ಜುಟ್ಟು ಜನಿವಾರಗಳನೆಲ್ಲಾ ಕೊಟ್ಟುಬಿಟ್ಟಿದ್ದೇವೆ



ಇಲ್ಲಿನ ಮಣ್ಣಿಗೂ ಸೂತಕ
ಹಿಡಿಸಿದವರೊಂದಿಷ್ಟು ಜನರಿದ್ದಾರೆ
ಮೆರೆಯುತ್ತಿದ್ದಾರೆ ಉಪ್ಪರಿಗೆಗಳಲ್ಲಿ
ಹುರಿ ಮೀಸೆ ತಿರುವುತ್ತಾ...

ಮಂದಿರ-ಮಸಿದಿ-ಚರ್ಚುಗಳ
ದೇವರುಗಳನೆಲ್ಲಾ ದಾಳ ಮಾಡಿಕೊಂಡು
ಗಂಟೆ ಜಾಗಟೆಗಳ ಬಾರಿಸುತ್ತಾ,
ನಮ್ಮನ್ನು ಅಲ್ಲಿಂದಿಲ್ಲಿ ಎತ್ತಿ ಹಾಕುತಿದ್ದಾರೆ ಕಾಯಿಗಳಂತೆ,
ಒಬ್ಬರಿಂದೊಬ್ಬರ ಕಡಿಯುತ್ತಾ.

ವಿಧಾನ ಸೌಧದ ಏ.ಸಿ ಅಡಿಯಲ್ಲಿ ಸೆಕ್ಸು ನೋಡುತ್ತಿದ್ದವರು,
ಆಕಳಿಸುತ್ತಿದ್ದವರು, ತೂಕಡಿಸುತ್ತಿದ್ದವರು, ನೋಟುಗಳೆಣಿಸುತಿದ್ದವರು...
ಹೊರಗೆ ಸುಡು ಬಿಸಿಲಿನಲ್ಲಿ ಸಾಲಿನಲ್ಲಿ ಕಾಯುತ್ತಿದ್ದಾರೆ
ಪಿಸುರುಗಣ್ಣಿನ ಮುದುಕರು, ಬಿಳಿಸೀರೆ ಹೆಂಗಸರು,
ಕಾಲುಕಳೆದುಕೊಂಡವರು ಅವರು ಇವರು....

ಇದು ಈಗಿನದಲ್ಲ!!
ನಿಮ್ಮನ್ನು ನೀವೆ ಆಳಿಕೊಳ್ಳಿ ಎಂದು
ಬ್ರಿಟೀಶರು ಬಿಟ್ಟು ಹೋದಾಗಿನಿಂದ,
ನಾವು ನಮ್ಮ ಮೈಧುನದ ಕೆಲಸಗಳಲ್ಲಿ
ಬ್ಯುಸಿಯಾಗಿದ್ದೇವೆಂದು
ಜುಟ್ಟು ಜನಿವಾರಗಳನೆಲ್ಲಾ ಕೊಟ್ಟುಬಿಟ್ಟಿದ್ದೇವೆ
ಏನಾದರು ಮಾಡಿಕೊಳ್ಳಿ ಎಂದು.

ನಾವೆಷ್ಟು ಮುಗ್ಧರೆಂದರೆ ಮತ್ತೆ ಅವರನ್ನೇ ತಂದು ಕೂರಿಸುತ್ತೇವೆ
ಬೆನ್ನ ತೋರಿಸಿ ಚಾಟಿ ಕೊಟ್ಟು, ಬಾಸುಂಡೆ ಬರಿಸೆಂದು
ಬೆತ್ತಲಾಗಿ ನಗುತ್ತಾ ನಿಲ್ಲುತ್ತೇವೆ,
ಮತ್ತೆ
ಹಸಿವಿಗೆ ಮೂಳೆಗೆ ಜೊಲ್ಲು ಸುರಿಸುತ್ತಾ ನಿಲ್ಲುತ್ತೇವೆ.
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ