ಬೇರು ಮತ್ತು ರೆಕ್ಕೆ

ಬದುಕುಕೆಂದರೆ ಬರೀ
ಬದುಕುವುದಲ್ಲ!
ನೆಲವ ಕಚ್ಚಿ ಕೆದಕಬೇಕು
ರೆಕ್ಕೆ ಬಿಚ್ಚಿ ಹಾರಬೇಕು

ಬೇರೊ ಬಿಳಲೊ;
ಮಣ್ಣೆಂಬ ಮಣ್ಣು ಎದೆ ತೆರೆದಿಡಬೇಕು,
ಅದೆಷ್ಟೋ ಅತೃಪ್ತ ದೇಹಗಳು
ಇಲ್ಲೇ ಕರಗಿ ಹೋಗಿವೆ
ಮಣ್ಣೊಳಗೆ,

ಕರಗದೇ ಉಳಿದದ್ದು ಬುರುಡೆ
ಮತ್ತವರ ಅದಮ್ಯ ಬಯಕೆಗಳು,
ಯಾರಿಗೂ ಕರಗಿಸಲಾಗಿಲ್ಲ
ಈವರೆಗೆ....
ಬೇರುಗಳಿಗೆ ಎಟುಕಬಹುದು
ಚಾಚಿ ನೋಡಬೇಕು,
ಮುಂದೊಂದು ದಿನ
ಕೊಂಬೆಗಳಂಚಿಗೆ ಹೂವುಗಳಾಗುತ್ತವೆ,

ಕಂಕುಳಲ್ಲೇ ಮುದುರಿಟ್ಟ
ಜೋಡು ರೆಕ್ಕೆಗಳಿನ್ನು ಬಲಿತಿಲ್ಲ
ಕಾಯುತ್ತಾ ಕೂತರೆ
ಕೂದಲಿಗೆ ಮುಪ್ಪೇರುತ್ತದೆ.

ಹಾರಲಾರೆನೆಂದು ಬಿಸಿಯುಸಿರು ಬಿಡುತ್ತಾ
ಕೂತರೆ
ಮುಟ್ಟಲಾಗದು ನಭವ;
ಕೊನೆಪಕ್ಷ ಬಾಣಗಳಿಗೆ ಸಿಕ್ಕು
ಕತ್ತರಿಸಿ ಬಿದ್ದ
ರಕ್ತ ಹತ್ತಿದ ಪುಕ್ಕಳನ್ನಾದರೂ ಕಟ್ಟಿಕೊಂಡು
ಏಣಿ ಹಾಕುತ್ತೇನೆ;

ದುಡಿದವರ ಮೈಯ ಬೆವರು
ಮೋಡಗಳಾಗಿವೆ,
ಕೂಡಿಸಿ ಮಳೆಯಾಗಿಸುತ್ತೇನೆ
ತಂಪಾಗಲಿ ನೆಲ
-ಪ್ರವರ

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ