ಮೈಯ ಬೆವರ ನೈವೇದ್ಯ

ಗುಳೆ ಹೊರಟು ನಿಂತ
ಕನಸುಗಳ ತಡೆಯಲಾರದೇ
ಬಿಕ್ಕಿಸಿ ಅತ್ತು
ಮೂಲೆ ಹಿಡಿದಿದ್ದ ಮಾತುಗಳನ್ನು
ಹಿಡಿದು ರಮಿಸಿ ಪದ್ಯವಾಗಿಸಲು
ಬರೆಯುತ್ತೇನೆ

ಇದೋ ಮರಳುಗಾಡು
ಮರಳಿನೊಳಗೆ ಕಪ್ಪೆ
ಹುದುಗಿ
ಎಂದೋ ಬರುವ ಮಳೆಗೆ
ಅಂಡು ನೋಯುವಂತೆ
ಕಾಯಬೇಕು;
ನಾನೇನು ಕಪ್ಪೆಯಲ್ಲ
ಜೀವ ಹಿಡಿದುಕೊಂಡುಕಾಯಲು;
ಎಲ್ಲೋ ಓಡುವ
ಮೋಡಗಳ ಗುಪ್ಪೆ ಹಾಕಲು
ಬರೆಯುತ್ತೇನೆ

ಹಿಡಿ ಮಣ್ಣಿಗೆ ಎದೆ ಪೀಠ
ಒಳಗೊಳಗೆ ಹೊಯ್ದಾಟ;
ತೂಕಡಿಸುವ ನೆರಳಿಗೆ
ಮೈಯೊಡ್ಡಿ ನಿದ್ದೆ ಬೇಡಿದವರಲ್ಲ;
ನಿಗಿ ನಿಗಿ ಕೆಂಡದ ನೆಲಕ್ಕೆ ಮೈಯ್ಯ ಬೆವರ
ನೈವೇದ್ಯ,
ಕೂನಿ ಕಹಾನಿಯ ಹೊತ್ತು ನಿಂತ
ಜಾಲಿ ಗಿಡಕೆ ನೂರು ಕಣ್ಣು,
ಸಾವಿರಾರು ಕೋರೆಹಲ್ಲು;
ಒಂದು ಬಿಳಿಯ ಹೂವ ಅರಳಿಸಲು
ಬರೆಯುತ್ತೇನೆ;

ನನ್ನನ್ನೇ ಮುಕ್ಕಿದ
ಮುಖದ ಚಹರೆಗಳ
ಬದಲಿಸುತ್ತೇನೆ;
ಇದೇನು ತೀಟೆಯಲ್ಲ
ತೊಡೆ ತಟ್ಟುವ ಹಠ;
ನಾನು ನಾನಾಗಿಯೇ ಇರಲು
ಬರೆಯುತ್ತೇನೆ.
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ