ನಮ್ಮ ಭಾರತದಲ್ಲಿ ಹೆಣ್ಣು ಸೆಕ್ಸ್ ಟಾಯ್ ಆಗಿ ಹೋಗಿದ್ದಾಳೆ


ಇಂಡಿಯಾದ ಜನಗಳೇ
ಎದೆಯನ್ನು ಕಲ್ಲು ಮಾಡಿಕೊಳ್ಳಿ,
ಭಾರತವನ್ನು ತೋರಿಸಲಿದ್ದೇನೆ
ಅಸಲಿ, ಭಾರತವನ್ನು ತೋರಿಸಲಿದ್ದೇನೆ.

ಹೆಣ್ಣು ಹುಟ್ಟಿದರೆ
ಮನೆಯಲ್ಲಿ ಸೂತಕ ಕಟ್ಟಿಕೊಳ್ಳುತ್ತದೆಯಂತೆ
ಮೂಲೆ ಮೂಲೆಯಲ್ಲಿನ ಗಾಢ ಜೇಡದಂತೆ,
ಹಸಿ ಬಾಣಂತಿಯ ಮೂತಿಗೆ
ನಾಲ್ಕು ತಿವಿಯದೆಲೆ ಸೂತಕ
ಕಳೆಯುವುದಿಲ್ಲ,

ಹೆಣ್ಣು ಮಗು ಬೆಳೆದು
ಋತುಮತಿಯಾಗುವಂತಿಲ್ಲ,
"ಎಲ್ಲಿಗೇ ಹೋಗಿ ಸಾಯುತ್ತಿ, ಮನೆಯಲ್ಲೇ ಇರು,
ದೇವರು ನಮಗೊಳ್ಳೆ ಶನಿ ಗಂಟು ಹಾಕಿದ"
ಕನ್ನಡಿಯಲ್ಲಿ ನೋಡಿಕೊಳ್ಳುವಂತಿಲ್ಲ
ಮತ್ತದೇ ಬೈಗಳು,
ಕತ್ತಲ ಕೋಣೆಯಲ್ಲಿಯೇ ಗೃಹಬಂಧನ,
ಜೋರಾಗಿ ಅಳುವಂತಿಲ್ಲ
ರಕ್ತಸ್ರಾವಕ್ಕೆ ತಿಂಗಳಿನ ಮೂರ್ನಾಲ್ಕುದಿನ
ಅಸ್ಪೃಶ್ಯಳು,
ಆಕೆ ಮುಟ್ಟಿದರೆ ಮೈಲಿಗೆಯಾಗುತ್ತದೆಯಂತೆ,

ದೇವರ ಮನೆಯನ್ನೋಮ್ಮೆ ಹೊಕ್ಕಿ ನೋಡಿ
ಹೂವಿನಾಲಂಕಾರದ
ಹೆಣ್ಣು ದೇವರುಗಳೇ ಕಾಣಿಸುತ್ತವೆ
ಧೂಪದ ನಡುವೆ.

ಇನ್ನೂ ಏನೋ ಹೇಳಲು ಮರೆತೆ
ಇಂಡಿಯಾದ ಜನಗಳೇ
ಕಲ್ಲೆದೆ ಕರಗಿದರೂ ಕರಗಬಹುದು
ಇತ್ತ ಅಳುಕದೇ ಕೇಳಿ

ನಮ್ಮ ಭಾರತದಲ್ಲಿ
ಹೆಣ್ಣು ಸೆಕ್ಸ್ ಟಾಯ್ ಥರ ಆಗಿ ಹೋಗಿದ್ದಾಳೆ,
ರೇಪು ಮಾಡಿದವರು ಮೂರೆ ದಿನಗಳಲ್ಲಿ
ರೊಕ್ಕ ಕೊಟ್ಟು ಹೊರ ಬರಬಹುದು,
ಅವಳ ಸಾವುಗಳನ್ನು ಯಾರೂ ಲೆಕ್ಕಹಾಕುವುದಿಲ್ಲ,
ಯಾಕೆ ಎನ್ನುತ್ತೀರ?
ಶತ ಶತಮಾನಗಳಿಂದಲೂ
ನಮ್ಮ ಅಸಲಿ ಭಾರತ ಇರುವುದು
ಹೀಗೆ ಅಲ್ಲವೆ,

ಬೇಕಾದರೆ ನ್ಯೂಸುಗಳಲ್ಲಿ
ಲೈವು ನೋಡಬಹುದು,
ನಮ್ಮ ಜನಗಳು ತುಂಬಾ ಒಳ್ಳೆಯವರು
ಸುಮ್ಮನೇ ನೋಡುತ್ತಾರೆ,
ಯಾಕೆಂದರೆ ಆ ಹುಡುಗಿ
ನಮ್ಮ ಮನೆಯವಳಲ್ಲವಲ್ಲ!!!
ನಮಗ್ಯಾಕೆ ಬೇಕು,
ಪೋಲಿಸರಿದ್ದಾರೆ, ಅವರೆಲ್ಲಾ ನೋಡಿಕೊಳ್ಳುತ್ತಾರೆ.

ಹೆಣ್ಣು ಬೆತ್ತಲೆಯಾಗಿ ಬದುಕಲು ಓಡಿದರೆ
ಜೊಲ್ಲಿಳಿಸಿಕೊಂಡು ನೋಡುವ
ಜಾಯಮಾನದ ಜನ,
ಭಾರತದ ಜನ...

ಅಯ್ಯೋ ಅಳಬೇಡಿ
ಇಂಡಿಯಾದ ಜನಗಳೇ,
ನಮ್ಮ ಭಾರತದ ಜನಕ್ಕೆ ಇದೆಲ್ಲಾ ಕಾಮನ್,
ಬಿಡಿ ನಾವಿದರ ನಡುವೆ ಹೇಗೊ
ಅಡ್ಜೆಸ್ಟ್ ಮಾಡಿಕೊಂಡು ಬದುಕುತಿದ್ದೇವೆ

-ಪ್ರವರ ಕೊಟ್ಟೂರು

Comments

Popular posts from this blog

ಬಿಕ್ಷುಕ ಬಾಲೆ

ಸಂಜೆ ಹೊತ್ತು ನೆನಪಾದವರು:(

ಪ್ರೇಮಿಯ ಶಾಯರಿಗಳು