ನಾವೇಕೆ ಕಿವುಡರಾಗಿದ್ದೇವೆ!!!

ಗಂಟಲು ಹರಿಯುವಂತೆ
ಕೂಗಿದರೂ ಯಾರೊಬ್ಬರಿಗೂ
ಕೇಳಿಸುತ್ತಿಲ್ಲ,
ಮಳೆ ಸುರಿಸಲೆಂದು
ಕಪ್ಪಿಟ್ಟಿದ್ದ ಮೋಡಗಳೇ
ಕೂಗಿಗೆ ಓಗೊಟ್ಟಿ ಚದುರಿರುವಾಗ
ನಾವೇಕೆ ಕಿವುಡರಾಗಿದ್ದೇವೆ!!!
ಮಸಣದಲಿ ಘೋರಿಗಳೊಳಗೆ
ಮಲಗಿದವರೆಲ್ಲಾ ಎಚ್ಚರವಾಗಿ
ಎದ್ದು ಕೂತಿರುವಾಗ,
ನಾವಿನ್ನು ಬದುಕಿದ್ದೇವೆ
ನಾವೇಕೆ ಕಿವುಡರಾಗಿದ್ದೇವೆ!!!!
ನೂರುಗಾವುದ ದೂರದ
ನೀಲಿ ಸಾಗರಕೆ ಕೇಳಿಸಿದೆಯಲ್ಲ
ಅದಕೆ ಕಳಿಸುತಿದೆ ಅಲೆಗಳ
ಸದ್ದು ಬಂದ ದಿಕ್ಕಿನೆಡೆಗೆ,
ಸದ್ದು ನಮ್ಮ ಪಕ್ಕದಿಂದಲೇ ಬಂದಿದೆ
ಆದರೂ ನಾವೇಕೆ ಕಿವುಡರಾಗಿದ್ದೇವೆ!!!!
ಹಸಿದವರ ಕೂಗಿದೆ,ತುಳಿತಕೆ ಸಿಕ್ಕಿ
ಜಿನುಗುತಿಹ ರಕುತದ ಕೂಗಿದೆ,
ಹರಿದ ಚಿಂದಿ ಬಟ್ಟೆಯ ಕೂಗಿದೆ
ಆದರೂ, ನಮಗೆ ಕೇಳಿಸುತ್ತಿಲ್ಲ,
ಏಕೆಂದರೆ ನಾವು ಜಾಣ ಕಿವುಡರು.....
Comments
Post a Comment
ಅನ್ಸಿದ್ ಬರೀರಿ