ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, May 9, 2012

ಬಯಲ ಹುಡಿ(ಗಿ)

ಸುಡುತಿದ್ದ ಸೂರ್ಯನೆಡೆಗೆ
ಮೈಯೊಡ್ಡಿ ನಿಂತಿದ್ದಳು
ಇದ್ದ ತುಂಡು ಹಸಿರು ಬಟ್ಟೆಯನ್ನೂ
ನಾಲ್ಕು ಜನ ಸೇರಿ ಕಿತ್ತೆಸೆದಿದ್ದರು
ಮೈಮೇಲೆ ಹಾರಿ ಪರಚಿದವರೆಷ್ಟೋ
ಹಲ್ಕಿರಿದು ನಕ್ಕು ನಾಲಿಗೆ
ಚಪ್ಪರಿಸಿದವರೆಷ್ಟೋ!!!!
ಕೂಗಿಕೊಂಡರೂ ಕೇಳುವವರಿಲ್ಲ
ಕಣ್ಣಿದ್ದೂ ಕುರುಡಾದವರೆಲ್ಲ....
ಜೊಲ್ಲು ಸುರಿಸುತ ನಿಂತಿದ್ದರೇ
ಹೊರತು ಕೈ ಹಿಡಿಯುವವರಿರಲಿಲ್ಲ
ಸುರಿಯುತಿದ್ದ ಕಣ್ಣೀರು
ಆವಿಯಾಗುತಿತ್ತು ಬಿಸಿಲಿಗೆ
ಆಕೆ ಹೆಣ್ಣು ಇನ್ನೇನು ಮಾಡಿಯಾಳು
ಮುಖ ಮಾಡಿ ನಿಂತಳು ಮುಗಿಲಿಗೆ....
ಸಾಯುತಿದ್ದಾಳೆ ಆಕೆ
ಬಿಸಿಲಿಗೆ ಬೇಯುತಿದ್ದಾಳೆ

(ನನ್ನ ಬಳ್ಳಾರಿ, ಗಣಿ ಧಣಿಗಳೆಂಬ ಕ್ರೂರಿಗಳ ಕೈಗೆ ಸಿಕ್ಕು ಅತ್ಯಾಚಾರವಾಗಿ ನಲುಗಿಗೆ, ರೆಡ್ಡಿ ಚಡ್ಡಿಗಳೆಂಬ ರಾಕ್ಷಸರ ಕೈಯಲ್ಲಿ ಮರುಭೂಮಿಯಾಗಿದೆ, ಅಲ್ಲಿನ ಜನಗಳ ನಾಲಿಗೆ ಬಿದ್ದು ಹೋಗಿ ಮಾತಿಲ್ಲದಂತಾಗಿದೆ.... ಆಕೆಯ ಕೂಗಿನ ದನಿ ಈ ಕವನ )

No comments:

Post a Comment

ಅನ್ಸಿದ್ ಬರೀರಿ