ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, April 8, 2013

ಹಸಿವು ಎಂದರೆ ಬೂಟು ನೆಕ್ಕಲು ಹೇಳುತ್ತಾರೆ!!!

ಹಸಿವು ಹೆಗಲೇರಿ
ಬಿಕ್ಕಿ ಅಳುತಿದ್ದರೆ ಬೂಟುಗಾಲು
ತೋರಿಸಿ ನೆಕ್ಕಲು ಹೇಳಿದರು,
ಕಣ್ಣೀರು ಬೂಟು ತಾಕಿದರೆ
ಪಿಸ್ತೂಲು ಹಣೆಗೆ,
ಜೇಡಕ್ಕೆ ಹೆಣೆದುಕೊಂಡಂತಿರಲಿ
ರೆಪ್ಪೆಗಂಟಿದ ನೋವುಗಳು.

ಬಿಲ್ಡಿಂಗುಗಳಡಿಯಲ್ಲಿ ಮೈಮುರಿದು
ಬಿದ್ದಿರಬೇಕು;
ಮುಖವರಳಿಸಿ ನಕ್ಕರೆ
ತುಪುಕ್ಕೆಂದು ಉಗಿದಾರು;
ತೊಟ್ಟ ಬಟ್ಟೆಯಲ್ಲೇ ಒರೆಸಿಕೊಳ್ಳುವ
ಮುಗ್ಧತೆ ಬೆನ್ನಿಗೆ,

ಹಸಿವಿಗೆ ಅಂಗಲಾಚಿ
ಕಕ್ಕಸ ಗುಂಡಿಗೆ ಕೈ ಮುಗಿದು
ನೆಗೆದರೂ ತುತ್ತು ಅನ್ನ ಗಂಟಲು ಸೇರಲಿಲ್ಲ,
ಉಸಿರು ಕೈಹಿಡಿಯದೇ ಬಿದ್ದ ಶವದ
ಅನಾಥ ಸಾವಿಗೆ
ಅಯ್ಯೋ ಎನ್ನುವವರಿಲ್ಲ;
ಮೂಗು ಮುಚ್ಚಿಕೊಂಡು
ಥೂ ಎಂದವರೇ ಹೆಚ್ಚು
ಬಿಳಿಯಂಗಿ ತೊಟ್ಟ ಜನ;
ಹೊಟ್ಟೆ ಬಿರಿತ ಜನ,

ಕೂಗಲಿನ್ನೆಲ್ಲಿಯ ದನಿ,
ಹೊಟ್ಟೆಯಲ್ಲಿ ಇದ್ದರೇ ತಾನೆ
ಒಂದು ಹಿಡಿ ಕೂಳು,
ಹೆಂಡತಿ ಮಕ್ಕಳ ಬಿಕರಿಗಿಟ್ಟೂ
ಬೊಗಸೆ ಚಾಚಿದರು,
ಕೊನೆಗೆ ಅನ್ನದ ಬದಲು
ತುಂಬಿದ್ದು ಉಗುಳು;
ಅವರಾರು ಕಾಣುತಿಲ್ಲವೆಂದು
ಕೂಲಿಂಗ್ ಗ್ಲಾಸು ಹಾಕಿಕೊಂಡರು,

ವೈಭೋಗದ ಮನೆಯಲ್ಲಿ
ಅಕ್ಷತೆಯಾದ ಅಕ್ಕಿ
ಸೆಂಟು ವಾಸನೆಯ ಜನಗಳ
ಚಪ್ಪಲಿಯಡಿಯಾಳಾಯ್ತೇ ಹೊರತು
ಹಸಿದು ನಿಂತವರ ಹೊಟ್ಟೆಗೆ
ತುತ್ತು ಕೂಳಾಗಲಿಲ್ಲ

-ಪ್ರವರ

1 comment:

  1. ವಾಸ್ತವದ ಚಿತ್ರಣ ನಿಮ್ಮ ಲೇಖನಿಯಲ್ಲಿ ಕಟುವಾಗಿ ಅರಳುವ, ಕೆಣಕುವ, ಕುಟುಕುವ ಪರಿಗೇ ನಾನು ಬೆರಗಾಗುತ್ತೇನೆ..
    ಎಂದಿನಂತೆ ಒಂದು ಮಸ್ತ್ ಕವನ..

    ReplyDelete

ಅನ್ಸಿದ್ ಬರೀರಿ