಇವತ್ತೇಕೆ ಹುಳು ಹಿಡಿದವನಂತೆ ಆಡುತ್ತಿದ್ದೇನೆ, ಕಾಲಲ್ಲಿ
ನಾಯಿಗೆರೆಗಳಿದ್ದವರಂರೆ ಓಡಾಡುತ್ತಿದ್ದೇನೆ..." ಮನೆಯನ್ನೆಲ್ಲಾ ಸುತ್ತುತ್ತಾ
ಗೊಣಗುತಿದ್ದಾನೆ, ಇದ್ದಕ್ಕಿದ್ದಂತೆ...
 "ಹಾಲಕ್ಕಿ ನುಡಿತೈತೆ ಹಾಲಕ್ಕಿ ನುಡಿತೈತಿ,
 ಮಣ್ಣಿಂದ ಚಿನ್ನ ಮ್ಯಾಲಕ್ಕೆದ್ದೈತಿ,
ಹಗಲಾಗ ಮಣ್ಣು ,ರಾತ್ರ್ಯಾಗ ಬೆಳಕಿನ್ ಕಣ್ಣು
ಬದುಕಲಿಕ್ಕ ದ್ಯಾವರು ಮತ್ತೆ ಜೀವ ಕೊಟ್ಟಾನ
ಹಗಲಾಗ ಬದುಕೋರು ಮಣ್ಣಾಗ್ಯರ
ಮಣ್ಣಾಗಿನ ಜೀವಾನ ರಾತ್ರಿ ಬದುಕಾಕ ಬಿಟ್ಟಾನ,
ನಿನ ಬ್ಯಾಸರ ತೀರಸಾಕ ಬಂದಾಕಿನ
ಎದ್ಯಾಗಿಟುಕೊಂಡು ಜ್ಯಾಪಾನ ಮಾಡಬೇಕು,
ಇಲ್ಲ ಕತ್ಲಾಗ ಕರಗಿ ಹೋಗುತೈತಿ,
ಹಾಲಕ್ಕಿ ನುಡಿದೈತಿ ಹಾಲಕ್ಕಿ ನುಡಿದೈತಿ"
ಶಕುನದವ ಬಿಟ್ಟೂ ಬಿಡದಂತೆ ಬಾಗಿಲಲ್ಲಿ ನಿಂತು ಹೇಳಿಬಿಟ್ಟ, ಇಷ್ಟು ದಿನಗಳಲ್ಲಿ
ಇವತ್ತೆ ತನ್ನ ಬಗ್ಗೆ ಶಕುನದವ ಹೇಳಿದ್ದನ್ನು ಕೇಳಿ ದಂಗಾಗಿಬಿಟ್ಟ, ಜೇಬಲ್ಲಿಂದ ಐದು
ರೂಪಾಯಿಯ ನೋಟನ್ನು ಕೊಡಲು ಮುಂದಾದಾಗ "ನಿಮ್ಮ ಉಟ್ಟು ಬಿಟ್ಟ ಬಟ್ಟಿ ಯಾವುದೇ ಆಗ್ಲಿ
ಕೊಟ್ರ ಸಾಕ್ರಿ"  ಎಂದು ಮಂದ ನಗುವಿನಲ್ಲೇ ಹೇಳಿದ...... ಹೀಗೆ ನಾಲ್ಕೈದು ರಾತ್ರಿಗಳು
ಸಾಗುತ್ತವೆ, ಯಾವಗಲೂ ಕಾಣದಿದ್ದ ಉತ್ಸಾಹ ಸಿಕ್ಕಿದಂತೆ ಭಾಸವಾಗುತ್ತದೆ
**************
ಸಂಜೆಯಿಂದ ಊರಮ್ಮನ ಜಾತ್ರೆ ಗಲಾಟೆಯೋ ಗಲಾಟೆ, ದೇವಸ್ಥಾನಕ್ಕೆ ಸಂಬಂಧಿಸಿದಂತೆ
ವೆಂಕಟೇಸಿಗೂ ಅವನ ತಮ್ಮ ಮೈಲಾರಪ್ಪನಿಗೂ ಹೊಡೆದಾಟ, . "ಇವತ್ತು ಯಾಕೊ ತುಂಬಾ
ಲೇಟಾಯ್ತು ಇನ್ನೂ ಕಾಣಲೇ ಇಲ್ಲ" ಈಗ ಕಂಡಾಳು ಆಗ ಕಂಡಾಳು ಎಂದು ಬೆರಳು ಮುರಿಯುತ್ತಾ
ಕಾಯುತ್ತಾ ಕೂತಿದ್ದವನಿಗೆ ಸಮಾಧಾನವೇ ಆಗುತ್ತಿಲ್ಲ ಸ್ಮಶಾನಕ್ಕೆ ಹೋಗಿ ನೋಡಿದರೆ
ಹೇಗೆ!!.... ಅದೇ ಕತ್ತಲು ಮಿಶ್ರಿತ ಬೆಳಕಿನಲ್ಲಿ ಆಕೆಗಾಗಿ ಲಚುಮಿ ಲಚುಮಿ ಕೂಗುತ್ತಾ
ತಡಕಾಡಿದ ಪ್ರತ್ಯುತ್ತರ ಬರಲೇ ಇಲ್ಲ, ಏನಾಗಿರಬಹುದು "ನನ್ನ ಮನೆಯಲ್ಲಿ
ಲಚುಮಿಯಿದ್ದಾಳೆಂದು ಯಾರಿಗಾದರೂ ತಿಳಿದು ಹೋಯಿತೇ, ಆಕೆ ನನ್ನ ಮೇಲೆ ಸಿಡುಕುಕೊಂಡಳೇ,
ನನ್ನ ಪ್ರೀತಿಯಲ್ಲಿ ಏನಾದರು ಕೊರತೆ ಕಂಡಿತೇ.... ಒಂಟಿಯಾಗಿದ್ದವನ ಜೊತೆಯಾಗಿ ಈಗ
ಮತ್ತೆ ಒಂಟಿ ಮಾಡಿ ಹೋದಳಲ್ಲ, ಮನಸ್ಸನ್ನು ಮತ್ತೆ ಭಾರ ಮಾಡಿ ಹೋದಳಲ್ಲ" ಎಂದು
ಬೇಸರಗೊಳ್ಳುತ್ತಲೇ, ಅಲ್ಲೇ ಇದ್ದ ಕಲ್ಲಿನ ಮೇಲೆ ಕೂತು ಆಕೆಗೆ ಸುತ್ತಲೂ ಕಣ್ಣು
ಹಾಯಿಸುತ್ತಾ ಸಿಗರೇಟು ಹಚ್ಚುತ್ತಾನೆ, ಕಾಯುತ್ತಾನೆ.............

-ಪ್ರವರ ಕೊಟ್ಟೂರು

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ