ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Thursday, July 19, 2012

ಬೆಂಕಿ ಹೊದ್ದವರು               ರಾತ್ರಿ ಹನ್ನೊಂದಾಗಿತ್ತು, ಎಲ್ಲರೂ ಬಂದೂಕುಗಳ ಬಿಗಿದಪ್ಪಿ ಮಲಗಿದ್ದರು. ಒಬ್ಬರಿಗೆ ಜೋಗುಳ ಹಾಡುತಿದ್ದ ಅಮ್ಮನಂತಾದರೆ, ಕೆಲವೊಬ್ಬರಿಗೆ ದುಖಃದಲ್ಲಿ ಸಾಂತ್ವಾನ ಹೇಳಿ ಮುತ್ತಿಕ್ಕುತಿದ್ದ ಹೆಂಡತಿಯಂತೆ, ಇನ್ನೂ ಕೆಲವೊಬ್ಬರಿಗೆ ಅದೇ ಎಲ್ಲವೂ. ಭ್ರಷ್ಟ ಸಮಾಜವನ್ನು ಬಂದೂಕು ಹಿಡಿದು ಸರಿ ಮಾಡುತ್ತೇವೆಂದು, ದುಷ್ಟ ರಾಜಕಾರಣಿಗಳಿಂದ ಮಲ ಹತ್ತಿ ಮಲಿನವಾಗಿರುವ ಸಮಾಜವನ್ನು ತುಪಾಕಿ ಹಿಡಿದು ಶುಚಿ ಮಾಡುತ್ತೇವೆಂದು ಹೊರಟು ಬಂದವರಿಗೆ ನಕ್ಸಲರೆಂದು ಹಣೆಪಟ್ಟಿ ಕಟ್ಟಿ ಪೋಲಿಸರಿಂದ ಬೇಟೆಯಾಡುವುದಕ್ಕೆ ಬಿಟ್ಟಿದ್ದರು. ತಪ್ಪಿಸಿಕೊಂಡು ತಪ್ಪಿಸಿಕೊಂಡು ಆಗುಂಬೆಯ ದಟ್ಟಡವಿಯ ಬಂದು ಸೇರಿದ್ದ ಒಂದು ಗುಂಪು, ಈಗಾಗಲೇ ಪೋಲಿಸರ ಗುಂಡಿಗೆ ಸಹ ಸದಸ್ಯರಾದ ಸಿದ್ದು, ಚಿದಾನಂದ ಪ್ರಾಣ ತೆತ್ತಿದ್ದರು. ಉಳಿದಿದ್ದ ಏಳು ಜನರಲ್ಲಿ ಮಂಜುವನ್ನು ಹೊರತುಪಡಿಸಿ ಎಲ್ಲರೂ ಮಲಗಿದ್ದಾರೆ. ಹಾಗಂತ ಇವರೇನು ಓದದವರೇನಲ್ಲ, ನಾಲ್ಕು ಜನ ಕಲಾ ವಿಷಯದಲ್ಲಿ, ಉಳಿದ ಮೂವರು ವಿಜ್ನಾನ ವಿಷಯದಲ್ಲಿ ಪದವಿ ಪಡೆದವರು. ಸಮಾಜದ ತುಳಿತಕ್ಕೆ ಸಿಕ್ಕು ನೋವುಂಡವರು, ಕನಸಿನ ಪ್ರಪಂಚದ ನಿರ್ಮಾಣಕ್ಕಾಗಿ ತಮ್ಮದೇ ಹಾದಿ ಹಿಡಿದು, ಅಪ್ಪ ಅಮ್ಮ ಸೇಹಿತರೆಲ್ಲರನ್ನೂ ಬಿಟ್ಟು ಬಂದವರು. ಪ್ರಾಣ ಹಾರಿ ಹೋಗಬಹುದೆಂದು, ಅಂಗ ಊನರಾಗೀವೆಂದು ಭಯದಿಂದಲೂ ನಡುಗುತ್ತಲೂ ಮಲಗಿದ್ದರು. ಬೆಳಕಿಗೆಂದು ಹಚ್ಚಿದ್ದ ಪಂಜುಗಳೆಲ್ಲಾ ಆರಿಸಿಯಾಗಿದೆ, ದಟ್ಟವಿಗೆ ಕಗ್ಗತ್ತಲ ಸೆರಗು ಹೊಚ್ಚಿತ್ತು. ಈ ದಿನದ ಗುಂಪಿನ ರಾತ್ರಿ ಕಾವಲು ಮಂಜುವಿನ ಸರದಿಯಾಗಿತ್ತು, ಕಲ್ಲಿಗೆ ಆನಿಕೊಂಡು ಬೆನ್ನಲ್ಲಿದ್ದ ಬಂದೂಕನ್ನು ತೊಡೆ ಮೇಲಿರಿಸಿಕೊಂಡು, ಬರಬಹುದಿದ್ದ ಸಾವಿಗೆ ಎದುರು ನೋಡುತ್ತಾ ಕೂತವನಂತೆ..........
                               ಮಂಜು ಹತ್ತನೆಯ ವಯಸ್ಸಿನಲ್ಲಿದ್ದಾಗಲೇ ಅಪ್ಪ ಕುಡಿತದ ಬೆನ್ನು ಹತ್ತಿ ತೀರಿ ಹೋಗಿದ್ದರು. ಮನೆಯಲ್ಲಿ ಅಮ್ಮ, ಮಂಜು ಮತ್ತು ತಂಗಿ ಸಿರಿ ಮಾತ್ರ. ಅವರಿಬ್ಬರನ್ನು ಬೆಳೆಸಿ ಓದಿಸುವ ಭಾರ ಅಮ್ಮನಿಗಿತ್ತು. ಪಿಯುಸಿವರೆಗೂ ಓದಿದ್ದ ಅಮ್ಮ ದೃತಿಗೆಡದೇ ಕಛೇರಿಯೊಂದರಲ್ಲಿ ಕ್ಲರ್ಕ್ ಆಗಿ ಸೇರಿಕೊಂಡಿದ್ದರು. ಮನೆಯನ್ನು ನಡೆಸಿಕೊಂಡು ಹೋಗುವಷ್ಟು ಪಗಾರ ಬರುತಿತ್ತು, ಮಂಜು ಮತ್ತು ಸಿರಿಯನ್ನು ಹತ್ತಿರದ ಶಾಲೆಗೆ ಸೇರಿಸಿದ್ದರು. ರಾತ್ರಿಗೆ ಅಮ್ಮ ನಮ್ಮನ್ನು ಓದಿಸಿ, ಅಡುಗೆ ಮಾಡಿ ಕೈತುತ್ತು ಕೊಟ್ಟು ಊಟ ಮಾಡಿಸಿ ಮಲಗಿಸುತಿದ್ದ. ಹೀಗೆ ಕೆಲ ವರುಷಗಳು ಕಳೆದವು, ಒಂದು ದಿನ....
                   ಮಂಜು ಶಾಲೆಯಿಂದ ಮನೆಗೆ ಬೇಗ ಬಂದಿದ್ದ, ಸಿರಿ ಇನ್ನೂ ಅಲ್ಲೇ ಇದ್ದಳು. ಸಂಜೆಯಾಗಲೇ ಆರಾಗಿತ್ತು ಅಮ್ಮ ಮನೆಗಾಗಲೇ ಬಂದು ಟೀ ಗೆ ಇಟ್ಟಿದ್ದರು, ಸಿರಿ ಇಲ್ಲದ್ದನ್ನು ಕಂಡು ಅಮ್ಮ”ಲೋ ಮಂಜು, ಸಿರಿ ಎಲ್ಲಿ ಕಾಣಿಸ್ತಿಲ್ವಲ್ಲ!!!”, ಅದಕ್ಕೆ ಮಂಜು”ಇಲ್ಲಾಮ್ಮ, ನಮ್ದು ಕ್ಲಾಸು ಬೇಗ ಬಿಟ್ಟಿತ್ತು ಅದ್ಕೆ ಮನೆಗೆ ಅವಾಗ್ಲೆ ಬಂದೆ, ಸಿರಿ ಇನ್ನೂ ಸ್ಕೂಲಲ್ಲೇ ಇದ್ಲು”, ಅಮ್ಮ ಸ್ವಲ್ಪ ಗಾಬರಿಯಾದರು “ನಿಂಗೇನಾದ್ರು ಸ್ವಲ್ಪನಾದ್ರು ಬುದ್ದಿ ಇದೇನಾ! ಆ ಮಗುನ ಅಲ್ಲೇ ಬಿಟ್ಟು ಬಂದಿದಿಯಲ ನಿಂಗೆ ಏನ್ ಹೇಳ್ಬೇಕು ಹಾ!!”, ”ನೋಡ್ಕೊಂಡು ಬರ್ತಿನಿ ಇರಮ್ಮಾ, ಯಾಕಂಗೆ ಮಾಡ್ತಿಯಾ”,” ಇರು ನಾನು~~ ಬಂದೆ”(ಸ್ವಲ್ಪ ಗದ್ಗದಿತಳಾಗಿ), ಅವಸರಾವಸರವಾಗಿಯೇ ಮನೆಯ ಬಾಗಿಲು ಮುಚ್ಚಿಕೊಂಡು ಶಾಲೆಯತ್ತ ದೌಡಾಯಿಸಿದರು, ನೋಡಿದರೆ ಶಾಲೆಯ ಬಾಗಿಲು ಮುಚ್ಚಿಯಾಗಿದೆ. ಹತ್ತಿರದವರನ್ನು ಕೇಳಿದರೆ ಇಲ್ಲ ಎಂದು ತಲೆಯಾಡಿಸಿದರು. ಅಮ್ಮನಿಗೆ ಒಮ್ಮೆಲೇ ಅಳು ಬಂದು ಯಾವ ಕಡೆ ಹುಡುಕಬೇಕೆಂದು ತೋಚದೇ ಹಾಗೇ ನಿಂತು ಬಿಟ್ಟರು, ಊರಲ್ಲಿದ್ದ ಎಲ್ಲ ಪರಿಚಯಸ್ತರ ಮನೆಯಲ್ಲೂ ಕೇಳಿಗರೂ ಗೊತ್ತಿಲ್ಲ, ನೋಡಿಲ್ಲವೆಂಬ ಉತ್ತರವೇ!!! ಬೆಳಕು ಕರಗಿ ಕತ್ತಲಾವರಿಸಿಕೊಂಡಿತ್ತು. ಅಮ್ಮ ಮಗ ಇಬ್ಬರೂ ಊರಿನ ಮೂಲೆ ಮೂಲೆಯನ್ನೆಲ್ಲಾ ತಡಕಾಡಿದರೂ ಸಿರಿ ಸಿಗಲಿಲ್ಲ, ಕೊನೆಗೆ ರಾತ್ರಿ ಒಂಬತ್ತರ ಸುಮಾರಿಗೆ ಪೋಲಿಸ್ ಠಾಣೆಯಲಿ ಇನ್ಸಪೆಕ್ಟರ್ ಇಲ್ಲದೇ ಪೇದೆಯ ಬಳಿ ಇಬ್ಬರೂ ಮಗಳ ಹುಡುಕಿಕೊಡಿ ಎಂದು ಗೋಳಿಟ್ಟರು, ಆತ ಕುಡಿದ ಅಮಲಿನಲ್ಲಿದ್ದ. “ಹಾಂ, ಹೇಳಿ” ಎಂದು ಕಾಣೆಯಾದ ಮಗುವಿನ ಅರ್ಧಂಬರ್ದ ವಿವರ ಕಾಟಚಾರಕ್ಕೆ ತೆಗೆದುಕೊಂಡು ಐವತ್ತು ರೂಪಾಯಿ ಕಸಿದುಕೊಂಡು ನಾಲ್ಕುದಿನ ಬಿಟ್ಟುಕೊಂಡು ಬನ್ನಿ ಅಂದ. “ಸಾರ್, ದಯವಿಟ್ಟು ನನ್ನ ಮಗಳನ್ನ ಹುಡುಕಿಕೊಡಿ” ಗೋಗರೆದಳು ಅಮ್ಮ, “ಆಯ್ತು ಆಯ್ತು ನಾಲ್ಕು ದಿನ ಬಿಟ್ಕೊಂದು ಬನ್ನಿ ಅಂದ್ನಲಾ, ಬನ್ನಿ ಸಾಹೇಬ್ರು ಊರಿಗ್ ಹೋಗಿದರೆ” ಪೇದೆ ಹೀಗನ್ನುತ್ತಲೇ, ಮಂಜು ಒಂಥರಾ ಕೋಪದಿಂದ ಪೇದೆಯನ್ನೇ ದುರುಗುಟ್ಟಿಕೊಂಡು ನೋಡಿದ, ಒಡಲೊಳಗೆ ಬೆಂಕಿ ತುಂಬಿಟ್ಟುಕೊಂಡಿದ್ದ ಪರ್ವತದಂತೆ........
                   ಅಮ್ಮ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಲೇ ಮನೆಯೆಡೆಗೆ ಹೆಜ್ಜೆ ಹಾಕಿದಳು, ಮಂಜು ಕೂಡ ಅಮ್ಮನ ಕೈ ಹಿಡಿದು..., ಗೋಡೆಗೊರಗಿ ಕುಳಿತವಳೇ ಆಕಾಶ ಕಳಚಿ ಬಿದ್ದವಳಂತೆ ಅಳುತ್ತಾ ಕೂತಳು, ಮಂಜು ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ, ಅಮ್ಮ ಅತ್ತು ಅತ್ತು ಹಾಗೆ ಮಲಗಿದಳು. ನಿದ್ದೆ ಹತ್ತದೇ ಸಣ್ಣಗೆ ಉರಿಯುತಿದ್ದ ದೀಪವನ್ನೇ ದಿಟ್ಟಿಸಿ ನೋಡುತಿದ್ದಾನೆ. ಇದ್ದಕಿದ್ದಂತೆ ಉರಿಯುತಿದ್ದ ದೀಪ ನಂದಿ ಹೋಯ್ತು, ಯಾರೋ ಸಣ್ಣಗೆ ಚೀರಿದ ಸದ್ದು, ಒಂದು ಕ್ಷಣ ಭಯ, ಕಣ್ಣಿಗತ್ತಿದ ನಿದ್ದೆಗೆ ಶರಣಾದ.....
                   ಮುಂಜಾನೆ ಊರಿನ ಜನರೆಲ್ಲಾ ಏನನ್ನೋ ಗುಸು ಗುಸ್ ಮಾತನಾಡುತಿದ್ದರು, ದನ ಕಾಯುತಿದ್ದ ಹುಡುಗ ಊರ ಹೊರಗೆ ದನಗಳ ಕಾಯುವಾಗ ಯಾವುದೋ ಶವವನ್ನು ನೋಡಿದ್ದಾಗಿ ಹೇಳಿದ, ಜನರು ಗುಂಪು ಗುಂಪಾಗಿ ಹೋಗುವುದನ್ನು ಕಂಡು ಮಂಜು ಮತ್ತು ಅವನಮ್ಮ ಕೊಂಚ ಅಳುಕಿನಿಂದಲೇ ಹೊರಟರು, ಸುತ್ತಲಿನ ಗುಂಪನ್ನು ಸರಿಸಿ ನೋಡಿದಾಗ ಅಲ್ಲಿ ಶವವಾಗಿ ಬಿದ್ದಿದ್ದು ಸಿರಿ,
ಕಣ್ಣ ಮುಂದೆ ಆಡಿ ಬೆಳೆಯಬೇಕಾಗಿದ್ದ ಮಗು, ವಯಸ್ಸಿನ್ನೂ ಒಂಬತ್ತು ದಾಟಿರಲಿಲ್ಲ ಹೆಣಗಾಗಿತ್ತು. ಮಂಜು ದೂರದಲ್ಲಿಯೇ ನಿಂತಿದ್ದ. ಹೆತ್ತ ತಾಯಿಯೆದುರಲ್ಲಿಯೇ ತನ್ನ ಕಂದನ ಶವವ ನೋಡಿದಲ್ಲಿ ಏನಾಗಬೇಡ??? ಬರಸಿಡಿಲು ಎರಗಿದವಳಂತೇ ಕೂಗಿ ಕುಸಿದೇಬಿಟ್ಟಳು, ಒಂದು ಕಡೆ ತಂಗಿ ಹೆಣವಾಗಿ, ತಾಯಿ ಎಚ್ಚರದಪ್ಪಿ ಬಿದ್ದಿದ್ದ ಕಂಡು ಮಂಜು ಜನರಲ್ಲಿ ಸಹಾಯಕ್ಕಾಗಿ ಅಂಗಲಾಚಿದ, ಯಾರೂ ಒಂದು ಹೆಜ್ಜೆ ಮುಂದೆ ಬರಲಿಲ್ಲ, ಕಲ್ಲು ಹೃದಯದ ಜನ ನೋಡುತಿದ್ದರೇ ಹೊರತು ಸಹಾಯ ಮಾಡುವ ಗೋಜಿಗೇ ಹೋಗಲಿಲ್ಲ. ಕೊನೆಗೆ ಒಂದುವರೆ ಗಂಟೆಯ ನಂತರ ಬಂದ ಪೋಲಿಸರು ಏನೇನೋ ಪರಿಶೀಲಿಸಿದರು. ಎಚ್ಚರವಾದ ಅಮ್ಮ ಅಳದ ಹೊರತು ಇನ್ನೇನು ಮಾಡಿಯಾಳು. ಪೋಷ್ಟ್ ಮಾಟಂ ರಿಪೋರ್ಟು ಬಂದಾಗಿತ್ತು, ಅದರಲ್ಲಿ ಅತ್ಯಾಚಾರವೆಸಗಿ ಕೊರಳಿಗೆ ತಂತಿ ಬಿಗಿದು ಕೊಲೆ ಎಸಗಿದ್ದಾರೆಂದು ಬರೆದಿದ್ದರು.
                   ಶವ ಸಂಸ್ಕಾರವಾಗಿ ಸರಿಯಾಗಿ ಮೂರು ದಿನಕ್ಕೆ ಆರೋಪಿ ಸಿಕ್ಕಿದ್ದ, ಆತ ಬೇರೆ ಯಾರಲ್ಲ, ಅದೇ ಊರಿನ ಗೌಡನ ಮಗ. ಕೆಲವೇ ದಿನಗಳಲ್ಲಿ ಆತ ಯಾವುದೋ ರಾಜಕಾರಣಿಯ ಪ್ರಭಾವದಿಂದ ಹೊರ ಬಂದಿದ್ದ. ಅಮ್ಮ ಪೋಲಿಸ್ ಠಾಣೆಗೆ ಹೋಗಿ ಪ್ರಶ್ನಿಸಿದರೆ ಏನೇನೋ ಕಾರಣ ಹೇಳಿ ಹೊರ ದಬ್ಬಿದರು, ಹಣ ಬಲ, ಅಧಿಕಾರದ ಪ್ರಭಾವಕ್ಕೆ ನ್ಯಾಯವೆಂಬ ನ್ಯಾಯವೇ ಪ್ರಭಾವಿಗಳ ಕಾಲ ಬುಡ ಸೇರಿರುವಾಗ ಸಾಮಾನ್ಯಳಾದ ಹೆಣ್ಣು ಏನು ಮಾಡಿಯಾಳು!!!!!!!! ಆರೋಪಿಗೆ ಶಿಕ್ಷೆಯಾಗದ್ದನ್ನು ಕಂಡ ಸಾಮಾನ್ಯಳಾದ ತಾಯಿ ಅಳುತ್ತಾ ವ್ಯವಸ್ಥೆಯನ್ನು ಹಿಡಿ ಶಪಿಸಿದಳು.ಮಂಜುವಿನ ಮನಸ್ಸಲ್ಲಿ ನಡೆದ ಘಟನೆಗಳೆಲ್ಲಾ ಬೇರೂರುವುದಕ್ಕೆ ಶುರು ಮಾಡಿದವು
                           ನೋಡು ನೋಡುತ್ತಿದ್ದಂತೆ ಡಿಗ್ರಿ ಮುಗಿದಿತ್ತು, ಈಗಲಾದರೂ ಒಳ್ಳೆ ಕೆಲಸ ಹುಡುಕಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ, ಹಾಗೆ ಕೆಲಸಕ್ಕಾಗಿ ಒಂದಿಷ್ಟು ಕಡೆ ಅರ್ಜಿಗಳನ್ನೂ ಹಾಕಿಯಾಗಿತ್ತು. ಲಿಖಿತ ಪರೀಕ್ಷೆಗಳು ಪಾಸ್ ಆಗಿ, ವೈಯಕ್ತಿಕ ಸಂದರ್ಶನಕ್ಕೆ ಕರೆದಿದ್ದರು, ನಾಲ್ಕಾರು ತಾಸುಗಳ ನಂತರ ಒಳಗೆ ಹೋದರೆ ಅದರ ಸ್ವರೂಪವೇ ಬೇರೆಯಾಗಿತ್ತು. ಕೆಲಸ ಬೇಕಾದಲ್ಲಿ ಆ ಬಕಾಸುರರ ಕೈ ತುಂಬಾ ಕೊಡಬೇಕಿತ್ತು. ಅಷ್ಟೆಲ್ಲಿ ಕೊಡಲಾದೀತು!!! ಮನದಲ್ಲೇ ಸಿಡಿಯಲಿದ್ದ ಜ್ವಾಲಾಮುಖಿಯ ಅದುಮಿಟ್ಟುಕೊಂಡು ಹೊರ ಬಂದ, ಕೆಲಸ ಸಿಕ್ಕಿರಬಹುದೆಂದು ಅಮ್ಮ ಕಾಯುತ್ತಿದ್ದಾಳೆಯೇ??? ಸಿಕ್ಕಿಲ್ಲವೆಂದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡಾಳು ಎಂದು ಯೋಚಿಸುತ್ತಲೇ ಮನೆಯ ಕಡೆ ಭಾರದ ಹೆಜ್ಜೆ ಹಾಕತೊಡಗಿದ.
                   ದಾರಿಯಲ್ಲಿ ಮನಸ್ಸಿಲ್ಲಿ ಸಾವಿರಾರು ಯೋಚನೆಗಳು ಸಾಯಲಿದ್ದ ದೇಹದ ಸುತ್ತಲೂ, ಹುಣ್ಣಿಮೆ ಚಂದ್ರನೆಡೆಗೆ ಏರುತಿದ್ದ ಸಾಗದಲೆಗಳಂತೆಯೂ ಬಂದಪ್ಪಳಿಸುತಿವೆ, ನೂರು ದೇವರುಗಳ ನೆನದರೂ ನಿಲ್ಲುತ್ತಿಲ್ಲ. ಬರೀ ಬಂದೂಕು ಗನ್ನುಗಳೇ ಸಿಡಿಮದ್ದುಗಳೇ, ಸಮಾಜದ ಡೊಂಕು ಸರಿ ಮಾಡಬೇಕಾದರೆ ನನ್ನನಪ್ಪಿಕೋ ಎಂದು ಕೂಗಿ ಕೂಗಿ ಕರೆಯುತ್ತಿವೆ. ಅಧಿಕಾರಶಾಯಿ-ಬಂಡವಾಳಶಾಯಿಗಳ ಪ್ರತೀಕವಾದ ರಾಜಕಾರಣಿಗಳು,ಪೋಲಿಸರು, ಕಛೇರಿಯಧಿಕಾರಿಗಳು. ಶ್ರೀಮಂತರುಗಳ ತಲೆಗಳೊಳಕ್ಕೆ ಹೊಕ್ಕ ಗುಂಡು ನೆತ್ತರಿನಿಂದ ತೋಯ್ದು ಹೊರ ಬೀಳುತ್ತಿವೆ. ಅನ್ನವಿಲ್ಲದೇ ದಿಕ್ಕೆಟ್ಟು ಬಡಕಲಾದ ಜನರೆಲ್ಲ ಸಂತೃಪ್ತತೆಯಿಂದ ಊಟ ಮಾಡುತಿದ್ದಾರೆ, ಮೈತುಂಬ ಬಟ್ಟೆ ಉಡುತಿದ್ದಾರೆ. ನೋವುಂಡ ಜನರೆಲ್ಲ ಮನತುಂಬಿ ನಗು ಬೀರುತಿದ್ದಾರೆ. ಬಂದೂಕು ಹಿಡಿದಲ್ಲಿ ಇಷ್ಟೆಲ್ಲಾ ಆಗಲಿರುವುದೇ!!!! ಜೀವ ತೆಗೆಯುವಷ್ಟು ಕ್ರೂರಿಯಾಗಬೇಕೆ??? ನನ್ನ ಪ್ರಾಣವೂ ಹೋಗಲೂ ಬಹುದು, ನನ್ನ ಜೀವ ತ್ಯಾಗದಿಂದ, ಜನರಿಗೆ ಹಿಡಿಯಾದರೂ ನೆಮ್ಮದಿ ದೊರೆದೀತೆ!!!! ಹಾಗಾದಲ್ಲಿ ನನ್ನ ದಾರಿ ಯಾವ ಕಡೆಯದು, ಒಂದು ಕ್ಷಣ ಮೌನ....
                     ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ
                      ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ
                      ಸಂಭವಾಮಿ ಯುಗೆ ಯುಗೆ||

                   ಅಮ್ಮನ ಮುಂದೆ ಕೆಲಸ ಸಿಕ್ಕಿತೆಂದು ಹೇಳಿದಾಗ, ಹೆತ್ತ ಕರುಳಿಗಾದ ಖುಷಿ ಅಷ್ಟಿಷ್ಟಲ್ಲ. ರಾತ್ರಿಯಿಡೀ ನಿದ್ದೆ ಬರದೇ ಹಾಸಿಗೆಯಲ್ಲಿ ಒದ್ದಾಡಿದ, ಹಿಡಿಯಲಿದ್ದ ಹಾದಿ ತುಂಬಾ ಕಠಿಣವಾದ್ದು, ಅಮ್ಮನ ಬಿಟ್ಟು ಹೋಗಬೇಕಲ್ಲ, ಸಾವು ಬಂದರೆ ಹೇಗೆ ಬರಬಹುದು ಎಂದೆಲ್ಲಾ ನಿದ್ದೆಯ ಬಲಿಗೊಟ್ಟು ಆಲೋಚಿಸಿದ, ಮನಸ್ಸನ್ನು ಬಂಡೆ ಮಾಡಿಕೊಂಡು……
                   ಅದು ಎಲ್ಲಾ ಸಂಘಟನೆಯೇ.  ಬಂದೂಕಿನ ಮಂತ್ರ ಪಠಿಸುತಿದ್ದ ಗುಂಪೆಂದು ಹೇಳಬಹುದು ತುಂಬಾ ಸದಸ್ಯರೇನಿರಲಿಲ್ಲ. ವಿರಳ ಅತೀ ವಿರಳ ಸದಸ್ಯರಿದ್ದಿರಬೇಕು. ಕುದಿ ರಕುತದ ಹಾಗೂ ಉಳ್ಳವರ ತುಳಿತಕ್ಕೆ ಸಿಕ್ಕು ನೊಂದ ಯುವಕ ಯುವತಿಯರಿದ್ದರು, ಅಲ್ಲಿ ತಾನೂ ಒಬ್ಬ ಸದಸ್ಯನಾಗಿ ಸೇರಿಕೊಂಡ, ಅದರ ನಾಯಕ ಶಿವಲಿಂಗೂ ಪೋಲಿಸರ ಕೈಗೆ ಸಿಕ್ಕು ಜೈಲಿನಲ್ಲಿದ್ದ. ಈಗ ತಂಡದ ಮುಂದಾಳಾಗಿ ಶೇಖರ್ ಅಲಿಯಾಸ್ ಕಮ್ಯಾಂಡರ್ ಶೇಖರ್, ಹಾಗೂ ಮಹಿಳಾ ಕಮ್ಯಾಂಡರ್ ಆಗಿ ನಾಗಲಕ್ಷ್ಮಿ ಇದ್ದರು. ಸುಮಾರು ಮೂವತ್ತು ಮುವತ್ತೆರಡು ಜನರಿನ್ನು  ಹತ್ತು ಜನಗಳಿಗೊಂದರಂತೆ ಮೂರು ತಂಡಗಳನ್ನಾಗಿ ಮಾಡಿ ಯಾರೂ ಪತ್ತೆ ಮಾಡಲಾಗದಂತ  ಜಾಗ ಅಂದರೆ ಪಶ್ಚಿಮ ಘಟ್ಟದ ಕಾಡುಗಳಿಗೆ ಕಳಿಸಿದರು. ಮಂಜು ಇದ್ದದ್ದೂ ಅದೇ ಗುಂಪಿನಲ್ಲೇ.
   
                 ಎಲ್ಲರಿಗೂ ದೇಸಿ ನಿರ್ಮಿತ ಅಂದರೆ ನಾಡ ಬಂದೂಕುಗಳ ಗೈಗಿತ್ತು, ಟ್ರೈನಿಂಗು ಕೊಡ ಹತ್ತಿದರು. ಮಂಜುವು ಬಹಳ ಬೇಗ ವಾತಾವರಣಾಕ್ಕೆ ಒಗ್ಗಿದ್ದನು. ಸುತ್ತಮುತ್ತಲಿನ ಜಮೀನ್ದಾರರ ಬಳಿ ಅವರಲ್ಲಿ ಹೇರಳವಿದ್ದ ಭೂವಿಯನ್ನು ನಿರಾಶ್ರಿತರ ಹೆಸರಿಗೆ ಹೆದರಿಸಿ ವರ್ಗಾಯಿಸುವುದು, ಒಂದಿಷ್ಟು ದಿನಗಳಿಗಾಗುವಷ್ಟು ಆಹಾರ ದೋಚುವುದು ಮಾಡಿದರು. ಅಲ್ಲಲ್ಲಿ ವ್ಯವಸ್ಥೆಯ ವಿರುದ್ಧದ ಕರ ಪತ್ರಗಳನ್ನು ಹಂಚಿ ಹೋಗುತಿದ್ದರು. ಪೋಲಿಸರಿಗೆ ಇವರ ಬಗ್ಗೆ ಹೇಗೋ ಮಾಹಿತಿ ಸಿಕ್ಕು ಒಂದು ಗುಂಪಿನ ಐದು ಜನ ಸದಸ್ಯರನ್ನು ಭಯಂಕರವಾಗಿ ಹತ್ಯಗೈದಿದ್ದರು ಹಾಗೂ ಸುಳಿವು ಕೊಟ್ಟವರಿಗೆ ಎರಡು ಲಕ್ಷಗಳ ಬಹುಮಾನವನ್ನೂ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಅಲ್ಲಿಯದೇ ಪೋಲಿಸ್ ಠಾಣೆಯ ಮೇಲೆ ನಾಡ ಗ್ರೇನೆಡ್ ನಿಂದ ಧಾಳಿ ಮಾಡಿ ಇಬ್ಬರು ಪೋಲಿಸ್ ಪೇದೆಗಳು ಸತ್ತಿದ್ದರು, ಅಲ್ಲದೇ ಠಾಣೆಯಲ್ಲಿದ್ದ ಬಂದೂಕುಗಳನ್ನು ಲೂಟಿ ಮಾಡಿದ್ದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನಕ್ಸಲ್ ನಿಗ್ರಹದಳವೆಂಬ ಪರಿಣಿತ ಪೋಲಿಸರನ್ನು ಬಿಟ್ಟಿದ್ದರು.

                 ಹಳೆಯ ನೆನಪುಗಳ ಝೊಂಪಿನಲ್ಲಿದ್ದ ಮಂಜು ತಟ್ಟನೇ ಎಚ್ಚರವಾದ, ಇನ್ನೇನು ಬೆಳಕು ಮೂಡುತಿತ್ತು ಅಂದರೆ ಕತ್ತಲಿನ್ನೂ ಪೂರ್ಣವಾಗಿ ಆರಿರಲಿಲ್ಲ. ಸುಮಾರು ದೂರದಲ್ಯಾರೋ ಒಂದಿಷ್ಟು ಜನ ಇತ್ತ ಕಡೆಯೇ ಬರುತ್ತಿರುವಂತಿದೆ. ಎಲ್ಲರನ್ನೂ ಬಡಿದೆಬ್ಬಿಸಿದ, ನಿದ್ದೆ ಮಬ್ಬಿನಲ್ಲಿದ್ದವರೆಲ್ಲಾ ಬಂದೂಕುಗಳಿಗೆ ಗುಂಡುಗಳಿಗಾಗಿ ತಡಕಾಡುತಿದ್ದಾಗ. ಅತ್ತಕಡೆಯಿಂದ ಬಂದ ಗುಂಡು ಎದೆ ಸೀಳಿ ಹೋ ಎಂದು ಚೀರಿದ ಸದ್ದು ಹಕ್ಕಿಗಳೆಲ್ಲಾ ಸದ್ದಿಗೆ ಹಾರಿದವು. ಇತ್ತ ಕಡೆಯಿಂದಲೂ ಗುಂಡು ಹಾರಿಸಲು ಶುರುವಿಟ್ಟರು. ಮಂಜುವಿಗೆ ಏನೂ ಹೊಳೆಯದೇ ತಾನೂ ಬಂದೂಕು ಕೈಗೆತ್ತಿಕೊಂಡ. ಆಷ್ಟರಲ್ಲೊಂದು ಗುಂಡು ಎದೆ ಹೊಕ್ಕಿತ್ತು, ತಲೆ ಬಗ್ಗಿಸಿಕೊಂಡು ನೋಡಿದರೆ ರಕ್ತ ಚಿಮ್ಮುತ್ತಿದೆ. ತಾಳಲಾರದಷ್ಟು ನೋವಿಗೆ ಒಮ್ಮೆಲೇ ಕೂಗಿ ನೆಲಕ್ಕೆ ಕುಸಿದುಬಿಟ್ಟ.
ಕಣ್ಣಿಗೆ ರಾಚುವಷ್ಟು ಬೆಳಕಿದೆ ಮರು ಭೂಮಿಯಂತಾ ಭೂಮಿ. ಅಮ್ಮನ ಹಣೆಯಲ್ಲಿ ರಕ್ತ ಸುರಿಯುತ್ತಿದೆ, ಯಾರೋ ಒಬ್ಬ ಖಾದಿ ತೊಟ್ಟವ, ಇನ್ನೊಬ್ಬ ಖಾಕಿ ತೊಟ್ಟವ ಬೂಟುಗಾಲಿಂದು ಕೈಯ ತುಳಿಯುತಿದ್ದಾರೆ. ಅಮ್ಮ ಕಾಪಾಡಿರೆಂದು ಸಹಾಯಕ್ಕಾಗಿ ಕೂಗುತಿದ್ದಾಳೆ, ಮೇಲೆ ನಾಲ್ಕೈದು ಹಣ ಹದ್ದುಗಳು ಹಾರುತ್ತಿವೆ….. ಕೊನೆ ಸದ್ದು ಅಮ್ಮ ಎಂದಿದ್ದೇ ಪ್ರಾಣ ಹಾರಿ ಹೋಗಿತ್ತು.                   

1 comment:

  1. ಬಂದೂಕುಗಳಿಂದ ಎಂದೂ ಶಾಂತಿ ಪಾರಿವಾಳಗಳು ಹಾರಲಾರವು.

    ReplyDelete

ಅನ್ಸಿದ್ ಬರೀರಿ