ರಾತ್ರಿ ಪಾಳಿಯ ಕವಿತೆ

ಅಂದು ತುಂಬು ಚಂದಿರ
ರಾತ್ರಿಯಲ್ಲಿ ಸುಖಾಸುಮ್ಮನೇ
ತೇಲುತಿದ್ದ
ತಂಪುಗಾಳಿಯೂ ಅಲ್ಲಿಂದಿಲ್ಲಿಗೇ
ವಿಹರಿಸುತಿತ್ತು
ಗೂಬೆ ಸದ್ದಿರಬೇಕು
ಭಯಕೆ ಕಾಲಿನ ನಡುಕ,
ಒಣಗಿದೆಲೆ ಮಗ್ಗಲು ಬದಲಿಸುತ್ತಲೇ ಇತ್ತು
ಸೆಕೆಗೋ ಅಥವಾ ನಿದ್ದೆ ಬರದ್ದಕ್ಕೋ!!

ಎದುರು ಮನೆಯ ಐನಾರಪ್ಪ
ಗ್ಯಾಸು ಟ್ರಬಲ್ಲಿಗೋ ಏನೋ
ಅಂಡೆತ್ತಿ ಬಿಟ್ಟದ್ದೂ
ಓಣಿಯವರಿಗೆಲ್ಲಾ ಕೇಳುವಂತಿತ್ತು,
ಹಾಗೇ ಗಂಡನೂಸಿಗೆ
ಐನಾರಮ್ಮ ಕಿಸುಕ್ಕನೆ
ನಕ್ಕದ್ದು!!!!!

ಮೂರು ಹೆಣ್ಮಕ್ಕಳ ಸಾಕಲಿಕ್ಕೆ
ದಿನಸಿ ಅಂಗಡಿ ಶೆಟ್ಟಿಗೆ
ಸೆರಗು ಹಾಸುತಿದ್ದ ಕುಸುಮಿ,
ಮನ್ಮಥ ಬಂದನೆಂದು
ಬಾಗಿಲು ತೆರೆದ ಸದ್ದಿಗೇ
ಮೂಲೆಯಲಿ ಮಲಗಿದ್ದ
ಬಡಕಲು ನಾಯಿ ಬೆಚ್ಚಿ ಬಿತ್ತು!!!

ಮತ್ತದೇ ಫ್ಯಾನಿನ ಗಿರಕಿ
ಹೊಸ ಕನಸಿನ ಎಳಸಿದ್ದ ನಿದಿರೆ
ಮುಗಿದಿತ್ತು ರಾತ್ರಿ....

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ