ನಾಳೆ ಮಲಗುತ್ತೇನೆ ಉಸಿರಿಲ್ಲದೆ


ನಾಳೆಗಳ ಕಾಯುತ್ತೇನೆ
ಒಂದಷ್ಟು ನೆಮ್ಮದಿಗಾಗಿ
ಸಿಕ್ಕರೂ ಸಿಗಬಹುದು ಸಾಂತ್ವಾನದ ಸಾವು
ಮಲಗುತ್ತೇನೆ ಉಸಿರಿಲ್ಲದೇ.

ಮರೆಯಾದ ನೆರಳುಗಳಿಗೆ
ಹುಡುಕುತ್ತಿದ್ದಾರೆ ನಮ್ಮ ಜನ
ಈ ಕತ್ತಲಲ್ಲಿ,
ಘಾಟು ವಾಸನೆ
ಮೂಗಿಗೆ ಕರ್ಚೀಫು ಹಿಡಿಯಬೇಕು.
ಗಂಟಲಿಗೆ ಅಡರಿದರೆ ಕಷ್ಟ
ಕೆಮ್ಮುತ್ತೇನೆ ಬಿಳಿ ಕರ್ಚೀಫಿನಲ್ಲಿ
ರಕ್ತಕ್ಕೆ ಕೆಂಪಾದರೂ ಆದೀತು.

ನಕ್ಕು ಸುಮಾರು ದಿನಗಳಾದವು
ಆ ದಿನ ಇನ್ನೂ ನೆನಪಿದೆ,
ಬೇಲಿ ಮೇಗಳ ಹೂವು ಮೆಲ್ಲಗೆ ಸರಿಯುತಲಿತ್ತು
ಮುಳ್ಳುಗಳಿಗೆ ತಾಕದಂತೆ.
ನನಗೆ ನೆನಪಿಲ್ಲ
ತುಟಿ ಹೇಳಿದ್ದು.

ಈ ಮಣ್ಣಿನಲ್ಲಿ ಏನೂ ಬೆಳೆಯುವುದಿಲ್ಲವಂತೆ
ಇದು ಬರಡಂತೆ,
ಬೀಜ ಹಿಡಿದು ಮಣ್ಣೊಳಗಿದ್ದ
ಕೈ ಮೂಳೆಗಳು ಕಾಣುತ್ತಿವೆ
ಗಾಳಿಗೆ ಮರಳು ಹಾರಿ.
ಇನ್ನೂ ತಿರುಗುತಲಿದ್ದ ವಾಚಿನ
ಮುಳ್ಳಿನ ಸದ್ದು ಸಣ್ಣಗೆ ಕೇಳುತ್ತಿದೆ,

ಗಾಳಿ ಬೀಸಿದ ದಿಕ್ಕಿನೆಡೆ
ಮರಳ ದಾರಿ,
ಹಗಲು ಇರುಳುಗಳು ಏಕವಾಗಿ

ನಾನು ನಾಳೆಗಳನ್ನ ಕಾಯುತ್ತಲೇ ಇದ್ದೇನೆ,
ಮೂಕಗೊಂಡು ನೋಡುತ್ತಾ ನಿಂತ
ಅಸ್ಥಿಗಳ ಜೊತೆ!!!
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ