ಕೆಂಪು ದೀಪದ ಓಣಿ

ಮೆತ್ತಗೆ ಹಸಿ ಹಿಸಿ ರಾತ್ರಿ
ಹೆಜ್ಜೆಯಿಡುತಿತ್ತು,
ಹೊಟ್ಟೆ ಹಸಿದವರೊಂದು
ಕಡೆಯಾದರೆ,
ಕಾಮದಿಂದಸಿದವರೊಂದು ಕಡೆ.

ಸಂದಿ-ಗೊಂದಿಗಳಲ್ಲಿ
ಸೆರಗ ತೆರೆದು ಎದೆಯ ಬಿಕರಿಗಿಟ್ಟು
ನಗುತ್ತಲೇ ಎದುರು ನೋಡುತ್ತಿದ್ದಾರೆ,
ಕಾಮಾಲೆ ಕಣ್ಣುಗಳ!!
ಹಿಡಿಸಲಾರದಷ್ಟು ನೋವಿದ್ದರೂ
ಪೌಡರ್ರು ಲಿಪ್ ಸ್ಟಿಕ್ಕು ಬಳಿದು,
ಚಿಟಕಿ ಹೊಡೆದು ಕರೆವ
ಬೆರಳುಗಳ ಸದ್ದ ಕಾಯುತ್ತಿದ್ದಾರೆ.

ಪರದೆಯ ಹಿಂದೊಂದು ಮುಖ
ಸರಿದ ಪರದೆಯ ಮುಂದೊಂದು ಮುಖ

ಕೆಂಪು ದೀಪ ಉರಿಯುತ್ತಿದ್ದರೂ
ಕತ್ತಲೆ ಹೀಯಾಳಿಸಿ
ಬದುಕಿಸುತ್ತಿದೆ
ಅದರಡಿಯಿದ್ದವರ,
ಇದು
ಬೆಳಕಿನಡಿಯ ಕತ್ತಲೆಯ ಬದುಕು

ಹೊರಗೆ ಅಪ್ಪನ ವಿಳಾಸವಿಲ್ಲದ
ಮಗು ಅಳುತ್ತಾ ಕೂತಿದೆ,
ಕೆಳಿಸಿದರೂ ಕಿವಿಗೆ ಬೀಗ ಹಾಕಿಟ್ಟು
ಹಾಸಿಗೆಯ ಕೊಡವುತಿದ್ದಾಳೆ
ಹೆತ್ತವಳು,
ಪ್ರೀತಿಯ ಅದುಮಿಟ್ಟುಕೊಂಡು

ಗಾಂಜಾ ಅಫೀಮಿನ ಕಮಟು ವಾಸನೆಗೆ
ತಲೆ ಸುತ್ತುತ್ತಾ ಮಲಗುತ್ತಿದೆ
ಪ್ರತಿ ದಿನದ ಘೋರ ರಾತ್ರಿ,
ಒಡೆದ ಕನ್ನಡಿಗಳಲ್ಲಿ
ಅದೇ ಬಣ್ಣ ಮಾಸಿದ ಮುಖ,
ಚಪ್ಪಲಿ-ಬೂಟುಗಳಿಂದ ತುಳಿಸಿಕೊಂಡ
ದಳ ಉದುರಿದ ಹೂವು,
ಬಟ್ಟೆಗಳಲ್ಲಿ ಕಂಕುಳದ ಬೆವರ ಜೊತೆ
ಸೆಂಟಿನ ವಾಸನೆ.

-ಪ್ರವರ








Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ