ನಿರ್ಲಿಪ್ತ ಬುದ್ಧನ....

ಒಂದೇ ಸಮನೆ
ಭೋರ್ಗರೆಯುತ್ತಿಹ
ನಿನ್ನ ಕಣ್ಣ ಬೆಳಕಲ್ಲಿ
ಒಂದು ಹಿಡಿ ಇತ್ತ ತಾ,
ಎದೆಗೆ ಸುರಿದುಕೊಳ್ಳುತ್ತೇನೆ
ಅಂಟಿಕೊಂಡಿದ್ದ ಇರುಳೆಲ್ಲ
ಆವಿಯಾಗಲಿ,
ನಾನೂ ನಿರ್ಲಿಪ್ತನಾಗುತ್ತೇನೆ
ಮೌನದಂತೆ,

ಬೆರಳ ಸಂದಿಗಳಿಂದ ಜಾರಿದ್ದ
ಮನಸ್ಸು ಘನೀಕರಿಸಿ
ಇಲ್ಲೇ ಜೋಳಿಗೆಯಲ್ಲೇ
ಇಟ್ಟಿದ್ದೇನೆ.
ಮೋಡಗಳೆಲ್ಲಾ ಸರಿವವರೆಗೂ
ಕಾಯಬೇಕು
ಶುಭ್ರ ಮುಗಿಲ ಎವೆಯಿಕ್ಕದಂತೆ
ನೋಡಬೇಕು.

ಅದೆಷ್ಟೋ ಬಾರಿ ಸುಡುಬೆಂಕಿಗೊಡ್ಡಿ
ಕರಕಲಾಗಿದ್ದ ಕನಸುಗಳನ್ನು
ನನ್ನ ಕೈಯಾರೆ ಮಣ್ಣು ಮಾಡಿದ್ದೇನೆ,
ನೋಡು, ಅಂಗೈಯ ಗೆರೆಗಳಲ್ಲಿನ
ಮಣ್ಣ ಕಲೆ ಮಾಸಿಲ್ಲ,
ನಕ್ಕದ್ದು ಅದೇ ಕೊನೆ,
ಶುಭ್ರ ನೀರಿಗೆ ಅಲೆಯುತಿದ್ದೇನೆ.

ಸಣ್ಣಗೆ ಉರಿಯುತಿದ್ದ ಬೆಳಕು
ನೀನೆಂದು ಅರಿವಿದ್ದರೂ
ನಡುವೆ ಕೂತು
ಮಿಣುಕಾಡುತ್ತೇನೆ,
ಬೆನ್ನಿಗಂಟಿದ ಕತ್ತಲ
ಕೊಡವಲು ಕೈ ಎಟಕುತ್ತಿಲ್ಲ
ನೀನೆ ಬಾಹುಗಳ ಚಾಚಬೇಕು
-ಪ್ರವರ

Comments

  1. ಕವನ ತುಂಬಾ ಇಷ್ಟವಾಯಿತು.. ಚೆನ್ನಾಗಿದೆ...

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ