’ಲವ್ ಯು ಅಪ್ಪ’



ಸಂಜೆ ನಾಲ್ಕರ ಗಡಿ ದಾಟಿತ್ತು, ಲಗೇಜನ್ನೆಲ್ಲಾ ಹೊತ್ತು ಸಿಟಿ ಬಸ್ಸು ಹತ್ತಿ ಕಿಟಕಿ ಪಕ್ಕ ಕುಳಿತೆ, ಬಿಸಿಲು ಇನ್ನು ಚುರುಗುಟ್ಟಿಸುತಿತ್ತು. ಸ್ವಲ್ಪ ದೂರ ಬಸ್ಸು ಸಾಗುತ್ತಿದ್ದಂತೆ ಮೋಡ-ಮೋಡಗಳೆಲ್ಲ ಕೂಡಿ ಬಸುರಿಯಾದ ಆಕಾಶ ಚಿಟ-ಪಟ ಎಂದು ಹನಿಯುದುರಿಸತೊಡಗಿತು. ಟ್ರ್ಯಾಫಿಕ್ಕಿನಲ್ಲಿ ಸುಸ್ತಾಗಿ ನಿಂತ ಬಸ್ಸು, ಕುಯ್ಯೋ ಮರ್ರೋ ಎಂದು ಹಾರನ್ ಹಾಕುತಿದ್ದ ಗಾಡಿಗಳು, ಹಾಗೆ ತೂಕಡಿಕೆಯಿಂದೆದ್ದ ನಾನು ಪಕ್ಕಕ್ಕೆ ಕಣ್ಣು ಹಾಯಿಸಿದೆ.... ಬೈಕಿನಲ್ಲಿ ಮಗು ರೇನ್ ಕೋಟ್ ಹಾಕಿ ಅಪ್ಪನನ್ನು ಗಟ್ಟಿಯಾಗಿ ತಬ್ಬಿ ನಿದ್ದೆಗೆ ಜಾರಿತ್ತು, ಅದನ್ನೇ ನೋಡುತ್ತಾ, ಏನೋ ನೆನಪಾಗಿ ಕಣ್ಣು ಹಸಿಯಾಗ ಹತ್ತಿತು......
ಸುಮಾರು ಹನ್ನೆರಡನೇ ವಯಸ್ಸು, ಗೋಲಿ ಆಡಲು ಹೋಗಿ ಸಂಜೆ ಮನೆ ಸೇರಿದ್ದೆ. ಮುಂಜಾನೆಯಿಂದ ನನ್ನೇ ಹುಡುಕಿದ್ದ ಅಪ್ಪನಿಗೆ ಸಿಟ್ಟು ಬಂದು ಕಪಾಳಕ್ಕೆ ಬಾರಿಸಿದರು, ಅಳುತ್ತಾ ರೂಮು ಸೇರಿ ಸುಮ್ಮನೇ ಮಲಗಿದೆ. ಅಮ್ಮ ಊಟ ಮಾಡಿಸಲು ಚಿನ್ನ ರನ್ನ ಎಂದು ಒತ್ತಾಯಿಸಿದರೂ ಮೌನ ಕೋಪಿಯಾಗಿ ಸುಮ್ಮನೇ ಹೊದ್ದು ಹಾಗೆ ಮಲಗಿದ್ದೆ, ಅಪ್ಪ ಬಂದವರೆ ಎದೆಗವಚಿಕೊಂಡು ಅಡುಗೆ ಮನೆಗೆ ಕರೆದುಕೊಂಡು ಹೋಗಿ ತುತ್ತು ಮಾಡಿ ಬಲೂ ಪ್ರೀತಿಯಿಂದ ತಿನ್ನಿಸಿದರು, ಒಮ್ಮೆಲೇ ಜೋರಾಗಿ ಅಳು ಬಂದು ಅಪ್ಪನ್ನ ತಬ್ಬಿಕೊಂಡು ಅತ್ತುಬಿಟ್ಟೆ. ಸಮಾಧಾನ ಮಾಡುತ್ತಾ ಹಣೆಗೆ ಕೊಟ್ಟ ಮುದ್ದು ಇನ್ನೂ ನೆನಪಿದೆ.
ಅಮ್ಮನದು ಒಂದು ತರಹದ ಪ್ರೀತಿಯಾದರೆ, ಅಪ್ಪನದು ಕರಡೀ ಪ್ರೀತಿ..... ’ಲವ್ ಯು ಅಪ್ಪ’... ಎಲ್ಲರಿಗೂ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ವಿವೇಕಾನಂದ ರಂತವರು ಮಾದರಿಯಾದರೆ, ನನಗೆ ನನ್ನಪ್ಪ. ಆತನೇ ನನ್ನ ಜೇಮ್ಸ್ ಬಾಂಡ್, ಚೇ ಗುವೆರಾ ಎಲ್ಲ. ಸಿಟ್ಟು ಮೂಗಿನ ತುದಿಯಲ್ಲೇ ಇರುತಿತ್ತು ಆದರೂ ಒಂಥರಾ ಚೆಂದ!
ಅಪ್ಪ ದಿನ ವಾಕಿಂಗ್ ಹೋಗುವಾಗ ನನ್ನನ್ನೂ ಜೊತೆ ಕರೆದೊಯ್ಯುತಿತ್ತು, ಕಲ್ಲೆಡವಿ ಬಿದ್ದೊಡನೆ ಕೈ ಹಿಡಿದು ಮತ್ತೆ ನಡೆಸುತಿತ್ತು, ಮಾತು ಕತೆಯೂ ನಡೆಯುತ್ತಿತ್ತು. ಕಾಲಿನ ಮೇಲೆ ಕೂಡ್ರಿಸಿಕೊಂಡು ಆಡಿಸುತಿದ್ದ ಆಟವಿನ್ನೂ ನೆನಪಾರಿಲ್ಲ. ನಾ ಬಿಡಿಸುತ್ತಿದ್ದ ಚಿತ್ರಕ್ಕೆ ಬೆನ್ನು ತಟ್ಟಿ ಮತ್ತೆ ಬಿಡುಸಲು ಹುರುಪೀಯುತಿತ್ತು. ಕಾಲೇಜಿನಿಂದ ಮಳೆಯಲ್ಲಿ ನೆನೆದು ಬಂದರೆ ಸಾಕು, ಬಿಸಿ ಬಿಸಿ ಚಹಾ ಮಾಡಿ ಕೊಡುತಿತ್ತು.
ಮನಸ್ಸಿಗೆ ಬೇಜಾರಾದಾಗ ಅಪ್ಪನ ಸಮಾಧಾನದ ಮಾತುಗಳೇ ಡಾಕ್ಟರ್ ಥರ ವಾಸಿ ಮಾಡುತ್ತವೆ. ’ಅಪ್ಪ ಲವ್ ಯು ಸೋ ಮಚ್’

Comments

  1. ಅಪ್ಪನ 'ಗಡಸು' ಪ್ರೀತಿಯ ನೆನಪಿನ ಸಾಲುಗಳು ಚೆನ್ನಾಗಿ ಮೂಡಿ ಬ೦ದಿವೆ. ಅಭಿನ೦ದನೆಗಳು.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ