ಒಂದು ರೋಡಿನ ಕಥೆಯಿದು
ಮಟ ಮಟ ಮದ್ಯಾನ್ಹ , ಟಾರು ರೋಡಿಗೇನು ಬಿಸಿಲ ಝಳ ಅಂಟೀತೆ ? ಅದೆಷ್ಟಾದರೂ ಬರೆ ಇಟ್ಟುಕೋ , ತೃಪ್ತಿಯಾಗುವಷ್ಟು ಸುಟ್ಟುಕೋ ಎಂದು ಬಟ್ಟೆ ಕಳಚಿ ಮಲಗಿದೆ , ಹೈ ಹೀಲ್ಡ್ಸ್ ಚಪ್ಪಲಿ , ಬೂಟು ಹಾಕಿದವರ ತುಳಿತ ಬೇರೆ , ಕ್ಯಾಕರಿಸಿ ಉಗಿದವರು ಅದೆಷ್ಟು ಜನರೋ ಏನೋ , ಈ ಶಹರದ ಏಳ್ಗೆ ಕಂಡವರಲ್ಲಿ ಉಳಿದದ್ದು ಮಾತ್ರ ಈ ಟಾರು ರೋಡು , ಮಿಕ್ಕವರು ಜಪ್ಪಯ್ಯ ಎಂದರೂ ಏಳುತ್ತಿಲ್ಲ . ಬಿಡಿ ಈಗಲಾದರೂ ಒಳ್ಳೆಯ ನಿದ್ದೆ ಹೊಟ್ಟೆಡುಮ್ಮ ರಾಜನೂ ರಾಣಿಯರೂ ಅವರೊಂದಿಗಿನ ಮಾಣಿಗಳು , ಕುದುರೆ ಸಾರೋಟುಗಳು , ಮುಕ್ಕಾದ ಕೋಟೆಗಳು ಬಣ್ಣ ಮಾಸಿದ ಅರಮನೆ ನೋಡಿ ನೋಡಿ ತಿಕ್ಕಲು ತಿರುಗಿ ಹೋಗಿದೆ , ಯುದ್ದವಾದಾಗ ಕೊನೆಗೆ ಇದೇ ಜಾಗದಲ್ಲಿ ರಕ್ತ ಮೆತ್ತಿಕೊಂಡ ನೆನಪು , ನೆನೆಸಿಕೊಂಡರೆ ಕೆಮ್ಮು ಅಡರುತ್ತದೆ , ಮೊಂಡುಗತ್ತಿಗಳಿನ್ನೂ ಮ್ಯೂಸಿಯಂನಲ್ಲಿವೆ ಐದು ರೂಪಾಯಿಯ ಟಿಕೇಟ್!!! ನೋಡಿಕೊಂಡು ಬನ್ನಿ , ಆಗ ಇದೊಂದು ಕಚ್ಚಾ ರಸ್ತೆ ಹೆಸರನ್ನು ಯಾರೂ ಉಲ್ಲೇಖಿಸಲೇ ಇಲ್ಲ ಇತಿಹಾಸಗಳಲ್ಲಿ , ಬಿಡಿ ಹಾಳಾಗಿ ಹೋಗಲಿ , ಅದೆಷ್ಟೋ ವರ್ಷಗಳ ಮಾತು , ಗುಲ್-ಮೊಹರ್ ಮರದ ಸಾಲುಗಳಡಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಪ್ರೇಮಿಗಳಿಗೆ ಈ ರಸ್ತೆ ಸ್ವರ್ಗ , ಮಾಗಿಯ ಚಳಿ ಶುರುವಾಗಿ ಹೂಗಳುದುರುತಿದ್ದರೆ ಥೇಟ್ ಮದುವಣಗಿತ್ತಿಯ ಲುಕ್ಕು , ಅದೊಂದು ಕಾಲ ಬಿಡಿ ಇಂದು ವಯಸ್ಸಾಗಿದೆ ವಾಕಿಂ...