ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, March 3, 2012

ಹೀಗೊಂದು ಹಗಲುಗನಸು


ಉಸ್ಸಪ್ಪಾ!!! ಯಾವ್ ಸೀಮೆ ಕಾಲೇಜ್ ದೇವ್ರು, ಬೆಳಿಗ್ಗೆಯಿಂದ ಬೆಂಚ್ ಮೇಲೆ ಅಂಡು ಊರಿದೋರು ನಡುವೆ ಊಟಕ್ಕೆ ಉಚ್ಚೆಗೆ ಎದ್ದಿದ್ದು ಬಿಟ್ಟರೆ ಸಾಯಂಕಾಲವೇ ಎದ್ದಿದ್ದು, ಸಾಫ್ಟುವೇರು ಅದು ಇದು ಅಂತ ಕ್ಲಾಸಿನಲ್ಲಿ ಕೇಳಿ ಕೇಳಿ ತಲೆ ಗಿರಗಿಟ್ಲೆ ಹೊಡಿತಿತ್ತು, ಓದೋಕಂತ ಬೆಂಗಳೂರಿಗೆ ಅಪ್ಪ ದಬ್ಬಿದ್ದರು, ನಾನೂ ಕೂಡ ಸಾಫ್ಟ್ವೇರಲ್ಲಿ ಕಡೆದು ಗುಡ್ಡೆ ಹಾಕುವ ಕನಸು ಹೊತ್ತು ಬೆಂಗ್ಳೂರೆಂಬ ಮಾಯಾನಗರಿಯ ಒಡಲು ಸೇರಿದ್ದೆ. ಸಂಜೆ ಹೊತ್ತಾಗುತ್ತಿದ್ದರು ಬಿಸಿಲು ಚುರ್ರ್ ಅನ್ನುವಂತಿತ್ತು, ಎಮ್.ಸಿ.ಎ ಸೇರಿದ್ದಕ್ಕೊ, ಸಬ್ಜೆಕ್ಟು ತಲೆಗೆ ಹತ್ತದಿದ್ದಕ್ಕೊ, ಅಥವಾ ಬಿಸಿಲು ಚುರ್ರ್ ಅನ್ನುತ್ತಿದ್ದಕ್ಕೊ ಏನೋ ಒಂಥರಾ ಬೇಜಾರಾಗಿ ರೂಮು ಹೊಕ್ಕಿದೆ. ಮಂಚದ ತುಂಬ ಕಸದಂತೆ ಬಟ್ಟೆಗಳು, ಓದದಿದ್ದರೂ ಹರಡಿದ್ದ ಪುಸ್ತಕಗಳು, ಇನ್ನೂ ಕುಯ್ಯೊ ಮರ್ರೋ ಎಂದು ಸದ್ದು ಹೊರಡಿಸುತ್ತಾ ತಿರುಗುತಿದ್ದ ಫ್ಯಾನು ಮೂಡು ಇನ್ನೂ ಆಫ್ ಆಗಲು ಇಷ್ಟು ಸಾಕಲ್ಲವೇ!!!!
ಗೋಡೆಗೊರಗಿ ಹಂಗೆ ಸ್ವಲ್ಪ ರಿಲೀಫ್ ಗೆಂದು ಕಣ್ಣು ಮುಚ್ಚಿದೆ, ಮನಸ್ಸು ಎಲ್ಲೆಲ್ಲೋ ಓಡುತ್ತಿದೆ, ಸೂರ್ಯನ ಬೆಳಕಿಗಿಂತ ವೇಗವಾಗಿ!!!!!!

ಅದೆಷ್ಟೋ ದೂರ ಬಂದಿದ್ದೇನೆ, ರೆಕ್ಕೆ ಇಲ್ಲದೇ ಹಾರುತ್ತಿದ್ದೇನೆ.... ಕಣ್ಣಿಗೆಟುಕಿದ ದೂರಕ್ಕೆ ದೃಷ್ಠಿ ಹಾಯಿಸಿದಷ್ಟು ಚೂರೇ ಚೂರು ಹಸುರು ಕಾಣ ಸಿಗುತ್ತಿಲ್ಲ, ಬರಡು ಭೂಮಿ ಬಾಯ್ತೆರೆದು ಬೆಂಕಿಯುಗುಳಿದ ಹಾಗೆನಿಸುತ್ತಿದೆ, ಹಾವು ಬುಸುಗುಡುವ ಸದ್ದು ಬಿಸಿ ಗಾಳಿಯೊರಡಿಸುತ್ತಿದೆ. ಅಲ್ಲೆಲ್ಲೋ ಮನುಷ್ಯಾಕೃತಿಯಂತಿದೆಯಲ್ಲ ನೋಡುವ ಮಾತಾಡಿಸುವ ಹಂಬಲಕೆ ಮನಸ್ಸಿನ ಬೆಂಬಲ ಪಡೆದು ನೆಲದ ಮೇಲಿಳಿದೆ, ಅರೆ ಏನಿದು? ನನ್ನದೇ ನೆರಳೂ ಇಲ್ಲವಲ್ಲ, ಹೋ! ಬಿಸಿ ನೆಲದ ಭಯಕೆ ಹೆದರಿ ಓಡಿರಬೇಕು, ನೆರಳೇ ನೆಲಕಿಳಿಯಲು ಭಯಪಟ್ಟು ಓಟ ಕಿತ್ತಿರುವಾಗ ಯಾವ ಪುಣ್ಯಾತ್ಮ ಇಲ್ಲಿ ಬದುಕುತ್ತಿರುವುದು ನೋಡುವ ಕಾತರ ಇನ್ನೂ ಇನ್ನಷ್ಟು ಹೆಚ್ಚಾಗದೇ ಇರಲಿಲ್ಲ. ದೂರದಲ್ಲೆಲ್ಲೋ ರೊಟ್ಟಿ ಹೆಂಚಿನಂತಿರಬಹುದಾದ ಕಲ್ಬಂಡೆಯ ಮೇಲೆ ಕುಳಿತಿದ್ದಾನೆ. ಅವನೆಡೆಗೆ ಹಾಕಿದ ಹೆಜ್ಜೆಗಳಿಗೆ ಪಾದಗಳು ನುಸಿ ಮಣ್ಣಂತಿದ್ದ ಭೂಮಿಯೊಳಕ್ಕಿಳಿಯುತ್ತಿವೆ. ಪ್ರಯತ್ನಿಸಿದಷ್ಟೂ ಒಳಕ್ಕೆಳೆಯುತ್ತಿದೆ, ಕತ್ತೆತ್ತಿ ಮೇಲೆ ನೋಡಿದರೆ ರಣ ಹದ್ದುಗಳು ಸುತ್ತು ಹಾಕುತ್ತಿವೆ. ಕೂಗುತ್ತಿದ್ದರೂ ದ್ವನಿ ಹೊರಡುತ್ತಲೇ ಇಲ್ಲವಲ್ಲ, ಇಷ್ಟೆಲ್ಲ ಆದರೂ ಆ ಮನುಷ್ಯಾಕೃತಿ ಚೂರೂ ಅಲುಗಾಡುತ್ತಿಲ್ಲ, ಹಾಗೂ ಹೀಗೂ ಆತನಿಗೆ ಸಮೀಪನಾದೆ, ಮಬ್ಬು ಮಬ್ಬಾಗಿದ್ದ ನೋಟ ಹತ್ತಿರತ್ತಿರವಾದಷ್ಟು ನಿಚ್ಚಳವಾಗಹತ್ತಿತ್ತು, ಅಂತೂ ಇಂತೂ ಆತನಲ್ಲಿಗೆ ಬಂದೇ ಬಿಟ್ಟೆ. ಆತನ ಮುಂದೆ ನಿಂತಿದ್ದೇನೆ ಭಯದಿಂದಲೂ ಕಾತರದಿಂದಲೂ......

ಅಬ್ಬಾ!!! ಬೆಂಕಿ ಕಣ್ಣಲ್ಲೇ ತುಂಬಿಕೊಂಡವನಂತಿದ್ದಾನೆ, ಚರ್ಮ ಸ್ವಲ್ಪ ಸುಕ್ಕುಗಟ್ಟಿದ್ದರೂ ಬೆನ್ನು ಬಾಗಿರಲಿಲ್ಲ, ಒಂದಕ್ಕೊಂದು ಅಂಟಿದ ಕಂದು ಕೂದಲು, ಕೊರಳಲ್ಲಿ ಮೂಳೆಗಳ ಸೇರಿಸಿ ಮಾಡಿದ ಹಾರ, ಮೇಲಿಂದ ಕೆಳವರೆಗೂ ಕಪ್ಪನೆಯ ಬಟ್ಟೆ, ಕೈಯಲ್ಲಿ ಉದ್ದನೆಯ ಸರ್ಪದಂತಿದ್ದ ದಂಡ. ಸಾಮಾನ್ಯನಾದ ನಾನು ಅಸಮಾನ್ಯನಂತಿದ್ದ ಆತನೆದುರಿಗೆ ಕಾಲು ನಡುಗುತಿದ್ದರೂ ನಿಂತಿದ್ದೆ, ಆತನ ಕೈಯಲ್ಲಿ ಉದ್ದಗೆ ಹುಲಿ ಉಗುರುಗಳು ದುರುಗುಟ್ಟಿ ನನ್ನೆಡೆಗೆ ನೋಡುತ್ತಿದ್ದರೆ ಹೃದಯದ ಬಡಿತ ದುಪ್ಪಟ್ಟಾಗದೇ ಇದ್ದೀತೆ. ಗಂಟು ಬಿದ್ದಿದ್ದರೂ ಕೂದಲುಗಳು ಗಾಳಿಗೆ ಹಾರಿ ಆತ ನೋಡುತ್ತಿದ್ದ ದಿಕ್ಕೆಡೆಗೆ ಬೆರಳು ಮಾಡಿದ್ದವು. ಸುಳಿ ಕಟ್ಟಿಕೊಂಡು ಬೀಸುತ್ತಿದ್ದ ಗಾಳಿಯ ಸದ್ದಿನ ಹೊರತು ನಿಶ್ಯಬ್ದದ ಮೃದಂಗ.
ತುಸು ಹೊತ್ತಿನ ನಂತರ ಎದ್ದವನೇ ನೋಟ ಬೀರದ್ದ ದಿಕ್ಕಿನೆಡೆಗೆ ಉದ್ದುದ್ದ ಹೆಜ್ಜೆಗಳನಿಕ್ಕಿ ಹೋಗುತಿದ್ದಾನೆ, ನಾನು ಏನನ್ನೂ ಮಾತನಾಡದೇ ಆ ಆಕೃತಿಯನ್ನೇ ಹಿಂಬಾಲಿಸುತ್ತಿದ್ದೇನೆ. ತುಸುಗಾವುದ ದೂರವ ಹೊಕ್ಕಿದ ನಂತರ........ ಕಣ್ಣಿಗೆ ರಾಚುವಷ್ಟು ಬೆಳಕು ಹೊಮ್ಮುತಿತ್ತು ಸೂರ್ಯನಿಗೇ ಸವಾಲೊಡ್ಡುವಂತೆ, ಪ್ರಖಂಡ ಬೆಳಕೊಳಗೆ ಕಪ್ಪು ಚುಕ್ಕೆ ಹೊಕ್ಕಂತೆ ಆತ ಹಿಂದೆ ಮುಂದೆ ನೋಡದೆ ನುಗ್ಗೇಬಿಟ್ಟ ಸದ್ದಿಲ್ಲದೇ!!!! ಆತನನ್ನು ನಿಲ್ಲಿಸಲು ಬಾಯ್ತೆರೆದು ಕೂಗಲೆತ್ನಿಸಿದೆನಾದರೂ ಸದ್ದು ಶೂನ್ಯ. ನನಗರಿವಿಲ್ಲದಂತೆ ಆ ಬೆಳಕಿನೆಡೆಗೆ ನಡೆಯುತ್ತಿದ್ದೇನೆ. ಏನಾದೇನೆಂಬ ಪರಿವಿಲ್ಲದೆಯೇ!!! ನೋಡು ನೋಡುತ್ತಿದ್ದಂತೆ ಅದರಾಂತರ್ಯ ಹೊಕ್ಕೆ, ಸುತ್ತೆಲೆಲ್ಲೆಲ್ಲೂ ಆ ಅಸಮಾನ್ಯನನ್ನು ಕಾಣುವ ಸಲುವಾಗಿ ತಡಕಾಡಿದೆ ಬೆಳಕು ಕಣ್ಣುಗಳ ತೆರೆಯದಂತೆ ಮುಚ್ಚಿಸುತಿತ್ತು.


ಸ್ವಲ್ಪ ಹೊತ್ತು ಸುಮ್ಮನೇ ನಿಂತಿದ್ದೆ, ಇದ್ದಕ್ಕಿದ್ದಂತೆ ನೆಲದೊಳಗಿಂದ ಬಂದ ಕೊಳೆತ ಕೈಗಳು ನನ್ನ ಕಾಲೆಳೆಯುತ್ತಿವೆ!!!!! ನಾನು ಭಯಭೀತನಾಗಿ ಗಂಟಲು ಕಿತ್ತು ಬರುವಂತೆ ಚೀರುತಿದ್ದೇನೆ!! ತಲೆ ಮೇಲೆ ಯಾರೋ ಹೊಡೆದಂತಾಯ್ತು, ಎಚ್ಚರವಾಯ್ತು ಕಣ್ತೆರೆದು ನೋಡಿದರೆ "ಲೇ ಎದ್ದೇಳೋ ಕಾಫಿ ಕುಡಿಯೋಕ್ ಹೋಗೋಣ" ಅಂತ ಮನು ನನ್ನನ್ನು ಆ ಲೋಕದಿಂದ ಹೊರಗೆಳೆದು ಬಿಟ್ಟ ಛೇ!!!!
ಹಗಲಲ್ಲಿ ಕಂಡ ಈ ಭಯಾನಕ ಕನಸು ಭವಿಷ್ಯವೇ, ಭಯಭೀತ ಮನಸ್ಸಿನ ಕನ್ನಡಿಯೋ, ಹಿಡಿತವಿಲ್ಲದ ಕನಸುಗಳ ಕುಣಿತವೋ ತಿಳಿಯದೇ ಕೆದರಿದ್ದ ಕೂದಲುಗಳ ಸರಿ ಮಾಡಿಕೊಳ್ಳುತ್ತಾ ಚಹಾ ಅಂಗಡಿಯ ಕಡೆ ಹೆಜ್ಜೆ ಹಾಕಿದೆವು, ನಾನು ಸ್ವಲ್ಪ ಮಂಕಾಗಿದ್ದಕ್ಕೆ "ಯಾಕೋ ಮಗಾ ಏನಾಯ್ತು ಸೈಲೆಂಟ್ ಆಗಿದಿಯ", ಕಾರಣವೇನಾದರು ಹೇಳಿದ್ದರೆ ನಗದೇ ಇರುತ್ತಿರಲಿಲ್ಲ.

2 comments:

 1. ಸೂಪರ್ ಪ್ರವರ..
  ಬಹಳ ಚಂದದ ನಿರೂಪಣೆ..... ಓದುತ್ತ ಹೋದಂತೆ ಅಪ್ಯಾಯಮಾನವಾಗುತ್ತದೆ ...
  ಆ ಪದಗಳನ್ನು ಒಂದಕ್ಕೊಂದು ನೀವು ಬೆಸೆದ ರೀತಿ ಅದ್ಭುತ....
  ಹಗಲುಗನಸಿನ ಕತೆ ಇಷ್ಟವಾಯ್ತು....

  ReplyDelete
 2. ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು,,,,,,,

  ReplyDelete

ಅನ್ಸಿದ್ ಬರೀರಿ