ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, April 14, 2013

ಮುಗಿಯಬಾರದು ಸಂಜೆ

ಕೆಂಪು ಸಂಜೆಗೆ ಸಿಗು ಒಮ್ಮೆ ಹುಡುಗಿ
ಮಾತನಾಡುವುದಿದೆ ನಿನ್ನೊಟ್ಟಿಗೆ,
ಗಿಣಿಹಸಿರು ಸೀರೆಯಲಿ ಬಳುಕುತ್ತ ಬರಬೇಕು
ಅಮಲೇರಬೇಕು ಈ ಕಣ್ಣಿಗೆ.

ಮರದಡಿಗೆ ಬಿದ್ದಿರುವ ಒಣಗಿದೆಲೆಗಳ ಮೇಲೆ
ಸದ್ದು ಮಾಡುತ ನಿನ್ನ ಗೆಜ್ಜೆ ಕುಣಿಸು,
ಬಾಯಾರಿ ಕುಳಿತಿರುವೆ, ವಿರಹದಲಿ ಕಾದಿರುವೆ
ಹೂದುಟಿಯ ಅಂಟಿಸಿ ನನ್ನ ತಣಿಸು    

ಸಪೂರ ನಡುವನ್ನು ಮನದಣಿಯೆ ಬಳಸಿ
ನಡೆಯಬೇಕಿದೆ ಕಾಲು ನೋಯುವಂತೆ,
ತಂಡಿಗಾಳಿಗೆ ರೋಮ ನಿಮುರಿಕೊಳ್ಳುವ ವೇಳೆ
ಬಾಚಿ ತಬ್ಬಿಬಿಡು ಬಿಸಿ ಏರುವಂತೆ 

ನಿನ್ನೊಡನಿರುವಷ್ಟು ಕಾಲ ಮುಗಿಯಬಾರದು ಸಂಜೆ
ಮನೆಯ ಸೇರಿದೊಡೆ ಮತ್ತೆ ವಿರಹ,
ಮೈ ಮನದ ತುಮುಲಗಳು ಬಿಸಿ ಹೆಂಚಿನಂತೆ
ಅದಕೆ ಹಾಳೆಯೊಳು ನನ್ನ ಬರಹ

-ಪ್ರವರ
1 comment:

  1. ಪ್ರೀತಿ ಪ್ರೇಮ ವಿರಹಗಳ ಹದವಾದ ಮಿಳಿತ.. ಇಷ್ಟ ಆಯಿತು ಬ್ರದರ್..

    ReplyDelete

ಅನ್ಸಿದ್ ಬರೀರಿ