ಕೆಂಪು ಕೂಗು

ಮೈಮೇಲೆಲ್ಲಾ ಹಚ್ಚೆ ಹೊಯ್ಯಿಸಿಕೊಂಡ
ಗೋಡೆಗಳಲ್ಲಿ ಶತಮಾನಗಳಷ್ಟು
ನೋವಿದೆ, ಕೂಗಿದೆ, ಆರದ ಗಾಯಗಳಿವೆ,
ಕಣ್ಣುಗಳಿಗೆ ಕಂಡಿದ್ದು ಮಾತ್ರ ಕೆಂಪು ಬಣ್ಣದ ದಿಕ್ಕಾರ
ದಿಕ್ಕಾರ ರಕುತದ್ದು;

ಹಿಡಿದ ಬೋರ್ಡು ಸ್ಲೋಗನ್ನುಗಳಿಗೆ
ಕಿಂಚಿತ್ತು ಬೆಲೆ ಇಲ್ಲ,
ಬಿಸಿ ಹೆಂಚಿನ ದಾರಿಯಲ್ಲಿ
ನಡೆದ ಕಾಲುಗಳಿಗೆ ಸಿಕ್ಕದ್ದು ಬರೆ ಮಾತ್ರ,
ಅಳದಿದ್ದರೂ ಕಣ್ಣುಗಳಲ್ಲಿ
ಹತಾಶ ಮೌನವಿಲ್ಲ,
ಎದೆಯೊಳಗಿನ ಬೆಂಕಿಗೆ ಹತ್ತಿ ಉರಿದದ್ದು
ಬಸ್ಸಿನ ಟಯರ್ರುಗಳು, ಮಡಕೆ ತಲೆಯಿದ್ದ ಪ್ರತಿಕೃತಿ,

ದನಿ ಏರಿದರೆ ಪೊಲೀಸರ ಬೂಟುಗಾಲಿನೊದೆ,
ಲಾಠಿಚಾರ್ಜ್;
ನೆಲಕ್ಕೆ ಬಿದ್ದರೂ ಪ್ರತಿಭಟನೆಯ ಸಣ್ಣಗಿನ ಕೂಗು
ಮಾರ್ದನಿಸದೇ ಹೋಯ್ತು.
ಚಲ್ಲಾಪಿಲ್ಲಿ ದಿಕ್ಕುಗಳು,

ನಮ್ಮ ಹಕ್ಕುಗಳ ನಮಗೆ ಕೊಡಿ
ಎನ್ನುವಾಗ ಹಣೆಗೆ ಕಪ್ಪು ಪಟ್ಟಿ,
ಕಚ್ಚಿ ಹಿಡಿದ ನಾಲಿಗೆ,
ಒಸರುತಿದ್ದ ಬೆವರು; ಹಿಡಿ ಹಿಡಿ ಸಿಟ್ಟು
ತುಕ್ಕುಹಿಡಿದ ಜೈಲ ಕಂಬಿ,

ಹರಿದ ಚಪ್ಪಲಿಗಳ ಹೊರತು ಅಲ್ಲಾರು ಇಲ್ಲ
ಎದೆಮಟ್ಟ ಹರಡಿದ್ದ ಕೆಂಧೂಳ ನಡುವೆ
ಗೋಡೆ ಮೇಲೆನ ಕೆಂಪು ಬಣ್ಣದ ದಿಕ್ಕಾರವಿದೆ,
ಈವರೆಗೆ ಯಾರ ಕೈಯಲ್ಲೂ ಅಳಿಸಲಾಗಿಲ್ಲ,
ಪ್ರತಿಭಟನೆಯ ನಿಲ್ಲಿಸಲಾಗಿಲ್ಲ.

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ